2021 Ahead: ಭಾರತದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳು
ಕೊರೊನಾವೈರಸ್ ಸೋಂಕಿನ ನಡುವೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸಿ ಕೇಂದ್ರ ಚುನಾವಣೆ ಆಯೋಗ ಸೈ ಎನಿಸಿಕೊಂಡಿದೆ. 2021ರಲ್ಲಿ ಹಲವು ಚುನಾವಣೆಗಳನ್ನು ಆಯೋಜಿಸುವ ಹೊಣೆ ಆಯೋಗದ ಮೇಲಿದೆ.
ಲೋಕಸಭೆಗೆ ಉಪ ಚುನಾವಣೆ, ರಾಜ್ಯಸಭೆಗೆ ಚುನಾವಣೆ, ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಇದಲ್ಲದೆ ಅನೇಕ ರಾಜ್ಯಗಳಲ್ಲಿನ ವಿಧಾನಸಭೆಗೆ ಉಪ ಚುನಾವಣೆ ಆಯೋಜಿಸಬೇಕಿದೆ, ಜೊತೆಗೆ ವಿಧಾನ ಪರಿಷತ್, ಸ್ಥಳೀಯ ಸಂಸ್ಥೆ ಚುನಾವಣೆ, ಪಾಲಿಕೆ ಚುನಾವಣೆಗಳಿವೆ.
2021ರ ಮೊದಲ ಮೂರು ತಿಂಗಳಿನಲ್ಲಿಯೇ ಕರ್ನಾಟಕದಲ್ಲಿ ಹಲವಾರು ರಾಜಕೀಯ ಬದಲಾವಣೆಗಳು ನಡೆಯಲಿವೆ. ಅವುಗಳಲ್ಲಿ ಉಪ ಚುನಾವಣೆಗಳು ಸೇರಿವೆ. ಒಂದು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಚುನಾವಣೆಯೂ ನಡೆಯಬೇಕಿದೆ.
ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ ಮೂರು ಕ್ಷೇತ್ರದ ಉಪ ಚುನಾವಣೆಗಳು ಸೇರಿದಂತೆ ಯಾವ ಚುನಾವಣೆಗೂ ಇನ್ನೂ ದಿನಾಂಕವನ್ನು ನಿಗದಿ ಮಾಡಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ವಿವರ ಮುಂದಿದೆ...

ಅಸ್ಸಾಂ ವಿಧಾನಸಭೆ ಚುನಾವಣೆ
2021ರಲ್ಲಿ 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಏಪ್ರಿಲ್ ಅಥವಾ ಮೇ 2021ರ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ಭಾರತೀಯ ಜನತಾ ಪಕ್ಷ(ಬಿಜೆಪಿ) 60 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮಿತ್ರಪಕ್ಷ ಅಸ್ಸೊಂ ಗಣ ಪರಿಷತ್ (ಎಜಿಪಿ) ಹಾಗೂ ಬಿಪಿಎಫ್ ಕ್ರಮವಾಗಿ 14 ಹಾಗೂ 12 ಸ್ಥಾನ ಗಳಿಸಿತ್ತು. ಪಕ್ಷೇತರ ಶಾಸಕರೊಬ್ಬರ ಬೆಂಬಲವೂ ಸಿಕ್ಕಿತ್ತು. ಕಾಂಗ್ರೆಸ್ 23 ಹಾಗೂ ಎಐಯುಡಿಎಫ್ 14 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಗಿತ್ತು.

ಪಶ್ಚಿಮ ಬಂಗಾಳ ಚುನಾವಣೆ
2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಮುಂಬರುವ ಚುನಾವಣೆಗಾಗಿ ಸಿಪಿಐ (ಎಂ) ಹಾಗೂ ಕಾಂಗ್ರೆಸ್ ಕೈಜೋಡಿಸಿವೆ. ಲೋಕಸಭೆ ಚುನಾವಣೆಯಲ್ಲಿ 18 ಸ್ಥಾನ ಗೆದ್ದ ಉತ್ಸಾಹದಲ್ಲಿರುವ ಬಿಜೆಪಿ ವಿಧಾನಸಭೆಯಲ್ಲೂ ಮಿಂಚುವ ಗುರಿ ಇಟ್ಟಿಕೊಂಡಿದೆ. ತೃಣಮೂಲ ಕಾಂಗ್ರೆಸ್ ತನ್ನ ಆಡಳಿತದ ಜನಪರ ಎಂದು ಸಾಬೀತುಪಡಿಸಲು ಮತ್ತೆ ಅಧಿಕಾರ ಬಯಸಿದೆ. 294 ಸ್ಥಾನಗಳ ಪೈಕಿ 220 ತೃಣಮೂಲ ಕಾಂಗ್ರೆಸ್ ಹಾಗೂ 2 ಜಿಜೆಎಂ ಗಳಿಸಿವೆ. ವಿಪಕ್ಷದಲ್ಲಿರುವ ಕಾಂಗ್ರೆಸ್ 44, ಸಿಪಿಐಎಂ 26, ಎಐಎಫ್ ಬಿ 2, ಆರ್ ಎಸ್ಪಿ 3, ಸಿಪಿಐ 1 ಸ್ಥಾನ ಹೊಂದಿವೆ. ಬಿಜೆಪಿ 3 ಸ್ಥಾನ ಹೊಂದಿವೆ.

ತಮಿಳುನಾಡು ಚುನಾವಣೆ
2021ರ ಮೇ ತಿಂಗಳಲ್ಲಿ ತಮಿಳುನಾಡಿನ ಚುನಾವಣೆ ನಡೆಯಲಿದೆ. 234 ವಿಧಾನಸಭಾ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆ ಇದಾಗಿದೆ. ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಹಾಗೂ ಎಂ ಕರುಣಾನಿಧಿ ಇಲ್ಲದೆ ಚುನಾವಣೆಯನ್ನು ಎಐಎಡಿಎಂಕೆ ಹಾಗೂ ಡಿಎಂಕೆ ಎದುರಿಸಬೇಕಾಗಿದೆ. ಈ ಎರಡು ಪಕ್ಷಗಳಲ್ಲದೆ ಬಿಜೆಪಿ ಕೂಡಾ ದಕ್ಷಿಣ ಭಾರತದಲ್ಲಿ ತನ್ನ ಪ್ರಭುತ್ವ ಸಾಧಿಸಲು ಈ ಚುನಾವಣೆಯನ್ನು ವೇದಿಕೆಯಾಗಿ ಬಳಸಿಕೊಳ್ಳಲಿದೆ. ನಟ ಕಮ್ ರಾಜಕಾರಣಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಸಕ್ರಿಯ ರಾಜಕೀಯ ಭವಿಷ್ಯ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ದಿನಕರನ್ ಸೇರಿದಂತೆ ಹತ್ತು ಹಲವು ಮಂದಿಯ ಭವಿಷ್ಯ ಕೂಡಾ ಮುಂಬರುವ ಚುನಾವಣೆಯಲ್ಲಿ ಅಡಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ಸ್ಥಾನ ಗಳಿಸಿದರೆ, ಎಐಎಡಿಎಂಕೆ 37 ಸ್ಥಾನಗಳಿಸಿತ್ತು.

ಕೇರಳ ಚುನಾವಣೆ
ಕೇರಳದಲ್ಲೂ 2021ರ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. 15ನೇ ವಿಧಾನಸಭೆ 140 ಶಾಸಕರನ್ನು ಆಯ್ಕೆ ಮಾಡಲು ಚುನಾವಣೆಯಾಗಬೇಕಿದೆ. ಸಿಪಿಐ(ಎಂ) ವಿರುದ್ಧ ಕಾಂಗ್ರೆಸ್ ಪ್ರಬಲ ಪಕ್ಷವಾಗಿ ಕಣಕ್ಕಿಳಿಯಲಿದೆ. ದಕ್ಷಿಣ ಭಾರತದಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿರುವ ಬಿಜೆಪಿ ತನ್ನ ಅದೃಷ್ಟ ಪರೀಕ್ಷೆಗಿಳಿಯಲಿದೆ. ಹಾಲಿ ವಿಧಾನಸಭೆಯ ಕಾಲಾವಧಿ ಜೂನ್ 1, 2021ರಂದು ಮುಗಿಯಲಿದೆ. 2016ರಲ್ಲಿ ಎಲ್ ಡಿಎಫ್ ಬಹಮತ ಗಳಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸೋಲು ಕಂಡಿತ್ತು. ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನ ಗಳಿಸಿತ್ತು.
Recommended Video

ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ವಿಧೇಯಕ 370 ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ 2021ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಸಲಾಗುತ್ತದೆ. ಕಣಿವೆ ರಾಜ್ಯದ ವಿಧಾನಸಭೆಯಲ್ಲಿ 111 ಸ್ಥಾನಗಳಿತ್ತು, ಲಡಾಕ್ ಈಗ ಕೇಂದ್ರಾಡಳಿತ ಪ್ರದೇಶವಾಗಿ ಬೇರ್ಪಟ್ಟಿದೆ. ಹೀಗಾಗಿ ನಾಲ್ಕು ಸ್ಥಾನ ಕಡಿಮೆಯಾಗಿದೆ. ಹೀಗಾಗಿ ಜೆ ಅಂಡ್ ಕೆ ಅಸೆಂಬ್ಲಿಯಲ್ಲಿ 107 ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ 2014ರಲ್ಲಿ ಜಮ್ಮು ವಿಭಾಗದ 37 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 5 ಹಾಗೂ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ(ಪಿಡಿಪಿ) ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ)ತಲಾ 3 ಸ್ಥಾನ ಗೆದ್ದಿದ್ದವು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.












Click it and Unblock the Notifications