Charith Balappa: ಶೂಟಿಂಗ್ ಹೋಗುವಾಗ ಕಿರುತೆರೆ ನಟ ಚರಿತ್ ಮೇಲೆ ಹಲ್ಲೆ!
ಬೆಂಗಳೂರು ಮಾರ್ಚ್ 9: ಕಳೆದ ದಿನವಷ್ಟೇ ಕನ್ನಡದ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಹಲ್ಲೆ ಆರೋಪ ತಡವಾಗಿ ಬೆಳಕಿಗೆ ಬಂದಿತ್ತು. ಆದರೀಗ ಕಿರುತೆರೆ ನಟರೊಬ್ಬರು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಡವಾಗಿ ದೂರು ನೀಡಿದ್ದಾರೆ.
ಕಿರುತೆರೆ ನಟ ಚರಿತ್ ಬಾಳಪ್ಪ ತಮ್ಮ ನೆರೆಯ ವ್ಯಕ್ತಿ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಫೆಬ್ರವರಿ 23ರಂದು ಈ ಘಟನೆ ನಡೆದಿದೆ. ಆದರೆ ತಡವಾಗಿ ದೂರು ದಾಖಲಿಸಲಾಗಿದೆ. ನಟ ತಾವು ತಡವಾಗಿ ದೂರು ನೀಡಿರುವುದಕ್ಕೆ ಕಾರಣ ಕೂಡ ನೀಡಿದ್ದಾರೆ.

ಖಾಲಿ ಜಾಗದಲ್ಲಿ ಕಸ ಹಾಕಿದ್ದಕ್ಕೆ ತಮಗೆ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಕಿರುತೆರೆ ನಟ ಚರಿತ್ ಬಾಳಪ್ಪ ದೂರು ನೀಡಿದ್ದಾರೆ. ಶೂಟಿಂಗ್ ಹೋಗುವಾಗ ಖಾಲಿ ಜಾಗದಲ್ಲಿ ಕಸವನ್ನು ಇಟ್ಟಿದ್ದರು. ಈ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ ವ್ಯಕ್ತಿ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ ಕೂಡ ಮಾಡಿದ್ದಾರೆ ಎಂದು ದೂರಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ. ವ್ಯಕ್ತಿ ತಮಗೆ ತೊಂದರೆ ನೀಡಿದ್ದಾರೆಂದು ಚರಿತ್ ದೂರಿನಲ್ಲಿ ತಿಳಿಸಿದ್ದಾರೆ. ತಮಗೆ ಶೂಟಿಂಗ್ ಇದ್ದ ಕಾರಣ ತಡವಾಗಿ ದೂರು ನೀಡುತ್ತಿರುವುದಾಗಿ ನಟ ಹೇಳಿಕೊಂಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಅಷ್ಟಕ್ಕೂ ಕಸ ಎಲ್ಲಂದ್ರಲ್ಲಿ ಇಡುವಂತಿಲ್ಲ. ಹಾಕುವಂತಿಲ್ಲ. ಬಿಬಿಎಂಪಿ ವಾಹನ ಬಂದಾಗಲೇ ಕಸವನ್ನು ಹಾಕಬೇಕು. ಆದರೆ ಕಸ ಹಾಕುವ ವಿಚಾರದಲ್ಲಿ ಹಲ್ಲೆ ಮಾಡುವ ಮಟ್ಟಕ್ಕೆ ಜಗಳವಾಡಿರುವುದು ಬೇರೆ ಕಾರಣ ಇರಬಹುದಾ ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಸ್ಥಳದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ.
'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ಮುಖ್ಯಪಾತ್ರಧಾರಿ ಧೃವಂತ್ ಆಗಿ ಚರಿತ್ ಬಾಳಪ್ಪ ಕಾಣಿಸಿಕೊಂಡಿದ್ದರು. ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'w/o ಕೃಷ್ಣಮೂರ್ತಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಚರಿತ್'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ.











Click it and Unblock the Notifications