Toxic movie: ತೆಲುಗು ರಾಜ್ಯಗಳಲ್ಲೂ ಯಶ್ ಹವಾ; ರಿಲೀಸ್‌ಗೂ ಮೊದಲೇ 120 ಕೋಟಿ ರೂ. ಬಾಚಿಕೊಂಡ ‘ಟಾಕ್ಸಿಕ್’
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ "ಟಾಕ್ಸಿಕ್" (Toxic: A Fairy Tale for Grown-Ups) ಸಿನಿಮಾ ಬಿಡುಗಡೆಯಿಗೂ ಮುನ್ನವೇ ಹೊಸ ದಾಖಲೆ ಬರೆದಿದೆ. ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳನ್ನು ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯಾದ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಸಂಸ್ಥೆ ₹120 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಮಾಹಿತಿ ಹಂಚಿಕೊಂಡಿದೆ.
ಇದು ತೆಲುಗು ಭಾಷೆಯಲ್ಲದ ಸಿನಿಮಾಗೆ ಈ ಎರಡು ರಾಜ್ಯಗಳಲ್ಲಿ ಇದುವರೆಗೆ ನಡೆದ ಅತಿದೊಡ್ಡ ವಿತರಣೆಯ ಒಪ್ಪಂದ ಎನ್ನಲಾಗಿದೆ. ಅಡ್ವಾನ್ಸ್ ಆನ್ ಕಮೀಷನ್ ಆಧಾರದ ಮೇಲೆ ನಡೆದ ಈ ಡೀಲ್‌ಗಾಗಿ ಮೂರು ಪ್ರಮುಖ ವಿತರಕರು ಸ್ಪರ್ಧೆ ನಡೆಸಿದ್ದು, ಅಂತಿಮವಾಗಿ ಎಸ್‌ವಿಸಿಗೆ ಟಾಕ್ಸಿಕ್ ವಿತರಣೆಯ ಹಕ್ಕುಗಳು ಲಭಿಸಿವೆ.

ಯಶ್‌ಗೆ ಸಿಕ್ಕಾಪಟ್ಟೆ ಮಾರ್ಕೆಟ್
ಕೆಜಿಎಫ್ ಚಾಪ್ಟರ್-2 ನಂತರ ನಟ ಯಶ್‌ಗೆ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಪಾರ ಜನಪ್ರಿಯತೆ ದೊರೆತಿದ್ದು, ನಾಲ್ಕು ವರ್ಷಗಳ ಬಳಿಕ ಅವರ ಮುಂದಿನ ಸಿನಿಮಾ ಬರುತ್ತಿರುವುದರಿಂದ 'ಟಾಕ್ಸಿಕ್' ಮೇಲೆ ಭಾರಿ ನಿರೀಕ್ಷೆಗಳು ಹೆಚ್ಚಾಗಿವೆ. ಯಶ್ ಅವರ ಮಾರುಕಟ್ಟೆ ಬಲವೇ ಈ ದಾಖಲೆ ಒಪ್ಪಂದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಿನಿಮಾರಂಗದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಟಾಲಿವುಡ್ ನಿರ್ಮಾಪಕ ದಿಲ್ ರಾಜು, ಕೆಜಿಎಫ್-2 ಬಳಿಕ ಯಶ್ ಅವರ ಮಾರುಕಟ್ಟೆ ದೇಶಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ವಿಸ್ತಾರವಾಗಿದೆ. ಅವರ ಮುಂದಿನ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಇದೆ. 'ಟಾಕ್ಸಿಕ್' ಎಂಬ ಈ ಪ್ರತಿಷ್ಠಿತ ಸಿನಿಮಾವನ್ನು ತೆಲುಗು ಪ್ರೇಕ್ಷಕರಿಗೆ ತಲುಪಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಟಾಕ್ಸಿಕ್ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮೂಲಕ ಬಿಡುಗಡೆ ಮಾಡಲಾಗುತ್ತಿದ್ದು, ವಿತರಣೆ ವ್ಯವಹಾರದಲ್ಲೇ ಈ ಸಿನಿಮಾ ಹೊಸ ಮಾನದಂಡ ಸ್ಥಾಪಿಸಿದೆ. ಯಶ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಾಧನೆ ಮಾಡುವ ನಿರೀಕ್ಷೆಯಿದೆ ಎಂದು ಸಿನಿ ವಲಯ ಅಭಿಪ್ರಾಯಪಟ್ಟಿದೆ.
The chaos is beginning to unfold.
— KVN Productions (@KvnProductions) February 6, 2026
Toxic: A Fairy Tale for Grown-ups arrives in theaters across Andhra Pradesh and Telangana through @SVCRelease
Intoxicating the world from 19-03-2026.#DaddyIsHome #ToxicTheMovie#TOXIConMarch19th @TheNameIsYash#Nayanthara@humasqureshi… pic.twitter.com/1uB4RbQ9sg
ಪ್ಯಾನ್ ಇಂಡಿಯಾ ಸಿನಿಮಾಗಳ ಯುಗದಲ್ಲಿ, ತೆಲುಗು ಭಾಷೆಯಲ್ಲದ ಸಿನಿಮಾಗೆ ₹120 ಕೋಟಿ ವಿತರಣೆ ಒಪ್ಪಂದ ದೊರೆತಿರುವುದು ಯಶ್ ಅವರ ಮಾರುಕಟ್ಟೆ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಗೆಲುವು ಸಾಧಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ
ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಈಗಾಗಲೇ ಭಾರತೀಯ ಸಿನಿರಂಗದಲ್ಲಿ ಭಾರೀ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ ಯಶ್, ನಾಲ್ಕು ವರ್ಷಗಳ ವಿರಾಮದ ಬಳಿಕ ಈ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.
ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ವಿಭಿನ್ನ ಕಥಾವಸ್ತು ಸಿನಿಮಾ ಪ್ರೇಕ್ಷಕರನ್ನು ಹೊಸ ಅನುಭವಕ್ಕೆ ಕರೆತರುವ ನಿರೀಕ್ಷೆ ಇದೆ. 'ಟಾಕ್ಸಿಕ್' ಎಂಬ ಶೀರ್ಷಿಕೆಯೇ ಚಿತ್ರದ ಸ್ವರೂಪ ಎಷ್ಟು ವಿಭಿನ್ನವಾಗಿರಲಿದೆ ಎಂಬುದಕ್ಕೆ ಸೂಚನೆ ನೀಡುತ್ತಿದೆ. ಚಿತ್ರವನ್ನು ವೆಂಕಟ ಕೆ. ನಾರಾಯಣ ಅವರು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಯಶ್ ಅವರ ವಿಭಿನ್ನ ಲುಕ್ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣ ಕಾಣಿಸಿಕೊಳ್ಳಲಿದೆ. ಬಲಿಷ್ಠ ಪಾತ್ರಗಳು ಮತ್ತು ಮಹಿಳಾ ಪಾತ್ರಗಳಿಗೂ ಸಮಾನ ಮಹತ್ವ ನೀಡಲಾಗಿರುವುದು ಚಿತ್ರದ ಮತ್ತೊಂದು ವಿಶೇಷತೆ ಎಂದು ಹೇಳಲಾಗುತ್ತಿದೆ.












Click it and Unblock the Notifications