Women's Day 2024: ಯುವ ಪೀಳಿಗೆಗೆ ಸ್ಫೂರ್ತಿ ಈ ಅಪರೂಪದ ಸಾಧಕಿ ವಿನುತಾ ವಿಶ್ವನಾಥ್
ರಾಷ್ಟ್ರಕವಿ ಕುವೆಂಪುರವರು ಹೆಣ್ಣೆಂದರೆ ಕೇವಲ ಮಾನುಷಿಯಲ್ಲ ಅಬಲೆಯೂ ಅಲ್ಲ, ಅವಳೊಂದು ಮಹಾಶಕ್ತಿ ಎಂದು ವ್ಯಾಖ್ಯಾನಿಸಿದ್ದರು ಇವತ್ತು ಹೆಣ್ಣುಮಕ್ಕಳು ಗಂಡಿಗೆ ಸಮಾನಾಗಿ ದುಡಿಯುತ್ತ ಸ್ವಾವಲಂಬಿ ಬದುಕನ್ನುಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಸಾಧನೆಗೈಯುತ್ತಿದ್ದಾರೆ ಅಂತಹ ಸಾಧಕರ ಸಾಲಲ್ಲಿ ಸಣ್ಣ ವಯಸ್ಸಿನಲ್ಲೇ ವಿನೂತನ ಸಾಧನೆಗೈದ ವಿನುತಾ ವಿಶ್ವನಾಥ್ ಕೂಡ ಒಬ್ಬರು.
ಬದುಕಿನ ಸಂಧ್ಯಾಕಾಲದಲ್ಲಿ ದೇಹ ದಣಿದಿದ್ದಾಗ ಮನಸು ಲೌಕಿಕಥೆಯಿಂದ ಆಲೌಕಿಕಥೆಯತ್ತ ವಾಲುತ್ತಿದ್ದಾಗ ಆತ್ಮಕಥೆಗಳನ್ನು ಬರೆಯೋದು ರೂಢಿ ಆದರೆ ವಿನುತಾರವರು ತಾವು ಬಾಳಿನಲ್ಲಿ ಅನುಭವಿಸಿದ ನೋವು ಪಟ್ಟ ಕಷ್ಟ ಕಲಿತ ಪಾಠಗಳನ್ನು ಸಣ್ಣ ವಯಸ್ಸಿನಲ್ಲೇ ಅಕ್ಷರ ರೂಪ ಕೊಟ್ಟು "ಹುಣ್ಸ್ ಮಕ್ಕಿ ಹುಳ" ಎಂಬ ಶೀರ್ಷಿಕೆಯಡಿ ಆತ್ಮಕತೆ ಪ್ರಕಟಿಸಿ ಯುವ ಪೀಳಿಗೆಗೆ ಸ್ಫೂರ್ತಿ ತುಂಬಿ ಪ್ರಶಂಸೆಗೆ ಪಾತ್ರವಾಗಿರೋ ಅಪರೂಪದ ಸಾಧಕಿ.

ವಿನುತಾರವರ ಊರು ಕುಂದಾಪುರದಿಂದ 13 ಕಿಲೋ ಮೀ. ದೂರದಲ್ಲಿರುವ ಪುಟ್ಟ ಹಳ್ಳಿ "ಹುಣ್ಸ್ ಮಕ್ಕಿ" ಅಲ್ಲಿ ಕುಂದ ಭಾಷೆಯೇ ಪ್ರಮುಖ ಸಂವಹನ ಭಾಷೆ. ಚಿಕ್ಕವರಿದ್ದಾಗ ಎಲ್ಲರಂತೆ ಜಗತ್ತಿನ ಆಗುಹೋಗುಗಳನ್ನು ಮರೆತು ತನ್ನದೇ ಪ್ರಪಂಚದಲ್ಲಿ ಸ್ವಚಂದವಾಗಿ ವಿಹರಿಸುತ್ತಿರುವಾಗ ಅಕಸ್ಮಾತಾಗಿ ನಡೆದ ಬೆಂಕಿ ಅವಘಡದಿಂದ ದೇಹವೆಲ್ಲ ಮಾರಣಾಂತಿಕ ಸುಟ್ಟ ಗಾಯಗಳಾಗುತ್ತೆ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ಡಾಕ್ಟರ್ "ಮಗು ಉಳಿಯಲ್ಲ ಕರೆಕೊಂಡು ಹೋಗಿ" ಎನ್ನುತ್ತಾರೆ ಆದರೂ ಹೆತ್ತವರ ಛಲ ಬಿಡದ ಪ್ರಯತ್ನ ಆಸ್ಪತ್ರೆ ಸಿಬ್ಬಂದಿಯ ಸಹಕಾರ ದೇವರ ಆಶೀರ್ವಾದದಿಂದ ದಿನಗಳು ಉರುಳಿದ ಹಾಗೆ ವಿಷಮ ಪರಿಸ್ಥಿತಿಯಿಂದ ಮಗು ಸಂಪೂರ್ಣ ಗುಣಮುಖವಾಗಿ ಮರು ಜನ್ಮ ಪಡೆಯುತ್ತೆ.
ಬೆಂಕಿ ಅವಘಡದಿಂದ ಮುಖದಲ್ಲಿ ಮಾಸದೆ ಉಳಿದಿದ್ದ ಸುಟ್ಟ ಗಾಯದ ಕಲೆಗಳು ಸುರ್ಜರಿಯಿಂದ ಸರಿ ಹೋಗುತ್ತೆ ಎಂದು ಡಾಕ್ಟರ್ ಭರವಸೆ ನೀಡಿರುತ್ತಾರೆ ಆದರೆ ಅದು ಕೂಡಾ ಕೈಗೂಡದಿದ್ದಾಗ ವಾಸ್ತವವನ್ನು ಒಪ್ಪಿಕೊಂಡು ಬಾಹ್ಯ ಸೌಂದರ್ಯಕ್ಕೆ ಮಣೆ ಹಾಕೋ ಜನರ ಮುಂದೆ ಅಂತರಂಗ ಸೌಂದರ್ಯದ ಶಕ್ತಿ ಏನು ಅಂತ ತೋರಿಸಬೇಕೆಂದು ದೃಢ ಸಂಕಲ್ಪದೊಂದಿಗೆ ದಿಟ್ಟತನದಿಂದ ಮುಂದೆ ಹೆಜ್ಜೆ ಇಡುತ್ತಾರೆ.

ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಡಿಪ್ಲೊಮಾಗೆ ಸೇರಿದ ಮೊದಲ ವರ್ಷದಲ್ಲೇ ನಾನು ನಿನನ್ನು ತುಂಬಾ ಪ್ರೀತಿಸುತ್ತಿದ್ದೇನೆ ನಿನ್ನ ನಿರ್ಧಾರವೇನು ತಿಳಿಸು ಎಂದು ಬೆನ್ನು ಬಿದಿದ್ದ ಹುಡುಗನನ್ನು ಎಷ್ಟೇ ದೂರ ಮಾಡಲು ಪ್ರಯತ್ನಿಸಿದರೂ ಮನಸ್ಸಿಗೆ ಹತ್ತಿರವಾಗಿ ಪ್ರೀತಿ ಚಿಗುರೊಡೆಯುತ್ತೆ ಇಬ್ಬರೂ ಪ್ರೇಮಿಗಳಾಗಿ ಬದಲಾಗುತ್ತಾರೆ. ಮುಂದೊಂದು ದಿನ ವಿದ್ಯಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದಾಗ ಅದೇ ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಒಂದಿಷ್ಟು ಆರ್ಥಿಕ ಸಮಸ್ಯೆಗಳು ಆರಂಭವಾಗುತ್ತೆ ಇದರ ಮಧ್ಯೆ ಪ್ರೀತಿಸಿದ ಹುಡುಗನ ಜೊತೆ ಸಂವಹನೆ ಕಮ್ಮಿಯಾಗಿ ಅವನಿಂದ ದೂರವಾಗುತ್ತಿದ್ದಾನೇನೋ ಎಂಬ ಭಯ ಮನಸ್ಸಿನ ಮೂಲೆಯಲ್ಲಿ ಮನೆಮಾಡತೊಡಗುತ್ತೆ.
ಇದ್ದಕಿದ್ದ ಹಾಗೆ ಒಂದು ದಿನ ಪ್ರೀತಿಸಿದ ಹುಡುಗ ಮೊಬೈಲ್ ಸ್ವಿಚ್ ಆಫ್ ಮಾಡಿದಾಗ ಜೀವವೇ ಹೋದಂತಾಗಿ ಪರಿಚಯಸ್ಥರ ಹತ್ತಿರವೆಲ್ಲ ಎಷ್ಟೇ ವಿಚಾರಿಸಿದರೂ ಎಲ್ಲೇ ಹುಡುಕಾಡಿದರೂ ಸುಳಿವು ಸಿಗುವುದಿಲ್ಲ.ಯವ್ವನದಲ್ಲಿ ಪ್ರೀತಿಗೆ ಬಿದ್ದು ಹುಚ್ಚು ಹೆಚ್ಚಾದಾಗ ಅದರ ಕಿಚ್ಚು ಯಾವ ಮಟ್ಟದಲ್ಲಿ ಮಾನಸಿಕವಾಗಿ ಒಬ್ಬ ವ್ಯಕ್ತಿಯನ್ನು ಘಾಸಿಗೊಳಿಸಿಬಿಡುತ್ತೆ ಅನ್ನೋದು ವಿನುತಾರಿಗೆ ಅರಿವಾದದ್ದೇ ದೇಹಾರೋಗ್ಯ ಹದಗೆಡಲು ಪ್ರಾರಂಭವಾದಾಗ ಈ ಘಟನೆಯಿಂದ ವಿನುತಾರಿಗೆ ಸಂಭಂದಗಳ ಮೇಲಿನ ನಂಬಿಕೆನೇ ಹೊರಟುಹೋಗಿ ಎಲ್ಲ ಮೂಲೆಗಳಿಂದ ಸಮಸ್ಯೆಗಳು ನನ್ನೊಬ್ಬಳನ್ನೇ ಮುತ್ತಿಕೊಂಡ ಹಾಗೆ ಭಾಸವಾಗಿ ಬಿಡುತ್ತೆ ಸಮಸ್ಯೆಗಳಿಗೆ ಪರಿಹಾರ ಹುಡುಕುದನ್ನು ಮರೆತು ಅದರ ಗುಂಗಿನಲ್ಲೇ ಖಿನ್ನತೆಗೆ ಜಾರುತ್ತಾರೆ.

ಕಾಲ ಕಳೆದ ಹಾಗೆ ಎಲ್ಲಾಸಮಸ್ಯೆಗೆ ಪರಿಹಾರವೆಂಬುದು ಇದ್ದೆ ಇರುತ್ತೆ ಎಂಬುದನ್ನು ಮನಗೊಂಡು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಪುನಃ ಹೊಸ ಬದುಕನ್ನು ಕಟ್ಟಿಕೊಳ್ಳಲು ಹೊಸ ಕನಸುಗಳೊಂದಿಗೆ ಪಣ ತೊಡುತ್ತಾರೆ. ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಲೋಕದ ಆಕರ್ಷಣೆಗೆ ಒಳಗಾಗಿದ್ದ ವಿನುತಾರವರಿಗೆ ರಂಗಭೂಮಿ ಕೈ ಹಿಡಿಯುತ್ತೆ ಹೊಸ ದಾರಿ ಹೊಸ ಆಶಾಕಿರಣದ ಜೊತೆ ಹೊಸ ಗೆಳೆಯರ ಪರಿಚಯವಾಗುತ್ತೆ ಮುಂದೆ ಬಾಳಲ್ಲಿ ನವಚೇತನ ಮೂಡುವುದರ ಜೊತೆ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗುತ್ತೆ.
ಹೆಣ್ಣಾದವಳು ಬದುಕಿನಲ್ಲಿ ಎಷ್ಟೇ ಸಮಸ್ಯೆಗಳು ಸೋಲುಗಳು ಎದುರಾದರೂ ಆತ್ಮಹತ್ಯೆ ಮಾಡಿಕೊಳ್ಳದೆ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಕುವೆಂಪುರವರು ಹೇಳಿದ ಹಾಗೆ ಮಹಾಶಕ್ತಿಯಾಗಿ ರೂಪಗೊಳ್ಳಬೇಕು ತನ್ಮೂಲಕ ನೊಂದ ಎಷ್ಟೋ ಹೆಣ್ಣು ಮಕ್ಕಳ ಮನಸ್ಸುಗಳಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡುವಂತಾಗಬೇಕು ಎನ್ನುವುದೇ ಈ ಲೇಖನದ ಆಶಯ.












Click it and Unblock the Notifications