Fact check: ಚುನಾವಣೆ ಬಳಿಕ ಕಾಂಗ್ರೆಸ್ ಏನು ಮಾಡುತ್ತದೆ? ಖರ್ಗೆ ವೈರಲ್ ವಿಡಿಯೋದ ಅಸಲಿಯತ್ತೇನು?
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪ್ರಬಲ ಪಕ್ಷಗಳು ಆರೋಪ ಪ್ರತ್ಯಾರೋಪದ ನಡುವೆ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಚುನಾವಣೆ ಬಳಿಕ ಕಾಂಗ್ರೆಸ್ ಏನು ಮಾಡಲಿದೆ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ? ಈ ವಿಡಿಯೋದ ಅಸಲಿಯತ್ತೇನು ಎಂದು ತಿಳಿಯೋಣ.

ಮಲ್ಲಕಾರ್ಜುನ ಖರ್ಗೆ ಅವರು ಮಾತನಾಡುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚುನಾವಣೆ ಬಳಿಕ ಕಾಂಗ್ರೆಸ್ ಏನು ಮಾಡಲಿದೆ ಎಂದು ಖರ್ಗೆಯವರು ಹೇಳಿದ್ದಾರೆ. ಆದರೆ ಈ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಹಂಚಿಕೊಳ್ಳಲಾಗಿದೆ ಎಂದು newschecker ಸತ್ಯ ಪರಿಶೀಲನೆ ವೇಳೆ ಕಂಡು ಹಿಡಿದಿದೆ. ಹಾಗಾದರೆ ವಿಡಿಯೋದಲ್ಲಿ ಖರ್ಗೆ ಅವರು ಹೇಳಿದ್ದೇನು?
ವಾಟ್ಸಾಪ್ ಅಲ್ಲಿ ವೈರಲ್ ಆದ ವಿಡಿಯೋದ ಶೀರ್ಷಿಕೆ ಹೀಗಿದೆ- ' ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂದು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿಯಿಂದಲೇ ಕೇಳಿ. ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಕಬೋರ್ಡ್ ಬಾಗಿಲು ತೆರೆದು ಅಲ್ಲಿರುವ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುತ್ತದೆ. ಹಿಂದೂಗಳಿಗೆ ಕಡಿಮೆ ಮಕ್ಕಳಿದ್ದರೆ ಕಾಂಗ್ರೆಸ್ ಏನು ಮಾಡಲಿಕ್ಕೆ ಆಗುತ್ತದೆ!? ಅರ್ಥ ಆಯಿತಾ ಹಿಂದೂಗಳೇ! ಇನ್ನೂ ಸ್ಪಷ್ಟವಾಗಿ ಹೇಳಬೇಕಾ'' ಎಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೇ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆದ ಬಳಿಕ ಇದರ ಸತ್ಯಪರಿಶೀಲನೆ ಮಾಡಲಾಗಿದ್ದು ಅಸಲಿ ವಿಡಿಯೋವನ್ನು ಎಡಿಟ್ ಮಾಡಿರುವುದು ತಿಳಿದು ಬಂದಿದೆ. newschecker ಸತ್ಯ ಪರಿಶೀಲನೆ ವೇಳೆ ವೈರಲ್ ವಿಡಿಯೋದ ನಿಜವಾದ ವಿಡಿಯೋವನ್ನು ಪರಿಶೀಲನೆ ಮಾಡಲಾಗಿದೆ.
ಸತ್ಯಪರಿಶೀಲನೆ...
ಈ ವೇಳೆ ಮೇ 3, 2024 ರಂದು ಅಹಮದಾಬಾದ್ನಲ್ಲಿ ನಡೆದ ರ್ಯಾಲಿಯ ನೇರ ಪ್ರಸಾರದ ವಿಡಿಯೋವನ್ನು ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಸಲಿ ವಿಡಿಯೋ ಕಂಡುಬಂದಿದೆ. ಈ ವಿಡಿಯೋದಲ್ಲಿ ವೈರಲ್ ಕ್ಲಿಪ್ಗೆ ಹೋಲುವ ದೃಶ್ಯಗಳಿವೆ.
ವೈರಲ್ ಕ್ಲಿಪ್ ಭಾಗ 32:28ರಲ್ಲಿ ಖರ್ಗೆ ಅವರು ಮಾತನಾಡಿದ ತುಣುಕನ್ನು ವೈರಲ್ ಮಾಡಲಾಗಿದೆ. ವಿಡಿಯೋದ ಒಟ್ಟು ಸಮಯ 31:50 ನಿಮಿಷ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು 'ಹಿಸ್ಸೇದಾರಿ ನ್ಯಾಯ' ಎಂಬ ವಿಷಯದ ಬಗ್ಗೆ ಹೇಳುತ್ತಾರೆ.

''ಹಿಸ್ಸೇದಾರಿ ನ್ಯಾಯದಲ್ಲಿ ಜಾತಿ ಜನಗಣತಿ ಮಾಡಬೇಕು ಎಂದು ಹೇಳಿದ್ದೇವೆ. ಯಾವ ಸ್ಥಳದಲ್ಲಿ? ಯಾವ ಸಮುದಾಯದಲ್ಲಿ? ಎಷ್ಟು ವಿದ್ಯಾವಂತರಿದ್ದಾರೆ? ಎಷ್ಟು ಪದವೀಧರರಿದ್ದಾರೆ? ಎಷ್ಟು ಆದಾಯವಿದೆ? ತಲಾ ಆದಾಯ ಎಷ್ಟು? ಇದನ್ನು ನೋಡಲು, ನಾವು ಗಣತಿ ನಡೆಸಲಿದ್ದೇವೆ. ಮೋದಿ ಸಾಹೇಬರು ಏನು ಹೇಳಿದರು. ನಿಮಗೆ ತಿಳಿದಿದೆಯೇ? ಕಾಂಗ್ರೆಸ್ ನವರು ನಿಮ್ಮ ಮನೆ ಪ್ರವೇಶಿಸುತ್ತಾರೆ. ಕಬೋರ್ಡ್ ಅನ್ನು ಮುರಿಯುತ್ತಾರೆ. ಎಲ್ಲಾ ಹಣವನ್ನು ತೆಗೆದು ಎಲ್ಲರಿಗೂ ಹಂಚುತ್ತಾರೆ. ಮುಸ್ಲಿಮರಿಗೂ ಕೊಡುತ್ತಾರೆ. ಹೆಚ್ಚು ಮಕ್ಕಳನ್ನು ಹೊಂದಿರುವವರು ಹೆಚ್ಚು ಪಡೆಯುತ್ತಾರೆ. ಆದರೆ ಕಾಂಗ್ರೆಸ್ ವಿಭಜನೆ ಮಾಡಲು ಹೋಗುವುದಿಲ್ಲ. ಅವರು ಯಾರನ್ನೂ ಆ ರೀತಿ ಹೊರಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಮೋದಿ ಸಾಹೇಬರು ಇಂತಹ ಆಲೋಚನೆಗಳನ್ನು ಹರಡುತ್ತಿದ್ದಾರೆ. ಇದು ದೇಶಕ್ಕೆ ಮತ್ತು ನಮ್ಮಲ್ಲರಿಗೂ ಸರಿಯಾದ್ದಲ್ಲ'' ಎಂದು ಹೇಳುತ್ತಾರೆ.
ಈ ವಿಡಿಯೋದ ಸಂಪೂರ್ಣ ದೃಶ್ಯವನ್ನು ನೋಡಿದಾಗ ವೈರಲ್ ವೀಡಿಯೋವನ್ನು ಎಡಿಟ್ ಮಾಡಿರುವುದು ಕಂಡು ಬಂದಿದೆ. ಇದನ್ನು ಕೋಮು ಭಾವನೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿದೆ.
ಕಾಂಗ್ರೆಸ್‌ನ 'ಹಿಸ್ಸೇದಾರಿ ನ್ಯಾಯ'ಎಂಬುದನ್ನು ಅದು ಮುಸ್ಲಿಂ ಪರ ಎಂದು ನರೇಂದ್ರ ಮೋದಿ ಹೇಗೆ ಬಣ್ಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಭಾಷಣದಲ್ಲಿ ಮಾತನಾಡುತ್ತಿರುವುದನ್ನು ಅಸಲಿ ವಿಡಿಯೋದಲ್ಲಿ ಕಾಣಬಹುದು.
ಆದರೆ ವಿಡಿಯೋದ ಕೆಲ ಭಾಗವನ್ನು ಮಾತ್ರ ಕತ್ತರಿಸಿ ವೈರಲ್ ಮಾಡಲಾಗಿದೆ. ಹೀಗಾಗಿ ಈ ವಿಡಿಯೋ ತಪ್ಪಾಗಿದ್ದು ನೋಡುಗರನ್ನು ದಾರಿತಪ್ಪಿಸುವಂತಿದೆ.
ಈ ಸುದ್ದಿಯನ್ನು [email protected] ವೆಬ್‌ಸೈಟ್ ಮೂಲಕ ಪಡೆಯಲಾಗಿದೆ.
ಈ ಫ್ಯಾಕ್ಟ್‌ಚೆಕ್ ಕಾರ್ಯವನ್ನು ನ್ಯೂಸ್‌ಚೆಕರ್ ವೆಬ್‌ಸೈಟ್ ಮಾಡಿದೆ. ಇದನ್ನು 'ಶಕ್ತಿ ಕಲೆಕ್ಟಿವ್' ಉಪಕ್ರಮದ ಅಡಿಯಲ್ಲಿ ನಡೆಸಲಾಗಿದೆ.

Fact Check
ಕ್ಲೇಮು
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಏನು ಮಾಡುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಿಸಮಾಪ್ತಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.












Click it and Unblock the Notifications