ಐಎಎಸ್ ಅಧಿಕಾರಿ ಎಸ್. ಎಸ್. ನಕುಲ್ ಪರಿಚಯ
2010ನೇ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಪ್ರಸ್ತುತ ಬಳ್ಳಾರಿ ಜಿಲ್ಲಾಧಿಕಾರಿಯಾಗಿರುವ ಎಸ್. ಎಸ್. ನಕುಲ್ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಕಾರ್ಯದರ್ಶಿಯಾಗಿ ಅವರು ನೇಮಕಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜನಿಸಿದ ಎಸ್. ಎಸ್. ನಕುಲ್ ತಮ್ಮ ಆಡಳಿತದ ವೈಖರಿ ಮೂಲಕವೇ ಪ್ರಸಿದ್ಧಿ ಪಡೆದಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದಾಗ ಪತ್ನಿಯನ್ನು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಉತ್ತರ ಕನ್ನಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಸ್. ಎಸ್. ನಕುಲ್ ಕೆಲಸ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಅವರು, 2019ರ ಜನವರಿಯಿಂದ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಅವರು ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಗುರುವಾರ ಸರ್ಕಾರ ಅವರನ್ನು ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಎಸ್. ಎಸ್. ನಕುಲ್ ಯಾರು?
ಎಸ್. ಎಸ್. ನಕುಲ್ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರು. ತಂದೆ ಎಸ್. ಕೆ. ಸತೀಶ್ ಮತ್ತು ತಾಯಿ ಶೋಭಾ. 4/12/1983ರಲ್ಲಿ ಜನಿಸಿದ ನಕುಲ್, ಬಿಇ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) ಪದವಿಯನ್ನು ಪಡೆದಿದ್ದಾರೆ.

2010ನೇ ಬ್ಯಾಚ್ ಅಧಿಕಾರಿ
ಎಸ್. ಎಸ್. ನಕುಲ್ 2010ನೇ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ 31ನೇ rank ಪಡೆದು ಕರ್ನಾಟಕದಲ್ಲಿಯೇ ಮೊದಲ ಸ್ಥಾನಗಳಿಸಿದ್ದರು.

ಸರ್ಕಾರಿ ಆಸ್ಪತ್ರೆಗೆ ಪತ್ನಿ ದಾಖಲಿಸಿದ್ದರು
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಎಸ್. ಎಸ್. ನಕುಲ್ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆಗ ಪತ್ನಿ ಪೂಜಿತಾ ಅವರನ್ನು ಹೆರಿಗೆಗಾಗಿ ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪೂಜಿತಾ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಬಳ್ಳಾರಿ ಜಿಲ್ಲಾಧಿಕಾರಿ
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಣೆ ಮಾಡಿದ್ದ ಎಸ್. ಎಸ್. ನಕುಲ್ 2019ರಿಂದ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡಿದ್ದಾರೆ. ಈಗ ಕೇಂದ್ರ ಸೇವೆಗೆ ತೆರಳುತ್ತಿದ್ದಾರೆ.












Click it and Unblock the Notifications