Pawan Kalyan: ನಟ ಪವನ್ ಕಲ್ಯಾಣ್‌ರ ವಾರಾಹಿ ಯಾತ್ರೆಗೆ ವಿಶಾಖಪಟ್ಟಣದಲ್ಲಿ ನಿರ್ಬಂಧ- ಆಂಧ್ರದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ
ಹೈದರಾಬಾದ್, ಆಗಸ್ಟ್ 10: ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಇಂದು ವಿಶಾಖಪಟ್ಟಣದಿಂದ ಮೂರನೇ ಹಂತದ ವಾರಾಹಿ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರ ವಾರಾಹಿ ಯಾತ್ರೆಗೆ ವಿಶಾಖಪಟ್ಟಣದ ಪೊಲೀಸರು ನಿರ್ಬಂಧ ಹೇರಿದ್ದಾರೆ.
ವಿಶಾಖಪಟ್ಟಣದ ಏರ್‌ಪೋರ್ಟ್‌ನಿಂದ ಬಂದರು ರಸ್ತೆಯ ಮೂಲಕ ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಪೊಲೀಸರು ಸೂಚಿಸಿದ್ದು, ರೋಡ್‌ಶೋ ಆಯೋಜಿಸಬಾರದು ಎಂದು ನಿರ್ಬಂಧ ಹೇರಿದ್ದಾರೆ.

ವಾರಾಹಿ ಯಾತ್ರೆ ಅಂಗವಾಗಿ ಸಂಜೆ 5 ಗಂಟೆಗೆ ನಗರದ ಜಗದಾಂಬಾ ಜಂಕ್ಷನ್‌ನಲ್ಲಿ ಸಭೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಅಕ್ಟೋಬರ್‌ನಲ್ಲಿ ಪವನ್ ಕಲ್ಯಾಣ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂಸಾಚಾರದವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ಬಂಧದಂತಹ ಕ್ರಮ ಕೈಗೊಂಡಿದ್ದಾರೆ.
ರಾಜ್ಯ ಸಚಿವರು ಮತ್ತು ವೈಎಸ್‌ಆರ್‌ಸಿಪಿ ಮುಖಂಡರೊಬ್ಬರ ವಾಹನಗಳ ಮೇಲೆ ಪವನ್ ಕಲ್ಯಾಣ್ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದರು. ನಗರದಲ್ಲಿ 'ಜನ ವಾಣಿ' ಕಾರ್ಯಕ್ರಮಗಳನ್ನು ನಡೆಸಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಪವನ್ ಕಲ್ಯಾಣ್‌ರಿಂದ ಸಾರ್ವಜನಿಕ ಸಭೆ
ಇಂದು ಸಂಜೆ 5 ಗಂಟೆಗೆ ಪವನ್ ಕಲ್ಯಾಣ್ ಅವರು ಜಗದಂಬಾ ಜಂಕ್ಷನ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಾಕಷ್ಟು ಜನ ಸೇನಾ ಧ್ವಜಗಳು ಮತ್ತು ಫ್ಲಡ್‌ಲೈಟ್‌ಗಳೊಂದಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬೆಳಗ್ಗೆಯಿಂದಲೇ ಟ್ರಾಫಿಕ್ ಪೋಲೀಸರು ಕಾರು ಮತ್ತು ಬೈಕ್‌ಗಳ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ.
ವಿಶಾಖಪಟ್ಟಣದ ನಂತರ, ಪವನ್ ಕಲ್ಯಾಣ್ ತಮ್ಮ ವಾರಾಹಿ ಯಾತ್ರೆಯ ಮೂರನೇ ಹಂತದ ಅಂಗವಾಗಿ ಉತ್ತರ ಆಂಧ್ರ ಪ್ರದೇಶದಲ್ಲಿ ಪ್ರವಾಸ ಮಾಡಲಿದ್ದಾರೆ. ಕಳೆದ ಬಾರಿ ಅವರು ವಿಶಾಖಪಟ್ಟಣದಲ್ಲಿದ್ದಾಗ ಸಾಕಷ್ಟು ಹಿಂಸಾಚಾರ ನಡೆದಿತ್ತು. ಸ್ಥಳೀಯ ಪೊಲೀಸರು ಅವರನ್ನು ತಮ್ಮ ಹೋಟೆಲ್‌ನಲ್ಲಿ ಇರಿಸಿದ್ದರಿಂದ ಅವರು ತಮ್ಮದೇ ಪಕ್ಷದ ಸಭೆಯೊಂದಕ್ಕೆ ಗೈರಾಗಿದ್ದರು.
ತೆಲುಗು ಚಿತ್ರದ ಖ್ಯಾತ ನಟರೂ ಆಗಿರುವ ಪವನ್ ಕಲ್ಯಾಣ್ ಅವರು ಮೆಗಾಸ್ಟಾರ್ ಚಿರಂಜಿವಿಯ ಕಿರಿಯ ಸಹೋದರ. ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅವರ ಚಿಕ್ಕಪ್ಪ. ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್ ಅವರ ಸೋದರ ಮಾವ.

ತೋಲಿಪ್ರೇಮ, ಅಂತಾರೆಂಟಿಕೆ ದಾರೇದಿ, ಗಬ್ಬರ್ ಸಿಂಗ್, ಬದ್ರಿ, ಗುಡುಂಬಾ ಶಂಕರ್ ಚಿತ್ರಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ.












Click it and Unblock the Notifications