'ಅಂದು ರಾತ್ರಿ ಹೆಣ್ಣಿನ ಕೆಟ್ಟ ನಗು.. ಗೆಜ್ಜೆ ಸದ್ದು!' ಭಯಾನಕ ಅನುಭವ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು
ಕನ್ನಡ ಚಿತ್ರರಂಗದಲ್ಲಿ ʼಮಿನುಗುತಾರೆ ಕಲ್ಪನಾʼ ಎಂದರೇ ದೊಡ್ಡ ಅಭಿಮಾನಿ ಬಳಗವೇ ಇದೆ. ಕಲ್ಪನಾ ಅವರ ಹೆಸರು ಕೇಳಿದರೆ ಇಂದಿಗೂ ಸಿನಿರಸಿಕರು ರೋಮಾಂಚನಗೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ತಮ್ಮ ನಟನೆಯ ಮೂಲಕ ಸಿನಿಮಾರಂಗದಲ್ಲಿ ಮಿಂಚಿ ಮರೆಯಾಗಿದವರು ಕಲ್ಪನಾ.
ದಶಕಗಳ ಕಾಲ ಕನ್ನಡ ಚಿತ್ರರಂಗದ ಮೇರುನಟಿಯಾಗಿ ಮಿಂಚಿದ್ದ ಅವರು ʼಶರಪಂಜರʼ ಸಿನಿಮಾದಲ್ಲಿನ ಅಭಿನಯದಿಂದ ಕನ್ನಡಿಗರ ಮನೆಮಾತಾಗಿದ್ದರು. ಆದರೆ ವಿಧಿಯಾಟ ಅವರನ್ನು ಸಣ್ಣ ವಯಸ್ಸಿಗೆ ಈ ಜಗತ್ತನಿಂದ ದೂರ ಮಾಡಿತ್ತು. ಸಾಧನೆಯ ಉತ್ತುಂಗದಲ್ಲಿದ್ದ ಅವರು ದುರಂತ ಅಂತ್ಯ ಕಂಡಿ ಘಟನೆ ಇಂದಿಗೂ ಮಾಸಿಲ್ಲ.

ನಟನೆಗೆ ಒಂದು ಬ್ರ್ಯಾಂಡ್ ಎಂಬಂತಿದ್ದ ಕಲ್ಪನಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಿನಿರಂಗಕ್ಕೆ ಆಘಾತ ನೀಡಿದ್ದರು. ಬೆಳಗಾವಿಯ ಗೋಟೂರ್ ಪ್ರವಾಸ ಮಂದಿರದಲ್ಲಿ ಕಲ್ಪನ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಈ ಪ್ರವಾಸಿ ಮಂದಿರ ಬಗ್ಗೆಯೂ ಕೆಲವರು ಏನೋನೋ ಕಟ್ಟು ಕಥೆಗಳನ್ನು ಹೇಳಿದ್ದೂ ಉಂಟು. ಇದೆಲ್ಲ ಗಾಳಿ ಮಾತು ಎಂದು ನಂಬದೇ ಇದ್ದದ್ದೂ ಉಂಟು.
ಆದರೆ, ಕಲ್ಪನಾ ಅವರ ಕುರಿತಾಗಿ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರು ಕೂಡ ಕಲ್ಪನಾ ಅವರು ಮೃತಪಟ್ಟಿದ್ದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರಂತೆ. ಆಗ ಅಲ್ಲಿ ಕೆಲ ವಿಚಿತ್ರ ಹಾಗೂ ಭಯಾನಕ ಅನುಭವವಾಗಿತ್ತು ಎಂಬ ವಿಚಾರವನ್ನು ಖುದ್ದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಚಂದ್ರು ಅವರು ಹೇಳಿರುವಂತೆ, ʼನಾನು ಆಗ ಜನತಾ ಪಾರ್ಟಿಯಲ್ಲಿದ್ದೆ. ನಾನು ಹಾಗೂ ನಾಗಾರಾಜ ಮೂರ್ತಿ ಕಾರಿನಲ್ಲಿ ಬೆಳಗಾವಿಗೆ ಹೋಗಿದ್ದೆವು. ಆಗ ಇದೇ ಪ್ರವಾಸಿ ಮಂದಿರವನ್ನು ತಲುಪಿದ್ದೆವು. ಅಷ್ಟೊತ್ತಿಗೆ ಸಮಯ ಆಗಲೇ ರಾತ್ರಿ 11.30 ಆಗಿತ್ತು. ಅಲ್ಲಿ ಹೆಚ್ಚು ಜನರೂ ಬರುತ್ತಿರಲಿಲ್ಲʼ ಎಂದಿದ್ದಾರೆ.
ʼಅಲ್ಲಿದ್ದ ವ್ಯಕ್ತಿಯೊಬ್ಬರನ್ನು ನಾಗರಾಜ್ ಮೂರ್ತಿ ಕರೆದರು. ಆತ ನಮ್ಮ ಬಳಿ ಬಂದ. ಪ್ರವಾಸಿ ಮಂದಿರದ ಬೀಗ ತೆಗೆಯಿರಿ ಎಂದು ಕೇಳಿದೆವು. ಆದರೆ, ಆತ ಇಲ್ಲಿಂದ 30 ಕಿ.ಮೀ ದೂರದಲ್ಲಿ ಬೇರೊಂದು ಪ್ರವಾಸಿ ಮಂದಿರವಿದೆ. ನೀವು ಅಲ್ಲಿಗೆ ಹೋಗಿ ಎಂದು ಸತಾಯಿಸಿದ್ದ. ಆದರೂ ನಾವು ಆತನ ಮಾತನ್ನು ಲೆಕ್ಕಿಸದೆ ಈ ಪ್ರವಾಸಿ ಮಂದಿರದಲ್ಲೇ ಉಳಿದುಕೊಂಡೆವು.ʼ
ʼನಿದ್ರೆಗೆ ಜಾರಿ ಕೆಲ ಹೊತ್ತಷ್ಟೇ ಆಗಿತ್ತು. ಇದ್ದಕ್ಕಿದ್ದಂತೆ ಅಲ್ಲಿ ನನ್ನ ಸುತ್ತಮುತ್ತ ಯಾರೋ ನಕ್ಕಂತೆ ಸದ್ದು ಕೇಳಿಸಿತು. ಅದೊಂದು ಕೆಟ್ಟದಾದ ನಗು. ಕೂಡಲೇ ನಾನು ಎಚ್ಚರಗೊಂಡು ನಾಗರಾಜಮೂರ್ತಿಯನ್ನು ಎಚ್ಚರಿಸಿದೆ. ಯಾಕೋ ಇಲ್ಲಿರುವುದು ಬೇಡ ಎಂದು ಹೇಳಿದೆ. ಆದರೆ, ನಾಗರಾಜಮೂರ್ತಿ ಒಪ್ಪಲಿಲ್ಲ. ಮತ್ತೆ ಕೆಲ ನಿಮಿಷಗಳ ನಂತರ ಅಲ್ಲಿ ಗೆಜ್ಜೆ ಸದ್ದು ಕೇಳಿಸಿತು. ಇಬ್ಬರಿಗೂ ಭಯವಾಗಿ ಅಲ್ಲಿಂದ ಹೊರಟೆವುʼ ಎಂದು ಮುಖ್ಯಮಂತ್ರಿ ಚಂದ್ರು ಆ ದಿನ ಎದುರಾದ ಭಯಾನಕ ಅನುಭವವನ್ನು ಹೇಳಿಕೊಂಡಿದ್ದಾರೆ.
ʼಕಲ್ಪನಾ ಅವರು ಸಾವನ್ನಪ್ಪಿದ ದಿನದಿಂದಲೂ ಇಲ್ಲಿ ಇದೇ ರೀತಿಯ ಸಮಸ್ಯೆಗಳಾಗುತ್ತಿದ್ದು, ದಯವಿಟ್ಟು ಇಲ್ಲಿಂದ ಹೊರಟು ಹೋಗಿ ಎಂದು ಅಲ್ಲಿ ಕೆಲಸಕ್ಕಿದ್ದ ನಂತರ ಹೇಳಿದರು. ಇದೆಲ್ಲ ಭ್ರಮೆಯಲ್ಲಿ ಆಗಿದ್ದೋ? ನಿಜವಾಗಿ ಆಗಿದ್ದೋ ಗೊತ್ತಿಲ್ಲ. ಆದರೆ, ನಮಗೆ ಈ ಅನುಭವ ಆಗಿದ್ದಂತೂ ನಿಜʼ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications