ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?

|
Google Oneindia Kannada News

ನವದೆಹಲಿ, ಸಪ್ಟೆಂಬರ್.02: ಭಾರತ-ಚೀನಾದ ಲಡಾಖ್ ಪೂರ್ವ ಭಾಗದ ಗಾಲ್ವಾನ್ ನದಿ ಕಣಿವೆಯಲ್ಲಿ ಉಭಯ ಸೇನೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಹರಡಿದ್ದ ಸುಳ್ಳು ಸುದ್ದಿಯ ಸತ್ಯಾನ್ವೇಷಣೆಯ ವರದಿಯಿದು.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಕಳೆದ ಜೂನ್.15 ಮತ್ತು 16ರ ಮಧ್ಯರಾತ್ರಿ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು 76 ಯೋಧರು ಗಾಯಗೊಂಡಿದ್ದರು. ಭಾರತೀಯ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ 5 ರಿಂದ 100 ಯೋಧರು ಮೃತಪಟ್ಟಿರುವ ಬಗ್ಗೆ ಅಂದಾಜಿಸಲಾಗಿತ್ತು. ಆದರೆ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?

ಚೀನಾ ಯೋಧರ ಸಾವು ಮತ್ತು ಗಡಿಯಲ್ಲಿ ಚೀನಾ ಯೋಧರ ಸಮಾಧಿಗಳಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಹಲವು ಭಾರತೀಯ ಸುದ್ದಿವಾಹಿನಿಗಳು ಸುದ್ದಿಯನ್ನು ಪ್ರಸಾರ ಮಾಡಿದ್ದರು. ಈ ಸುದ್ದಿಯಲ್ಲಿನ ಸತ್ಯಾಸತ್ಯತೆ ಎಷ್ಟು ಎನ್ನುವುದರ ಕುರಿತು 'Alt News' ಸುದ್ದಿ ಸಂಸ್ಥೆಯು Fact Check ನಡೆಸಿದೆ.

ಆಗಸ್ಟ್.31ರಂದು ಚೀನೀ ಯೋಧರ ಸಾವಿನ ವರದಿ

ಕಳೆದ ಜೂನ್.15ರಂದು ಗಾಲ್ವಾನ್ ನದಿ ಕಣಿವೆಯಲ್ಲಿ ಚೀನಾದ 40 ಯೋಧರು ಮೃತಪಟ್ಟಿರುವ ಬಗ್ಗೆ ಆಗಸ್ಟ್.31ರಂದು ಆಜ್ ತಕ್ ಸುದ್ದಿ ವಾಹಿನಿ ವರದಿ ಮಾಡಿತ್ತು. ಟಿವಿ ಆಂಕರ್ ರೋಹಿತ್ ಸರ್ದಾನ್ ಈ ಸುದ್ದಿ ವಾಚನ ಮಾಡಿದ್ದರು. " ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಚೀನಾ ಯೋಧರು ಮೃತಪಟ್ಟಿರುವ ಬಗ್ಗೆ ಹಲವು ಸಾಕ್ಷ್ಯ ಕೇಳುತ್ತಿದ್ದರು. ಇದೀಗ ನಾವು ಚೀನಾ ಯೋಧರ ಸಮಾಧಿಗಳನ್ನು ನಾವು ನಿಮಗೆ ಟಿವಿ ಸ್ಕ್ರೀನ್ ಮೇಲೆ ತೋರಿಸುತ್ತಿದ್ದೇವೆ. ಸಾಕ್ಷಿಯು ಇದೀಗ ನಿಮ್ಮ ಮನೆಯ ಟಿವಿ ಸ್ಕ್ರೀನ್ ಮೇಲೆಯೇ ಕಾಣಿಸುತ್ತಿದೆ. ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ 40 ಚೀನಾದ ಯೋಧರು ಮೃತಪಟ್ಟಿದ್ದು, ಹುತಾತ್ಮರಾದ ಯೋಧರಿಗೆ ಅಲ್ಲಿಯ ಯೋಧರು ಹೇಗೆ ಗೌರವ ಅರ್ಪಿಸುತ್ತಿದ್ದಾರೆ ಎನ್ನುವುದು ಇಲ್ಲಿ ಕಾಣುತ್ತಿದೆ" ಎಂದು ಹೇಳಿದ್ದರು.

'ಇಂಡಿಯಾ ಟುಡೆ' ಸುದ್ದಿ ವಾಹಿನಿಯಲ್ಲೂ ಅದೇ ತಪ್ಪು

ಆಜ್ ತಕ್ ಬೆನ್ನಲ್ಲೇ 'ಇಂಡಿಯಾ ಟುಡೆ' ಸುದ್ದಿ ವಾಹಿನಿ ಕೂಡಾ ಅದೇ ಸುದ್ದಿಯನ್ನು ಪ್ರಸಾರ ಮಾಡಿತು. ಆಜ್ ತಕ್ ಬಳಸಿದ ದೃಶ್ಯಾವಳಿಗಳನ್ನೇ ಬಳಸಿಕೊಂಡು ಇದು ಚೀನಾ ಯೋಧರ ಸಮಾಧಿ ಎಂದು ಸುದ್ದಿಯನ್ನು ಪ್ರಸಾರ ಮಾಡಿತು. ಆಂಕರ್ ನಬಿಲಾ ಜಮಾಲ್ ಈ ಸುದ್ದಿಯನ್ನು ಓದಿದರು. "ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರ ಸಮಾಧಿಗಳನ್ನು ನಾವು ತೋರಿಸುತ್ತಿದ್ದೇವೆ. ಚೀನಾ ಯೋಧರ ಸಾವಿಗೆ ಈ ಸಮಾಧಿಗಳೇ ಸಾಕ್ಷಿ" ಎಂದು ಹೇಳಿದರು.

106 ಪಿಎಲ್ಎ ಯೋಧರ ಸಮಾಧಿ ತೋರಿಸಿದ 'ಟೈಮ್ಸ್ ನೌ'

ಇಂಡಿಯಾ ಟುಡೆ, ಆಜ್ ತಕ್ ಸುದ್ದಿವಾಹಿನಿಗಳಷ್ಟೇ ಅಲ್ಲ ಟೈಮ್ಸ್ ನೌ ಕೂಡ ಚೀನಾ ಯೋಧರ ಸಮಾಧಿಗಳ ಕುರಿತು ಸುದ್ದಿ ಪ್ರಸಾರ ಮಾಡಿತು. ಎರಡು ವಾಹಿನಿಗಳು ತೋರಿಸಿದ ಫೋಟೋಗಳನ್ನೇ ತೋರಿಸಿದ್ದು, 106 ಪಿಎಲ್ಎ ಯೋಧರ ಸಮಾಧಿಗಳು ಗಾಲ್ವಾನ್ ಸಂಘರ್ಷದಲ್ಲಿ ಚೀನಾದ ಸೇನೆಗೆ ಆಗಿರುವ ಸಾವುನೋವುಗಳಿಗೆ ಸಾಕ್ಷಿ ಎಂದು ಹೇಳಲಾಯಿತು. ಆಂಕರ್ ರಾಹುಲ್ ಶಿವಶಂಕರ್ ಈ ಸುದ್ದಿಯನ್ನು ಓದಿದ್ದು, "ಗಾಲ್ವಾನ್ ಸಂಘರ್ಷದ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಿಯಾದ ನಡೆಯನ್ನೇ ಅನುಸರಿಸಿದ್ದಾರೆ. ಸುಖಾಸುಮ್ಮನೆ ಚೀನಾ ಪರವಾಗಿದ್ದಾರೆ ಎಂದು ಅನುಮಾನಿಸುವುದೇ ಏಕೆ" ಎಂದು ಪ್ರಶ್ನಿಸಿದ್ದರು. ಟೈಮ್ಸ್ ನೌ ಇದಕ್ಕೆ ಸಂಬಂಧಿಸಿದಂತೆ ಕೆಲವು ಟ್ವೀಟ್ ಗಳನ್ನು ಕೂಡಾ ಮಾಡಿತ್ತು.

ಸಮಾಧಿ ಹಿಂದಿನ ಸತ್ಯ ಕಂಡುಕೊಂಡ Alt News

ಸಮಾಧಿ ಹಿಂದಿನ ಸತ್ಯ ಕಂಡುಕೊಂಡ Alt News

ಇಂಡಿಯಾ ಟುಡೆ ಸುದ್ದಿ ವಾಹಿನಿ ಪ್ರಸಾರ ಮಾಡಿದ ಫೋಟೋವನ್ನು ತೆಗೆದುಕೊಂಡು Alt News ಅದರ ಜಾಡು ಹುಡುಕಿ ಹೊರಟಿತು. ಗೂಗಲ್ ಅರ್ತ್ ನಲ್ಲಿ ಪರೀಕ್ಷಿಸಿದಾಗ ಇದು 2011ರಲ್ಲಿ ಕ್ಲಿಕ್ಕಿಸಿದ ಫೋಟೋ ಎನ್ನುವುದು ಸಾಬೀತಾಯಿತು. ಈ ಪ್ರದೇಶದಲ್ಲಿ ಒಟ್ಟು 105 ಚೀನಾ ಯೋಧರ ಸಮಾಧಿಗಳಿದ್ದು, ಎಡಭಾಗದಲ್ಲಿ 43 ಮತ್ತು ಬಲಭಾಗದಲ್ಲಿ 62 ಸಮಾಧಿಗಳಿರುವುದು ಪತ್ತೆಯಾಗಿದೆ. ಇದೇ ಫೋಟೋವನ್ನು ಬಳಸಿಕೊಂಡು ಇಂಡಿಯಾ ಟುಡೆ ಆಗಸ್ಟ್.29ರಂದು ಸುದ್ದಿ ಪ್ರಸಾರ ಮಾಡಿತ್ತು.

ಚೀನಾ ಅಪ್ ಲೋಡ್ ಮಾಡಿರುವ ವಿಡಿಯೋದಲ್ಲಿನ ಸತ್ಯ

ಚೀನಾ ಅಪ್ ಲೋಡ್ ಮಾಡಿರುವ ವಿಡಿಯೋದಲ್ಲಿನ ಸತ್ಯ

ಚೀನಾದ ಕಂಗಕ್ಸಿವಾ ಪ್ರದೇಶದಲ್ಲಿ ನಿರ್ಮಿಸಿರುವ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರ ಸಮಾಧಿ ಸಂಖ್ಯೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದವು. ಇತ್ತೀಚಿಗೆ ಎರಡರಿಂದ ಐದು ಸಮಾಧಿಗಳನ್ನು ನಿರ್ಮಿಸಲಾಗಿದೆ ಎಂದು ಗುರುತಿಸಲಾದ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಆದರೆ ಅದೆಲ್ಲವೂ ಊಹಾಪೋಹಗಳಾಗಿವೆ. ಈ ಪ್ರದೇಶದಲ್ಲಿ ಒಟ್ಟು 108 ಸಮಾಧಿಗಳಿದ್ದು, ಕಂಗಕ್ಸಿವಾ ಮೆಮೋರಿಯಲ್ ಗೆ ಸಂಬಂಧಿಸಿದ ವಿಡಿಯೋವೊಂದನ್ನು 2020 ಏಪ್ರಿಲ್ ನಲ್ಲಿ ಚೀನಾ ಸರ್ಕಾರವೇ ಅಪ್ ಲೋಡ್ ಮಾಡಿತ್ತು. ಈ ವಿಡಿಯೋವನ್ನೇ ಬಳಸಿಕೊಂಡು ಭಾರತೀಯ ಸುದ್ದಿ ಸಂಸ್ಥೆಗಳು ಇವೆಲ್ಲ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾದ ಯೋಧರ ಸಮಾಧಿಗಳು ಎನ್ನುವಂತೆ ಸುದ್ದಿ ಪ್ರಸಾರ ಮಾಡಿದ್ದವು.

Fact Check

ಕ್ಲೇಮು

ಗಾಲ್ವಾನ್ ನದಿ ಕಣಿವೆಯಲ್ಲಿ ಸಂಭವಿಸಿದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರ ಸಮಾಧಿಯ ಚಿತ್ರಗಳಿವೆ

ಪರಿಸಮಾಪ್ತಿ

ಇದು ಚೀನಾದ ಕಂಗಕ್ಸಿವಾ ಮೆಮೊರಿಯಲ್ ನಲ್ಲಿರುವ ಚೀನಾ ಯೋಧರ ಸಮಾಧಿಯಾಗಿವೆ. ಆದರೆ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರ ಸಮಾಧಿಗಳಲ್ಲ. 1962ರಲ್ಲಿ ಭಾರತ-ಸೀನೋ ಯುದ್ಧದಲ್ಲಿ ಪ್ರಾಣ ಬಿಟ್ಟ ಚೀನಾ ಯೋಧರ ಸಮಾಧಿಯಾಗಿವೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: China Builded Graves For Soldiers Who Died In Galwan Clash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X