• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1946 ಲವ್ ಸ್ಟೋರಿ: 90ರ ಅಜ್ಜ, ಪತ್ನಿಯನ್ನು ಮತ್ತೆ ನೋಡಿದ್ದು 72 ವರ್ಷದ ಬಳಿಕ

|

ನೈಜ ಪ್ರೇಮ ಎಂದಿಗೂ ಹೀಗೆ. ಅನುಭವಿಸುವವರಿಗೆ ನೋವು-ನಲಿವುಮ ಜೊತೆಗೊಂದಿಷ್ಟು ಪುಳಕ. ಪ್ರೇಮಕಥೆಗೆ ಕಿವಿಗೊಡುವವರಿಗೆ ಕೌತುಕದ ಸುಖ.

ಹೀಗೆ ರೋಮಾಂಚನಕಾರಿ ಅನುಭವ ಮೂಡಿಸುವ ಅದೆಷ್ಟೋ ಪ್ರೇಮಕಥೆಗಳು ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿವೆ. ಅವುಗಳಲ್ಲಿ ಹೆಚ್ಚಿನ ಕಥೆಗಳು ಹುಟ್ಟಿದ್ದಲ್ಲಿಯೇ ಅಳಿದುಹೋಗಿವೆ. ಇನ್ನು ಕೆಲವು ಮಾತ್ರ ಅಚ್ಚಳಿಯದಂತೆ ದಾಖಲಾಗಿವೆ.

ಭಾವುಕ ಚಿತ್ರ: ಯುದ್ಧವಷ್ಟೇ ಅಲ್ಲ, ನಮಗೆ ಸಂತೈಸೋದೂ ಗೊತ್ತು!

ಅಂತಹ ವಿಶಿಷ್ಟ ಪ್ರೇಮಕಥನಗಳಿಗೆ ಹೊಸದೊಂದು ಸೇರ್ಪಡೆಯಾಗಿದೆ. ಕಥೆಯ ಸೇರ್ಪಡೆ ಹೊಸದಾದರೂ. ಪ್ರೇಮಕಥೆ ಹಳೆಯದು. ಅದೂ, ಸ್ವಾತಂತ್ರ್ಯಪೂರ್ವದ್ದು ಎಂದರೆ ಅಚ್ಚರಿಯಾದರೂ ಸತ್ಯ.

90 ವರ್ಷದ ಇ.ಕೆ. ನಾರಾಯಣನ್ ನಂಬಿಯಾರ್ ತಮ್ಮ 85 ವರ್ಷದ ವರ್ಷದ ಪತ್ನಿ ಶಾರದಾ ಅವರನ್ನು ಕೊನೆಗೂ ಇತ್ತೀಚೆಗೆ ಭೇಟಿಯಾದರು. ಇದರಲ್ಲೇನು ವಿಶೇಷ ಎನ್ನುತ್ತೀರಾ? ಇಬ್ಬರೂ ಪರಸ್ಪರ ಭೇಟಿಯಾಗಿದ್ದು ದೂರವಾಗಿ ಬರೋಬ್ಬರಿ 72 ವರ್ಷದ ನಂತರ.

2ನೇ ವಿಶ್ವಯುದ್ಧದ ಯೋಧನಿಗೆ ಮಂಡಿಯೂರಿ ನಮಿಸಿದ ಸಾಂತಾಕ್ಲಾಸ್

ಇದೆಲ್ಲಾ ಹೇಗಾದದ್ದು? ಇಷ್ಟು ದಿನ ಎಲ್ಲಿ ಹೋಗಿದ್ದರು? ಈಗ ಹೇಗೆ ಸೇರಿಕೊಂಡರು? ಎಂಬ ಪ್ರಶ್ನೆಗಳು ಕುತೂಹಲಕಾರಿ ಕಥೆಯ ಸುರುಳಿಯನ್ನು ಬಿಚ್ಚಿಡುತ್ತದೆ.

ಈ ಅಪರೂಪದ ಪ್ರೇಮಕಥೆಯನ್ನು ಮೊದಲು ವರದಿ ಮಾಡಿದ್ದು ಮಲಯಾಳಂನ 'ಮಾತೃಭೂಮಿ' ಪತ್ರಿಕೆ ವರದಿಗಾರ ಸಿ.ಕೆ. ವಿಜಯನ್.

ಒಂದು ವರ್ಷವೂ ಜೊತೆಯಲ್ಲಿರಲಿಲ್ಲ

ಒಂದು ವರ್ಷವೂ ಜೊತೆಯಲ್ಲಿರಲಿಲ್ಲ

ಅಂದಹಾಗೆ, ನಾರಾಯಣನ್ ನಂಬಿಯಾರ್ ಮತ್ತು ಶಾರದಾ ಮದುವೆಯಾಗಿದ್ದು 1946ರಲ್ಲಿ. ಆಗ ನಾರಾಯಣನ್‌ಗೆ 18 ಮತ್ತು ಶಾರದಾಗೆ 13 ವರ್ಷ. ಇಬ್ಬರೂ ಮದುವೆಯಾಗಿ ಒಂದು ವರ್ಷವೂ ಜತೆಯಾಗಿ ಬಾಳಿರಲಿಲ್ಲ. ರಾಜಕೀಯ ಕ್ಷೇತ್ರದ ಪಲ್ಲಟಗಳು, ಸ್ವಾತಂತ್ರ್ಯದ ಕಿಚ್ಚು ಇಬ್ಬರನ್ನೂ ದೂರಮಾಡಿತು. ಕೊನೆಗೆ ಇಬ್ಬರೂ ದೂರವಾದರು. ಬೇರೆಯವರನ್ನು ಮದುವೆಯಾದರು. ತಮ್ಮದೇ ಸಾಂಸಾರಿಕ ಬದುಕು ಕಟ್ಟಿಕೊಂಡರು.

ಇಬ್ಬರ ಕಡೆಯ ಸಂಬಂಧಿಕರ ಭೇಟಿ, ಈ ಎರಡು ಹಿರಿ ಜೀವಗಳು ಮುಖಾಮುಖಿಯಾಗಲು ಮತ್ತೆ ನೆರವಾಯಿತು. ಅದರೊಟ್ಟಿಗೆ ನಾರಾಯಣನ್ ಮತ್ತು ಶಾರದಾ ಎಂಬಿಬ್ಬರ ನಾಟಕೀಯ, ನೋವಿನ ಕಥನ ಹಾಗೂ ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿ ವಿರುದ್ಧದ ಹೋರಾಟದ ಪರಿಣಾಮದ ಘಟನೆ ತೆರೆದುಕೊಂಡಿತು.

ರೈತ ಕ್ರಾಂತಿಯ ಕಿಚ್ಚು

ರೈತ ಕ್ರಾಂತಿಯ ಕಿಚ್ಚು

ಶಾರದಾ ಮತ್ತು ನಾರಾಯಣನ್ ಅವರ ಪ್ರೇಮಕಥೆ ಶುರುವಾಗಿದ್ದು ಮತ್ತು ಅಂತ್ಯವಾಗಿದ್ದು ಎರಡೂ 1946ರಲ್ಲಿ. ಮದುವೆಯಾಗಿ ಎಂಟು ತಿಂಗಳ ದಾಂಪತ್ಯ ಜೀವನ ನಡೆಸಿದ್ದರಷ್ಟೇ. 1946ರ ಡಿಸೆಂಬರ್‌ನಲ್ಲಿ ನಾರಾಯಣನ್ ನಂಬಿಯಾರ್ ಮತ್ತು ಅವರ ತಂದೆ ತಾಲಿಯಾನ್ ರಮಣ್ ನಂಬಿಯಾರ್ ಇಬ್ಬರೂ, ಜಮೀನ್ದಾರರ ವಶದಲ್ಲಿದ್ದ ತಮ್ಮ ಜಮೀನನ್ನು ಮರಳಿ ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಕವುಂಬೈ ರೈತ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು.

1946ರ ಡಿಸೆಂಬರ್ 30ರಂದು ನಾರಾಯಣ್ ನಂಬಿಯಾರ್, ತಾಲಿಯಾನ್ ರಮಣ್ ನಂಬಿಯಾರ್ ಮತ್ತು ಸುಮಾರು 500 ಹೋರಾಟಗಾರರು ಕಣ್ಣೂರಿನ ಹೆಚ್ಚಿನ ಪ್ರದೇಶಗಳನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದ ಕರಕಟ್ಟಿಡಾಮ್ ನಯನಾರ್ ಎಂಬ ಜಮೀನ್ದಾರನ ಬೆಟ್ಟದಲ್ಲಿರುವ ಮನೆಯತ್ತ ಆಯುಧಗಳನ್ನು ಹಿಡಿದು ನುಗ್ಗಿದರು. ಮರುದಿನ ಬೆಳಿಗ್ಗೆ ಮನೆಯ ಮೇಲೆ ದಾಳಿ ನಡೆಸುವುದು ಅವರೆಲ್ಲರ ಉದ್ದೇಶವಾಗಿತ್ತು.

ಖಾದ್ರಿ ಅಜ್ಜ ಅಪಘಾತದಲ್ಲಿ ಅಂತ್ಯವಾದರೂ ಪ್ರೇಮವು ಸೌಧದ ರೂಪದಲ್ಲಿ ಈಗಲೂ ತಾಜಾ

ಪೊಲೀಸರ ಬಲೆಗೆ ಅಪ್ಪ-ಮಗ

ಪೊಲೀಸರ ಬಲೆಗೆ ಅಪ್ಪ-ಮಗ

ಆದರೆ, ಕೇರಳದ ಜಮೀನ್ದಾರರ ಪರವಾಗಿದ್ದ ಬ್ರಿಟಿಷ್ ವಸಾಹತು ಸರ್ಕಾರ ಮಲಬಾರ್ ವಿಶೇಷ ಪೊಲೀಸ್ (ಎಂಎಸ್ ಪಿ) ಪಡೆಯನ್ನು ನಿಯೋಜಿಸಿತು. ರಾತ್ರಿಯೇ ಬೆಟ್ಟವನ್ನು ಸುತ್ತುವರಿದ ಪೊಲೀಸರು ಗುಂಪಿನ ಮೇಲೆ ಗುಂಡಿನ ಮಳೆಗರೆದರು. ಐವರು ಪ್ರತಿಭಟನಾಕಾರರು ಬಲಿಯಾದರು. ನಾರಾಯಣನ್ ಮತ್ತು ಅವರ ತಂದೆ ತಲೆಮರೆಸಿಕೊಂಡರೂ, ಪೊಲೀಸರು ಅವರನ್ನು ಬಂಧಿಸಿದರು.

ಕಣ್ಣೂರು ಮತ್ತು ಸೇಲಂ ಜೈಲುಗಳಲ್ಲಿ ಇರಿಸಿದರು. 16 ಗುಂಡೇಟುಗಳನ್ನು ತಿಂದರೂ ನಾರಾಯಣನ್ ನಂಬಿಯಾರ್ ಬದುಕುಳಿದರು. ಚಿಕಿತ್ಸೆ ನೀಡಿದರೂ ಒಂದು ಗುಂಡು ಅವರ ದೇಹದಲ್ಲಿ ಹಾಗೆಯೇ ಉಳಿದುಕೊಂಡಿತು. ಹಿಂಸಾಚಾರಯುತ ಪ್ರತಿಭಟನೆ ನಡೆಸಿದ ಶಂಕೆಯ ಆರೋಪದಲ್ಲಿ ಜೈಲಿನಲ್ಲಿಯೇ ಅವರ ತಂದೆ ತಾಲಿಯಾನ್ ರಮಣ್ ಅವರಿಗೆ ಗುಂಡಿಕ್ಕಿ ಕೊಲ್ಲಲಾಯಿತು.

ಮನೆಯ ಮೇಲೆಯೂ ದಾಳಿ

ಈ ಮಧ್ಯೆ 1946ರ ಡಿಸೆಂಬರ್ 31ರಂದು ಎಂಎಸ್ ಪಿಯ ಸುಮಾರು 60 ಮಂದಿ ನಾರಾಯಣನ್ ಪತ್ನಿ ಶಾರದಾ ಅವರ ಮನೆಗೆ ಭೇಟಿ ನೀಡಿದರು. ಮನೆಯನ್ನು ನಾಶ ಮಾಡಿದರು. ಮನೆಯಲ್ಲಿ ಶೇಖರಿಸಿದ್ದ ಹಾಲು, ತುಪ್ಪ, ಕಾಳುಮೆಣಸು ಮತ್ತು ಅಕ್ಕಿಯನ್ನು ಚೆಲ್ಲಾಡಿದರು. ನಾರಾಯಣನ್ ಅವರ ತಾಯಿಯ ಮೇಲೆ ಹಲ್ಲೆ ನಡೆಸಿದರು. 30ರ ರಾತ್ರಿ ನಾಪತ್ತೆಯಾಗಿದ್ದ ನಾರಾಯಣನ್ ಮತ್ತು ಅವರ ತಂದೆ ಮನೆಗೆ ಬಂದಿರಬಹುದು ಎಂಬ ಅನುಮಾನ ಅವರಲ್ಲಿತ್ತು. ಬಳಿಕ ಆ ಮನೆಯನ್ನು ಸುಟ್ಟುಹಾಕಿದರು.

ನಾರಾಯಣನ್ ಮರಳಿ ಬರುವ ಲಕ್ಷಣಗಳು ಕಾಣಿಸದೆ ಮತ್ತು ಎಂಎಸ್ ಪಿ ಇನ್ನಷ್ಟು ಕಡೆ ದಾಳಿ ನಡೆಸಿ ಹಿಂಸಿಸುವುದನ್ನು ಕಂಡು ನಾರಾಯಣನ್ ಅವರ ತಾಯಿ ಶಾರದಾ ಅವರನ್ನು ತವರು ಮನೆಗೆ ಮರಳಿ ಕಳುಹಿಸಿದರು. ಅಲ್ಲಿ ಅವರು ಮರುಮದುವೆಯಾದರು.

ಎಂಟು ವರ್ಷದ ಬಳಿಕ 1954ರಲ್ಲಿ ನಾರಾಯಣನ್ ಅವರ ಬಿಡುಗಡೆಯಾಯಿತು. ಸೇಲಂ ಜೈಲಿನಿಂದ ಬಿಡುಗಡೆಯಾದ ನಾರಾಯಣನ್ ಮನೆಗೆ ಮರಳಿದರು. ಪತ್ನಿಗೆ ಮತ್ತೊಂದು ಮದುವೆಯಾಗಿರುವುದು ತಿಳಿಯಿತು. ಕೆಲವು ದಿನಗಳ ಬಳಿಕ ತಾವೂ ಬೇರೆ ಮದುವೆಯಾದರು. ತಮ್ಮ ಬದುಕಿನೆಡೆಗೆ ಗಮನ ಹರಿಸಿದರು.

ದಿಕ್ಕು ಬದಲಿಸಿದ ಕಾದಂಬರಿ

ದಿಕ್ಕು ಬದಲಿಸಿದ ಕಾದಂಬರಿ

ನಾರಾಯಣನ್ ಅವರ ಸೋದರ ಸೋದರ ಸೊಸೆ ಶಾಂತಾ ಕವುಂಬಾಯಿ ನಾರಾಯಣನ್ ನಂಬಿಯಾರ್ ಅವರ ಬದುಕಿನ ಘಟನೆಗಳನ್ನು ಆಧರಿಸಿ ಒಂದು ಕಥೆಯನ್ನು ಬರೆದರು. ಅದಕ್ಕೆ '30 ಡಿಸೆಂಬರ್' ಎಂಬ ಹೆಸರಿಟ್ಟರು.

ಅಲ್ಲಿಂದ ಈ ಕಥೆ ಮತ್ತೊಂದು ತಿರುವು ಪಡೆಯಿತು. ಕಾದಂಬರಿ ಅವರ ಕುಟುಂಬದವರನ್ನು ಬೆಸೆಯಿತು. ಶಾರದಾ ಅವರ ಮಗ ಭಾರ್ಗವನ್, ಶಾಂತಾ ಮತ್ತು ಅವರ ಪತಿ ಮಧುಕುಮಾರ್ ಅವರನ್ನು ಭೇಟಿ ಮಾಡಿದರು. ಬಳಿಕ ಎರಡೂ ಕುಟುಂಬದವರ ಜೊತೆ ಮಾತನಾಡಲು ನಿರ್ಧರಿಸಿದರು. ಕೊನೆಗೆ ಇಬ್ಬರನ್ನು ಪರಸ್ಪರ ಭೇಟಿ ಮಾಡಿಸಲು ತೀರ್ಮಾನಿಸಲಾಯಿತು. ಕಣ್ಣೂರು ಜಿಲ್ಲೆಯ ಪರಸ್ಸಿನಿಕ್ಕಡವುದಲ್ಲಿನ ಭಾರ್ಗವನ್ ಅವರ ಮನೆಯಲ್ಲಿ ಭೇಟಿ ನಡೆಯಿತು.

72 ವರ್ಷದ ನಂತರದ ಭೇಟಿ

72 ವರ್ಷದ ನಂತರದ ಭೇಟಿ

ಶಾರದಾ ಅವರ ಕುಟುಂಬ ಈ ಭೇಟಿಯ ಸವಿ ಗಳಿಗೆಗಾಗಿ ಕೇರಳದ ಸಾಂಪ್ರದಾಯಿಕ ಶೈಲಿ ಭೋಜನ ತಯಾರಿಸಿತ್ತು. ಶಾರದಾ ಅವರ ತಲೆ ಮೇಲೆ ಕೈಯಿರಿಸಿದ ನಾರಾಯಣನ್ ಭಾವುಕರಾಗಿದ್ದರು. ಶಾರದಾ ಅವರ ಕಣ್ಣಲ್ಲಿ ನಾಚಿಕೆ ತುಂಬಿ ತುಳುಕುತ್ತಿತ್ತು. ಸ್ವಲ್ಪ ಹೊತ್ತು ನಾರಾಯಣನ್ ಅವರ ಕಡೆ ನೋಟ ಹರಿಸಿದ ಶಾರದಾ, ಕಣ್ಣಾಲಿಗಳನ್ನು ತುಂಬಿಕೊಂಡು ಬೇರೆಡೆ ನೋಡತೊಡಗಿದರು.

ತಮ್ಮ ಬದುಕಿನಲ್ಲಾದ ಘಟನೆಗಳ ಬಗ್ಗೆ ಯಾರೂ ಯಾರ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಮಕ್ಕಳೆಲ್ಲರೂ ಇಬ್ಬರ ಬದುಕಿನ ಬಗ್ಗೆ ಕೆದಕಿದರು. ನಾರಾಯಣನ್ ಮನೆಯಲ್ಲಿ ತಮಗೆ ಕೆಲಸವೇ ಇರುತ್ತಿರಲಿಲ್ಲ. ಆ ಕುಟುಂಬ ತಮ್ಮನ್ನು ಮಗಳಂತೆ ನೋಡಿಕೊಳ್ಳುತ್ತಿತ್ತು ಎಂಬುದನ್ನು ಶಾರದಾ ನೆನಪಿಸಿಕೊಂಡರು.

ಭೇಟಿಯ ಬಳಿಕ ನಾರಾಯಣನ್ ತಮ್ಮ ಮನೆಗೆ ಹೊರಟರು. ಶಾರದಾರ ನೆತ್ತಿಯ ಮೇಲೆ ಕೈಯಿರಿಸಿದ ನಾರಾಯಣನ್, ತಾವು ಹೊರಡುತ್ತಿರುವುದಾಗಿ ಹೇಳಿದರು. ಮೆಲ್ಲನೆ ಹೂಂಗುಟ್ಟುವಂತೆ ಕತ್ತು ಅಲ್ಲಾಡಿಸಿದ ಶಾರದಾ ನೆಲದತ್ತ ಕಣ್ಣು ಹಾಯಿಸಿ ಕುಳಿತರು. ಒಂದು ದುರಂತ ಪ್ರೇಮಕಥೆಯ ಸಿನಿಮೀಯ ತಿರುವು ಈಗ ಎಲ್ಲೆಡೆ ಸುದ್ದಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narayanan Nambiar meets his first wife Sharada after 72 years of being separated from each other in 1946.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more