Shocking Incident:ಪಾರ್ಸೆಲ್‌ನಲ್ಲಿ ಮನೆ ಬಾಗಿಲಿಗೆ ಬಂತು ಮೃತದೇಹ: ಅಷ್ಟಕ್ಕೂ ಆಗಿದ್ದೇನು?
ಇತ್ತೀಚಿಗೆ ಆನ್ ಲೈನ್ ಆರ್ಡರ್‌ನಲ್ಲಿ, ಪಾರ್ಸೆಲ್‌ನಲ್ಲಿ ಬದಲಿ ವಸ್ತುಗಳು ಬರುವುದು ಸರ್ವೇ ಸಾಮಾನ್ಯವಾಗಿದೆ. ಆರ್ಡರ್ ಮಾಡಿದ ವಸ್ತುಗಳ ಬದಲಿಗೆ ಖಾಲಿ ಬಾಕ್ಸ್, ಹಳೆ ಬಟ್ಟೆ, ಕಲ್ಲುಗಳು ಸೇರಿದಂತೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಕಳುಹಿಸಿಕೊಟ್ಟಿರುವ ಅನೇಕ ಉದಾಹರಣೆಗಳನ್ನು ನೀವು ಕಾಣಬಹುದು. ಆದರೆ ಮನೆಗೆ ಬರಬೇಕಾದ ಪಾರ್ಸೆಲ್‌ನಲ್ಲಿ ತಾವು ಬಯಸಿದ ವಸ್ತುವಿನ ಬದಲು ಮನುಷ್ಯನ ಮೃತದೇಹ ಬಂದರೆ? ಊಹಿಸಿಕೊಳ್ಳಲೂ ಕೂಡ ಭಯವಾಗುತ್ತದೆ ಅಲ್ವಾ?. ಆದರೆ ಇಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಾರ್ಸೆಲ್ ಸ್ವೀಕರಿಸಿದ ಮನೆ ಮಂದಿ ಹೌಹಾರಿದ್ದಾರೆ. ಯಂಡಗುಂದಿ ಗ್ರಾಮದ ಮಹಿಳೆಯೊಬ್ಬರು ಮನೆ ಕಟ್ಟುತ್ತಿದ್ದು, ಮನೆಯಲ್ಲಿ ಕಷ್ಟವಿದ್ದ ಕಾರಣ ಧನ ಸಹಾಯಕ್ಕಾಗಿ ಸಂಸ್ಥೆಯೊಂದಕ್ಕೆ ಮನವಿ ಮಾಡಿದ್ದರು. ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ್ದ ಕ್ಷತ್ರಿಯ ಸೇವಾ ಸಮಿತಿ ಮೊದಲು ಮಹಿಳೆಗೆ ಟೈಲ್ಸ್ ಕಳುಹಿಸಿದ್ದರು. ಬಳಿಕ ಮನೆಗೆ ವಿದ್ಯುತ್ ಉಪಕರಣಗಳನ್ನು ಕಳುಹಿಸಿಕೊಡುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಮೆಸೇಜ್ ಕೂಡ ಬಂದಿತ್ತು.

ಹೀಗಾಗಿ ಮಹಿಳೆ ಸಂಸ್ಥೆಯಿಂದ ವಿದ್ಯುತ್ ಉಪಕರಣ ಬರುವ ನಿರೀಕ್ಷೆಯಲ್ಲಿದ್ದರು. ಇದೇ ನಿರೀಕ್ಷೆಯಲ್ಲಿದ್ದ ಮಹಿಳೆ ಮನೆಗೆ ಪಾರ್ಸೆಲ್‌ವೊಂದು ಬಂದಿದೆ. ಪಾರ್ಸೆಲ್ ಕೊಡಲು ಬಂದ ವ್ಯಕ್ತಿ ಮನೆಯವರ ಕಣ್ಣಿಗೆ ಬೀಳದೆ ಪಾರ್ಸೆಲ್ ಇಟ್ಟು ಪರಾರಿಯಾಗಿದ್ದಾನೆ. ಕ್ಷತ್ರಿಯ ಸೇವಾ ಸಮಿತಿಯಿಂದ ಪಾರ್ಸೆಲ್ ಬಂದಿರಬಹುದು ಎಂದು ಬಾಕ್ಸ್ ತೆಗೆದ ಮಹಿಳೆಗೆ ಉಸಿರು ನಿಂತು ಹೋಗುವ ಸನ್ನಿವೇಶ ಎದುರಾಗಿದೆ.
ಹೌದು ಮನೆ ಬಾಗಿಲಿಗೆ ಬಂದ ಪಾರ್ಸೆಲ್ ತೆಗೆದು ನೋಡಿದಾಗ ಅದರಲ್ಲಿ ವ್ಯಕ್ತಿಯ ಮೃತದೇಹ ಇರುವುದು ಕಂಡು ಬಂದಿದೆ. ಸುಮಾರು ಮೂರು-ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಯ ಶವ ಇದಾಗಿದ್ದು, ಮನೆ ಮಂದಿ ಹೌಹಾರಿದ್ದಾರೆ. ಬಾಕ್ಸ್‌ನಲ್ಲಿ ಮೃತದೇಹ ಕಂಡ ಮಹಿಳೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪಾರ್ಸೆಲ್ ಬಾಕ್ಸ್ ಅನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications