'ಮ್ಯಾಟ್ರು ಮುಗಿಸಿ ಬಿಡೋಣ..' ಎಂದು ಡಿಬಾಸ್ ಫ್ಯಾನ್ಸ್ ಮುಂದೆ ನಟ ಯುವ ಹೇಳಿದ್ದೇಕೆ?
ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರು ಈಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದೆ. ಈ ಪೈಕಿ ರಾಘವೇಂದ್ರ ರಾಜ್‌ಕುಮಾರ್ ಪುತ್ರ, ನಟ ಯುವ ರಾಜ್‌ಕುಮಾರ್ ಆರಂಭದಲ್ಲೇ ಜ್ಯೂನಿಯರ್ ಅಪ್ಪು ಎಂದು ಕರೆಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ ವಾರ್ ಹೊಸದೇನಲ್ಲ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ನಟರ ಅಭಿಮಾನಿಗಳ ನಡುವೆ ಇದು ವಿಪರೀತಕ್ಕೆ ಹೋಗಿದ್ದೂ ಇದೆ. ಇನ್ನು ಯುವ ರಾಜ್‌ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗಲೇ ನಟ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಆಗ ನಟ ಯುವ ಕೂಡ ಮ್ಯಾಟರ್ ಮಗಿಸಿ ಬಿಡೋಣ ಎಂದಿದ್ದಾರೆ.
ಈ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಕಿರಿಕ್ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಟೀಕೆ, ಟ್ರೋಲ್, ಮೀಮ್ ಮಾಡುವ ಮೂಲಕ ಅಭಿಮಾನದ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಇನ್ನು ಯಾವುದಾದರೂ ವೇದಿಕೆಗಳಲ್ಲಿ ನಟರಿದ್ದಾಗ ಬೇರೆ ನಟರ ಅಭಿಮಾನಿಗಳು ಬೇಕಂತಲೇ ಘೋಷಣೆ ಕೂಗುವುದು ಕೂಡ ಇತ್ತೀಚೆಗೆ ಹೆಚ್ಚಾಗಿದೆ. ಇದೇ ರೀತಿ ನಟ ಯುವ ವೇದಿಕೆಗೆ ಬಂದಾಗಲೂ ಹಲವರು ಡಿಬಾಸ್ ಎಂದು ಕೂಗಿದ್ದಾರೆ.

ಹೌದು, ರಾಮನಗರದ ಐತಿಹಾಸಿಕ ಶ್ರೀಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ನಟ ಯುವ ರಾಜ್‌ಕುಮಾರ್ ಹಾಗೂ ಎಕ್ಕ ಚಿತ್ರತಂಡ ಕೂಡ ಭಾಗಿಯಾಗಿತ್ತು. ಯುವ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ದರ್ಶನ್ ಅಭಿಮಾನಿಗಳು 'ಡಿಬಾಸ್....ಡಿ ಬಾಸ್..' ಎಂದು ಜೋರಾಗಿ ಕೂಗಾಡಿದ್ದಾರೆ. ಆಗ ಯುವ ರಾಜ್‌ಕುಮಾರ್ ತಮ್ಮದೇ ದಾಟಿಯಲ್ಲಿ ಮಾತನಾಡಿದ್ದಾರೆ. 'ಖುಷಿಯ ವಿಚಾರ ಏನಂದ್ರೆ, ಬೇರೆ ಬೇರೆ ನಟರ ಅಭಿಮಾನಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ನಿಮ್ಮ ಪ್ರೀತಿ ಇರಲಿ. ಆ ದೇವರು ನಿಮ್ಮೆಲ್ಲರನ್ನು ತುಂಬಾ ಚೆನ್ನಾಗಿ ಇಟ್ಟಿರಲಿ' ಎಂದಿದ್ದಾರೆ.
ಇರೋದು ಒಬ್ಬರೇ ಅಪ್ಪು
ಬಳಿಕ 'ಕೊನೆಯದಾಗಿ ಮ್ಯಾಟರ್ ಮುಗಿಸೋಣ! ಆಟ ಶುರು ಮಾಡಿದವನು ರಾಜ, ಅದನ್ನ ಆಡಿ ಮುಗಿಸೋನೆ ಎಕ್ಕ' ಎಂದು ಡೈಲಾಗ್ ಹೊಡೆದಿದ್ದಾರೆ. ಆಗ ಅಪ್ಪು ಅಭಿಮಾನಿಗಳು ಅಪ್ಪು..ಅಪ್ಪು ಎಂದು ಘೋಷಣೆ ನೀಡಿ ಕೌಂಟರ್ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಬೆಂಗಳೂರಿಗೆ ಸಾವಿರ ಜನ ಬರ್ತಾರೆ, ಹೋಗ್ತಾರೆ. ಇರೋದು ಒಬ್ರೇ ಅಪ್ಪು, ಲೋಕಲ್' ಎಂದೂ ಯುವ ಮತ್ತೊಂದು ಡೈಲಾಗ್ ಹೊಡೆದಿದ್ದಾರೆ. ಆಗ ಅಲ್ಲಿ ನೆರೆದಿದ್ದವರೆಲ್ಲ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
ಯುವ ರಾಜ್‌ಕುಮಾರ್ ಅಭಿನಯದ "ಎಕ್ಕ" ಸಿನಿಮಾಗೆ ಇತ್ತೀಚೆಗೆ ಅಭೂತಪೂರ್ವ ಕ್ರೇಜ್ ಕಂಡುಬರುತ್ತಿದೆ. ಯುವ ಸಿನಿಮಾ ಬಳಿಕ ಈ ಸಿನಿಮಾದ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಮೊದಲ ಸಿನಿಮಾ 'ಯುವ' ಯಶಸ್ಸಿನ ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಚಿತ್ರದ ಕಥೆ, ಟ್ರೈಲರ್ ಮತ್ತು ಹಾಡುಗಳು ಸಖತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಕೂಡ ಟ್ರೆಂಡ್‌ನಲ್ಲಿದೆ. ಈ ಸಿನಿಮಾ ಜುಲೈ 18ರಂದು ರಿಲೀಸ್ ಆಗಲಿದೆ.












Click it and Unblock the Notifications