Rishab Shetty: ಶಿವಾಜಿಯಾದ ರಿಷಬ್ ಶೆಟ್ಟಿ- ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್
ಬೆಂಗಳೂರು ಫೆಬ್ರವರಿ 26: ಕಾಂತಾರಾ ಸಿನಿಮಾ ಮೂಲಕ ಎಲ್ಲೆಡೆ ಭಾರೀ ಸದ್ದು ಮಾಡಿದ ನಟ ರಿಷಬ್ ಶೆಟ್ಟಿ. ಅವರೀಗ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಟಾಳ್ ನಾಗರಾಜ್ ಅವರು ನಟ ರಿಷಬ್ ಶೆಟ್ಟಿಗೆ ಖಡಕ್ ಸಂದೇಶವೊಂದನ್ನು ನೀಡಿದ್ದಾರೆ.
ಹೌದು... ಕನ್ನಡ ಪರ ಹೋರಾಟಗಾರ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಸೆಟ್ಟಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಯಾಕೆಂದರೆ ರಿಷಬ್ ಶೆಟ್ಟಿ ಮುಂದಿನ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಾಜಿ ಪಾತ್ರ ಮಾಡ್ತಿರುವ ರಿಷಬ್ ಅವರನ್ನು ಜನರು ಒಪ್ಪಿಕೊಳ್ಳುವುದಿಲ್ಲ ಎಂದು ವಾಟಾಳ್ ತಿಳಿಸಿದ್ದಾರೆ.

ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರೆ ಜನ ಅವರನ್ನು ಒಪ್ಪುವುದಿಲ್ಲ ಎಂದಿದ್ದಾರೆ ವಾಟಾಳ್. ಕಾಂತಾರ ಸಿನಿಮಾ ಮೂಲಕ ಭಾರೀ ಜನ ಮೆಚ್ಚುಗೆ ಪಡೆದ ರಿಷಬ್ ಇದೀಗ ಶಿವಾಜಿ ಪಾತ್ರದಲ್ಲಿ ದೊಡ್ಡ ಪರದೆಯ ಮೇಲೆ ಮಿಂಚಲು ಹೊಟಿದ್ದಾರೆ. ಆದರೆ ಆ ಪಾತ್ರವನ್ನು ಜನ ಅಷ್ಟೊಂದು ಸುಲಭವಾಗಿ ಸ್ವೀಕರಿಸುವುದಿಲ್ಲ ಎಂದು ವಾಟಾಳ್ ಹೇಳಿದ್ದಾರೆ. ಹಾಗಾದರೆ ವಾಟಾಳ್ ರಿಷಬ್ ಶೆಟ್ಟಿ ವಿರುದ್ಧ ಕಿಡಿ ಕಾರಲು ಕಾರಣ ಏನು?
ವಾಟಾಳ್ ನಾಗರಾಜ್ ಆರೋಪವೇನು ಅಂದರೆ -ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ತುಂಬಾ ಇದೆ. ಆದರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಹೋರಾಟಗಾರರ ಪ್ರತಿಮೆಗಳು ಇಲ್ಲ. ಹೀಗಿರುವಾಗ ಶಿವಾಜಿ ಸಿನಿಮಾ ಕನ್ನಡದಲ್ಲಿ ಯಾಕೆ ಎಂದು ವಾಟಾಳ್ ಪ್ರಶ್ನೆ ಮಾಡಿದ್ದಾರೆ. ನಮಗೆ ಶಿವಸೇನೆ ಬೇಕಾಗಿಲ್ಲ. ಅವರು ಕರ್ನಾಟಕಕ್ಕೆ ಬರಬೇಕಾಗಿಲ್ಲ ಎಂದು ವಾಟಾಳ್ ದೂರಿದ್ದಾರೆ. ಹಾಗೊಂದು ವೇಳೆ ಶಿವಾಜಿ ಪಾತ್ರದಲ್ಲಿ ಸಿನಿಮಾ ಮಾಡಿದ್ದೇ ಆದರೆ ಪ್ರತಿಭಟನೆ ನಡೆಸುವುದಾಗಿ ಖಡಕ್ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.
ಇದೇ ಕಾರಣಕ್ಕೆ ಇಂದು 11:30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡ್ತೇವೆ. ವುಡ್‌ಲ್ಯಾಡ್ ಹೋಟೆಲ್ನಲ್ಲಿ ಎಲ್ಲಾ ಕನ್ನಡ ಪರ ಸಂಘಟನೆಗಳ ಸಭೆಯನ್ನು ಫೆ.28ರಂದು ಕರೆಯುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಶಿವಾಜಿ ಪಾತ್ರದಲ್ಲಿ ರಿಷಬ್
'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಇತ್ತೀಚೆಗೆ ಬಿಡುಗಡೆ ಕೂಡ ಮಾಡಲಾಗಿದೆ. 'ದಿ ಫ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಟೈಟಲ್‌ನಲ್ಲಿ ಸಂದೀಪ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಾಜಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ.
ಆರಾಧ್ಯ ದೈವ ಭವಾನಿಯ ದೊಡ್ಡ ವಿಗ್ರಹದ ಮುಂದೆ ಶಿವಾಜಿ ಕತ್ತಿ ಹಿಡಿದು ನಿಂತಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಜನವರಿ 21, 2027ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಪೋಸ್ಟರ್‌ನಲ್ಲಿ ಹೇಳಲಾಗಿದೆ. ಘಟನಾನುಘಟಿ ಕಲಾವಿದರು, ತಂತ್ರಜ್ಞರು 'ದಿ ಫ್ರೈಡ್ ಆಫ್ ಭಾರತ್' ಚಿತ್ರದಲ್ಲಿ ನಟಿಸಲಿದ್ದಾರೆ. 7 ಭಾಷೆಗಳಲ್ಲಿ ನಿರ್ಮಾಣವಾಗಲಿರುವ ಅದ್ಧೂರಿ ಚಿತ್ರದಲ್ಲಿ ಕನ್ನಡ ನಟ ರಿಷಬ್ ಶೆಟ್ಟಿ ನಟಿಸುತ್ತಿರುವುದು ವಿಶೇಷ.
ಈ ಪೋಸ್ಟರ್ ಲುಕ್ ಹಂಚಿಕೊಂಡ ರಿಷಬ್ ಶೆಟ್ಟಿ, 'ಅವರು ಕೇವಲ ಯೋಧರಲ್ಲ, ಬದಲಾಗಿ ಸ್ವರಾಜ್ಯದ ಆತ್ಮ - ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ದೀಪಸ್ತಂಭ. ಪರದೆಯ ಮೇಲೆ ಅವರ ಚೈತನ್ಯವನ್ನು ಸಾಕಾರಗೊಳಿಸುವುದು ಒಂದು ದೈವಿಕ ಕರೆ, ಪದಗಳಿಗೆ ಮೀರಿ ನನ್ನನ್ನು ವಿನಮ್ರಗೊಳಿಸುವ ಪ್ರಯಾಣ. ಅವರ ಅಪ್ರತಿಮ ಪರಂಪರೆಗೆ ನ್ಯಾಯ ಒದಗಿಸಲು ಮತ್ತು ಪ್ರತಿಯೊಬ್ಬ ಭಾರತೀಯನು ಅವರ ಅವಿನಾಭಾವ ಶೌರ್ಯದ ಕಥೆ ನಿಮ್ಮ ಮುಂದೆ' ಎಂದು ಹಂಚಿಕೊಂಡಿಕೊಂಡಿದ್ರು.












Click it and Unblock the Notifications