ಮಡೆನೂರು ಮನು ಬಗ್ಗೆ ವರ್ತೂರು ಸಂತೋಷ್ ಮತ್ತೊಂದು ಗಂಭೀರ ಆರೋಪ
ಕಿರುತೆರೆ ನಟಿಗೆ ಅ*ತ್ಯಾಚಾರ, ಕಿರುಕುಳ ಕೇಸ್‌ನಲ್ಲಿ ಜೈಲು ಸೇರಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಮಡೆನೂರು ಮನು ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಮಡೆನೂರು ಮನು ಬಗ್ಗೆ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನಿಂದು ವಿಡಿಯೋಗಳು ಎಲ್ಲೆಲ್ಲಿ ಸಿಕ್ತಪ್ಪಾ ಭಗವಂತ? ಎಂದು ವರ್ತೂರು ಸಂತೋಷ್ ಅವರು ಮಡೆನೂರು ಮನುಗೆ ಪ್ರಶ್ನೆ ಮಾಡಿದ್ದಾರೆ. ನಿನ್ನ ಆಡಿಯೋಗಳು ಕೇಳಿದೆ, ಮೇರು ವ್ಯಕ್ತಿಗಳನ್ನೆಲ್ಲ ತಾತ್ಸಾರ ಮಾತನಾಡಿದ್ದೀಯಲ್ಲಪ್ಪ? ಎಂದು ಮನು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ರಿಯಾಲಿಟಿ ಶೋಗಳಲ್ಲಿ ಮಡೆನೂರು ಮನು ಅವರು ವರ್ತೂರು ಸಂತೋಷ್ ಅವರ ಮಿಮಿಕ್ರಿ ಮಾಡಿದ್ದರು. ಈ ವಿಚಾರವಾಗಿಯೂ ಗರಂ ಆಗಿರುವ ವರ್ತೂರು, 'ನನಗೆ ಆ ವಿಚಾರ ಗೊತ್ತಿರಲಿಲ್ಲ. ಇತ್ತೀಚೆಗೆ ನನ್ನ ಆತ್ಮೀಯರೊಬ್ಬರು ಆ ವಿಡಿಯೋ ಕಳಿಸಿದ್ರು. ಮನು ಅವರ ಎರಡು ವಿಡಿಯೋಗಳು ನನಗೆ ಬಂತು. ಒಂದು ಸ್ಟೇಜ್ ಮೇಲೆ, ಮತ್ತೊಂದು ಹೊರಗಡೆ ನಡೆದಾಡಿಕೊಂಡು ಮಾತನಾಡಿರುವುದು. ನನಗೆ ಒಂದು ವಿಚಾರ ಅರ್ಥ ಆಗಲಿಲ್ಲ. ಒಬ್ಬ ಕಲಾವಿದ ಯಾರನ್ನಾದರೂ ಮಿಮಿಕ್ರಿ ಮಾಡುವಾಗ ಅವರ ಒಳ್ಳೆಯ, ಖುಷಿ ವಿಚಾರಗಳು ಸಾಕಷ್ಟಿವೆ. ಅದನ್ನು ಮಿಮಿಕ್ರಿ ಮಾಡಬಹುದಿತ್ತು. ಆದರೆ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಎನ್ನುವಂತೆ ಮನು ವರ್ತಿಸಿದ್ದಾರೆ' ಎಂದು ಹರಿಹಾಯ್ದಿದ್ದಾರೆ.

'ನಾನು ತೋಡಿದ ಹಳ್ಳಕ್ಕೆ ನಾನೇ ಬೀಳಬೇಕು, ನಾನು ಬಿಗ್‌ಬಾಸ್‌ನಿಂದ ಹೊರಬಂದಾಗ ತುಂಬಾ ದುಃಖದಿಂದ ಆ ಮಾತುಗಳನ್ನಾಡಿದ್ದೆ. ಆವತ್ತು ನೋವಿನಿಂದಲೇ ನಾನು ನಮ್ಮ ಹೊಟ್ಟೆ ಉರಿಸುತ್ತಾರೋ ಎಂದಿದ್ದೆ. ಅದನ್ನು ಈ ವ್ಯಕ್ತಿ (ಮನು) ಎಷ್ಟು ವ್ಯಂಗ್ಯವಾಗಿ ಹೇಳುತ್ತಾರೆ ಅಂದ್ರೆ, ನಾನು ಆಗಲೇ ಭಗವಂತ ಇದ್ದಾನೆ ಬಿಡು ಎಂದುಕೊಂಡಿದ್ದೆ. ಆದರೆ ಭಗವಂತ ನಿಜಕ್ಕೂ ಇದ್ದಾನೆ. ನನ್ನ ಇಮಿಟೇಟ್ ಮಾಡಿ ತೋರಿಸಿದ ತಕ್ಷಣವೇ ಆತ ಮಾಡಿರೋ ಕೆಲಸಗಳೆಲ್ಲ ಹೊರಜಗತ್ತಿಗೆ ಬಂದಿದೆ' ಎಂದು ಹೇಳಿದ್ದಾರೆ.
'ನಾನು ಪ್ರತಿಯೊಬ್ಬರಿಗೂ ಹೇಳೋದು ಇಷ್ಟೇ, ಯಾರಾದರೂ ಮನಸ್ಸಿನಿಂದ ಮಾತನಾಡಿದ್ದರೆ ಅದನ್ನ ಈ ರೀತಿ ವ್ಯಂಗ್ಯ ಮಾಡಬೇಡಿ. ಏಕೆಂದರೆ ಮನಸ್ಸಿನಿಂದ ಮಾತನಾಡಿದ್ದು ಭಗವಂತನ ಕಾಲಡಿ ಇರುತ್ತೆ. ನಾನು ಕೂಡ ಅಷ್ಟೇ ಎಲ್ಲರಿಗೂ ಮನಸಾರೆ ಹರಸುತ್ತೇನೆ. ಇನ್ನು ಮನು ಅವರನ್ನ ನಾನು ಇವತ್ತಿನವರೆಗೂ ಭೇಟಿಯೇ ಆಗಿಲ್ಲ, ಅವರ ಸೆಟ್‌ನವರ ಜೊತೆಗೂ ನನ್ನ ಸಂಪರ್ಕವಿಲ್ಲ. ಹೀಗಿರುವಾಗ ನನ್ನ ಮಿಮಿಕ್ರಿ ಮಾಡುವಾಗ ಕನಿಷ್ಠ ಪಕ್ಷ ನನ್ನ ಭೇಟಿಯಾದರೂ ಆಗಿರಬೇಕಿತ್ತು. ಮುಖಾಮುಖಿ ಪರಿಚಯ ಆದ್ರೂ ಇರಬೇಕಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ವರ್ತೂರು ಸಂತೋಷ್ ಬಗ್ಗೆ ಹಗುರವಾಗಿ ಮಾತನಾಡಬೇಕು ಅಂದ್ರೆ, ನಾನು ಯಾರ ಮನೆಯ ಬಚ್ಚಲು ಕೂಡ ತೊಳೆಯುವವನಲ್ಲ, ಯಾರಿಗೂ ಬಕೆಟ್ ಹಿಡಿಯುವವನೂ ಅಲ್ಲ. ಅದೇ ವರ್ತೂರು ಸಂತೋಷ್ ಎಂದು ತಿರುಗೇಟು ನೀಡಿದ್ದಾರೆ. ನನಗೆ ಭಗವಂತ ಬೇಜಾನ್ ಕೊಟ್ಟಿದ್ದಾನೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಒಡೆಯಬೇಕು ಅಂದ್ರೆ ಮೇಲಿರುವ ಭಗವಂತನಿಂದ ಮಾತ್ರ ಸಾಧ್ಯ. ಎರಡನೇ ದಿನದಲ್ಲಿ ನಿನ್ನ (ಮನು) ಜೀವನವೇ ಬದಲಾಗಿ ಹೋಯ್ತು. ಎಲ್ಲರಿಗೂ ಹೇಳುವುದು ಒಂದೇ ಕಾಲಾಯಾ ತಸ್ಮೈ ನಮಃ' ಎಂದಿದ್ದಾರೆ.












Click it and Unblock the Notifications