Tiger Prabhakar: ಟೈಗರ್ ಪ್ರಭಾಕರ್ ಮೂರು ಮದುವೆ ಆದ್ರೂ ಪತ್ನಿಯರಿಂದ ದೂರ ಉಳಿದಿದ್ದೇಕೆ?
ಕನ್ನಡದ ಚಿತ್ರರಂಗದಲ್ಲಿ ಆಗಿನ ಕಾಲಕ್ಕೇ ಖಡಕ್ ವಿಲನ್ ಹಾಗೂ ಹೀರೋ ಆಗಿ ಮಿಂಚಿದ್ದರು ಟೈಗರ್ ಪ್ರಭಾಕರ್. ಈಗ ಅವರ ಮಗ ವಿನೋದ್ ಪ್ರಭಾಕರ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರಭಾಕರ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು. ಇನ್ನು ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಪ್ರಭಾಕರ್ ಅವರು ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದ್ದರು. ಆದರೆ ಮೂವರು ಪತ್ನಿಯರಿಂದಲೂ ಪ್ರಭಾಕರ್ ಕೊನೆಗೆ ದೂರವಾಗಿದ್ದರು.
ಪ್ರಭಾಕರ್ ಹೆಚ್ಚು ಬೇಡಿಕೆಯಿರುವ ನಾಯಕ ನಟರಲ್ಲಿ ಒಬ್ಬರಾಗಿದ್ದರು. ಅವರು ಆ ಕಾಲದ ಎಲ್ಲ ಕನ್ನಡದ ಟಾಪ್ ನಟಿಯರೊಂದಿಗೆ ನಟಿಸಿದ್ದರು. ಪ್ರಭಾಕರ್ ಅವರು ನಾಯಕನಾಗಿ ನಟಿಸಿದ 10ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಆಕ್ಷನ್ ಹಾಗೂ ತಮ್ಮ ಹಾಸ್ಯ ನಟನೆಯಿಂದ ಪ್ರಭಾಕರ್ ಜನಪ್ರಿಯರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್ ಅನ್ನು ಒಟ್ಟಾಗಿ ಸೇರಿ ಕಂಗ್ಲಿಷ್ ಮಾತುಗಳಿಂದ ಪ್ರಭಾಕರ್ ಕನ್ನಡ ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಆದರೆ ಪ್ರಭಾಕರ್ ಅವರ ವೈಯಕ್ತಿಕ ಬದುಕು ಅಷ್ಟೊಂದು ಚೆನ್ನಾಗಿರಲಿಲ್ಲ.

1974ರಲ್ಲಿ ಪ್ರಭಾಕರ್ ಅವರು ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅವರ ದಾಂಪತ್ಯ ಜೀವನ ಮುರಿದುಬಿದ್ದಿತ್ತು, ಡಿವೋರ್ಸ್ ಪಡೆದಿದ್ದರು. ಬಳಿಕ 1985ರಲ್ಲಿ ನಟಿ ಜಯಮಾಲಾ ಅವರನ್ನು ಮದುವೆಯಾಗಿದ್ದರು. ಆದ್ರೆ ಕಾರಣಾಂತರಗಳಿಂದ ಅವರೊಂದಿಗೂ ಹೆಚ್ಚು ಕಾಲ ಜೀವನ ನಡೆಸಲಿಲ್ಲ. ನಂತರ ತೆಲುಗು ಚಿತ್ರರಂಗದ ನಟಿ ಅಂಜು ಅವರನ್ನು ಮೂರನೇ ಮದುವೆಯಾಗಿದ್ದರು.
ಪ್ರಭಾಕರ್ ಅವರ 3ನೇ ಮದುವೆ ಜೀವನ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಅಂಜು ಅವರು ಪ್ರಭಾಕರ್ ಅವರಿಂದ ದೂರ ಆಗಿದ್ದರು. ಅಂಜು ಹಾಗೂ ಪ್ರಭಾಕರ್ ದಂಪತಿಗೆ ಒಬ್ಬ ಮಗ ಕೂಡ ಇದ್ದು, ಹೆಚ್ಚಾಗಿ ಈ ಬಗ್ಗೆ ಹೊರಜಗತ್ತಿಗೆ ಪರಿಚಯವಾಗಲಿಲ್ಲ. ಮೂರು ತಿಂಗಳ ಮಗುವಾಗಿದ್ದಾಗಲೇ ಅಂಜು ಅವರು ಪ್ರಭಾಕರ್ ಅವರಿಂದ ದೂರವಾಗಿದ್ದರು.
'ಗರ್ಭಿಣಿಯಾದಾಗ ಮೊದಲ ಮದುವೆ ವಿಚಾರ ಗೊತ್ತಾಯ್ತು'
'ಪ್ರಭಾಕರ್ ಅವರಿಗೆ ಎರಡು ಮದುವೆ ಆಗಿದ್ದ ವಿಚಾರ ನನಗೆ ಗೊತ್ತಿರಲಿಲ್ಲ. ಅವರು ನನ್ನ ಬಳಿ ಒಂದು ಮದುವೆ ಮಾತ್ರವೇ ಹೇಳಿಕೊಂಡಿದ್ದರು. ನಾನು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಅವರು ಮೊದಲ ಮದುವೆ ಬಗ್ಗೆ ಹೇಳಿದ್ದರು ಎಂದು ಅಂಜು ಅವರು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಆಗ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಆಗ ನಾನು ನನಗಿಂತ ನನ್ನ ಮಗನ ಬಗ್ಗೆ ಹೆಚ್ಚು ಯೋಚಿಸಬೇಕಿತ್ತು. ಮಗನಿಗೆ ತನ್ನ ತಂದೆ ಯಾರು ಅಂತ ಗೊತ್ತು. ಆದರೆ ಯಾವತ್ತೂ ಅವರ ಬಗ್ಗೆ ನನ್ನನ್ನು ಪ್ರಶ್ನಿಸಲಿಲ್ಲ. ಜೀವನ ಅಂದ್ರೆ ಖುಷಿಯಾಗಿರೋದೇ ಅಂತಲ್ಲ, ಏರುಪೇರು ಇದ್ದೇ ಇರುತ್ತೆ, ಅದನ್ನ ನಾವು ಎದುರಿಸಬೇಕು' ಎಂದಿದ್ದರು. ವೈಯಕ್ತಿಕ ಬದುಕಿನಲ್ಲಿ ಏರುಪೇರು ಕಂಡಿದ್ದ ಟೈಗರ್ ಪ್ರಭಾಕರ್ ಇಂದಿಗೂ ಮರೆಯಲಾರದ ಆಕ್ಷನ್ ಹೀರೋ ಆಗಿ ಉಳಿದುಕೊಂಡಿದ್ದಾರೆ.












Click it and Unblock the Notifications