"ಜಗಳ ಆಡಿದ್ದೀವಿ ಸರಿ ಮಾಡ್ತೀರ, ನಮ್ಮನೆ ವಿಷ್ಯ ನಿಮಗ್ಯಾಕೆ.." ಯಶ್ ತಾಯಿ ಗರಂ ಆಗಿದ್ದೇಕೆ?
ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ನೇರ ನುಡಿ ಹಾಗೂ ಇತ್ತೀಚಿನ ಸಂದರ್ಶನಗಳಲ್ಲಿ ಆಡಿರುವ ಮಾತುಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಮಗ ಯಶ್ ಬಗ್ಗೆ ಹಾಗೂ ತಮ್ಮ ಸಂಬಂಧಿಯೂ ಆದ ನಟಿ ದೀಪಿಕಾ ದಾಸ್ ಬಗ್ಗೆ ಪುಷ್ಪ ಅವರು ಆಡಿದ್ದ ಮಾತುಗಳು ವೈರಲ್ ಕೂಡ ಆಗಿತ್ತು. ಯಶ್ ಹಾಗೂ ತಾಯಿ ಮಾತು ಬಿಟ್ಟಿದ್ದಾರೆ, ಸೊಸೆ ರಾಧಿಕಾ ಅವರೊಂದಿಗೂ ಗಲಾಟೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಪ ಅವರು ಖಡಕ್ ತಿರುಗೇಟು ನೀಡಿದ್ದಾರೆ.
'ಅದನ್ನ ಕೇಳೋಕೆ ಯಾರವ್ರು?'
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪುಷ್ಪ ಅವರ ಸಂದರ್ಶನದ ವಿಡಿಯೋಗಳು ವೈರಲ್ ಆಗಿವೆ. ಯಶ್ ಹೆಸರು ಹಾಳು ಮಾಡ್ತಿದ್ದಾರೆ ಎಂದೆಲ್ಲ ಕಾಮೆಂಟ್‌ಗಳು ಬರುತ್ತಿವೆ. ಈ ಬಗ್ಗೆ ಖಡಕ್ ತಿರುಗೇಟು ನೀಡಿರುವ ಪುಷ್ಪ, 'ಅವನು ನನ್ನ ಮಗ, ಅದನ್ನ ಕೇಳೋಕೆ ಅವರೆಲ್ಲ ಯಾರು? ನನ್ನ ಮಗನ ಹೆಸರನ್ನ ನಾನು ಹೇಗಾದ್ರೂ ಹೇಳಿಕೊಳ್ತೀನಿ. ನಾನೇನು ಅವರ ಮಗನ ಹೆಸರು ಹಾಳು ಮಾಡ್ತಿಲ್ಲ ಅಲ್ವಾ? ನನ್ನ ಮಗನ ಹೆಸರು ನಾನು ಹೇಗಾದ್ರೂ ಹಾಳು ಮಾಡಿಕೊಳ್ತೀನಿ' ಎಂದು ಗರಂ ಆಗಿ ಹೇಳಿದ್ದಾರೆ.

'ಹೆಸರು ಹಾಳು ಮಾಡ್ತೀನೋ? ಬಿಡ್ತೀನೋ ಅನ್ನೋದು ನನಗೆ ಮಾತ್ರ ಗೊತ್ತಿರುತ್ತೆ. ನನಗೆ ಬುದ್ಧಿ ಇಲ್ಲ ಅನ್ನುವಷ್ಟು ಅವರಿಗೆಲ್ಲ ಜ್ಞಾನ ಇಲ್ಲ. ನನ್ನ ಮಗನನ್ನ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸಿದ್ದೀನಿ. ಹಾಳು ಮಾಡೋರು ಯಾರೂ ಮಗನನ್ನ ಆ ಮಟ್ಟಕ್ಕೆ ಕಳಿಸೋಕೆ ಆಗಲ್ಲ. ಹೇಳೋರೆಲ್ಲ ಎಲ್ಲಿಂದ ಬಂದೋರು? ಅವರಿಗೆ ಇನ್ನೇನು ಕೆಲಸ ಇರಲ್ಲ ಅಲ್ವಾ? ನಮ್ಮ ವಿಷಯ ತಗೊಂಡು ಟ್ರೋಲ್ ಮಾಡ್ತಿದ್ರೆ ಜನ ನೋಡ್ತಾರಲ್ಲ ಅಂತ' ಎಂದಿದ್ದಾರೆ.
'ಯಾರು ಹೇಳ್ತಾರೋ ಅವರೇ ಉತ್ತರ ಕೊಡ್ಲಿ'
'ನಮ್ಮ ಮಗನನ್ನ ಹಾಳು ಮಾಡ್ತೀವೋ, ಬಿಡ್ತೀವೋ ಅದು ನಮಗೆ ಸೇರಿದ್ದು. ಇದನ್ನೆಲ್ಲ ಕೇಳೋಕೆ ಅವರು ಯಾರು? ನಾನುಂಟು, ನನ್ನ ಮಗ ಉಂಟು, ಅವರಿಗ್ಯಾಕೆ ಅದೆಲ್ಲ ಎಂದು ಟಾಂಗ್ ನೀಡಿದ್ದಾರೆ. ಅಮ್ಮ ಮಗ ಸರಿಯಾಗಿ ಮಾತನಾಡ್ತಿಲ್ಲ, ಅತ್ತೆ-ಸೊಸೆ ನಡುವೆ ಗಲಾಟೆ ಎಂಬ ಪ್ರಶ್ನೆಗೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಯಾರು ಮಾತನಾಡುತ್ತಿದ್ದಾರೋ ಅವರ ಬಳಿಯೇ ಉತ್ತರ ಕೇಳು, ನಾನು ಇದಕ್ಕೆ ಕ್ಲಾರಿಟಿ ಕೊಡಲ್ಲ' ಎಂದು ಸಂದರ್ಶಕರಿಗೆ ಹೇಳಿದ್ದಾರೆ.
'ಸೋಷಿಯಲ್ ಮೀಡಿಯಾದಲ್ಲಿ ಅವರು ಬಂದು ನನ್ನೇ ಈ ಬಗ್ಗೆ ಕೇಳಲಿ. ನಿಮಗೆ ಕೇಳಿದ್ರೆ ಅವರ ಹತ್ರಾನೇ ಉತ್ತರ ಕೇಳಿ. ನಮ್ಮನೆ ವಿಷ್ಯಕ್ಕೆ ನಾನು ಉತ್ತರ ಕೊಡ್ತೀನಿ, ನೀನ್ಯಾರು ಅದನ್ನ ಕೇಳೋಕೆ? ಜನ ಹೇಳುವ ಮಾತಿಗೆ ನಾನು ತಲೆ ಕೆಡಿಸಿಕೊಳ್ಳಬೇಕು, ನೀವಲ್ಲ. ನಾವು ಜಗಳ ಮಾಡ್ತೀವಿ, ಸರಿ ಮಾಡ್ತೀರಾ? ನಮ್ಮನೆ ವಿಷ್ಯ ನಿಮಗ್ಯಾಕೆ? ನಮ್ಮ ಕುಟುಂಬದ ವಿಚಾರಗಳ ಬಗ್ಗೆ ಮಾತನಾಡುವ ಮೊದಲು, ರಸ್ತೆಯಲ್ಲಿ ಗುಂಡಿ ಬಿದ್ದಿವೆ ಅದನ್ನು ಹೋಗಿ ಸರಿಮಾಡಿಸಿ. ಡಿಕೆ ಶಿವಕುಮಾರ್ ಬಳಿ ಹೋಗಿ ಈ ಸಮಸ್ಯೆ ಸರಿ ಮಾಡಿ, ಆಮೇಲೆ ಯಶ್ ಅವರ ಮನೆ ಸರಿ ಮಾಡಿ' ಎಂದು ಗರಂ ಆಗಿದ್ದಾರೆ ಪುಷ್ಪ.












Click it and Unblock the Notifications