ಪ್ರತಾಪ್ ಸಿಂಹ ವಿರುದ್ಧ ಕೇಸ್ & ಪುನೀತ್ ಕೆರೆಹಳ್ಳಿ ಮತ್ತೆ ಅರೆಸ್ಟ್!
ಕರ್ನಾಟಕದ ಮೂಲೆ ಮೂಲೆಯಲ್ಲೂ 'ನಾಯಿ ಮಾಂಸ' ಕೇಸ್ ದೊಡ್ಡ ಸದ್ದು ಮಾಡ್ತಿದೆ. ರಾಜಸ್ಥಾನ ಮೂಲಕ ಬೆಂಗಳೂರಿಗೆ ರೈಲಿನಲ್ಲಿ ಪ್ರತಿದಿನ ನಾಯಿ ಮಾಂಸ ಸರಬರಾಜು ಮಾಡಿ ಮಾರುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು. ಆದರೆ ಈ ಬಗ್ಗೆ ಲ್ಯಾಬ್ ವರದಿ ಕೂಡ ಬಂದಿದ್ದು, ರೈಲಿನಲ್ಲಿ ಬಂದಿದ್ದು ಕುರಿ ಮಾಂಸ ಎಂಬುದು ಕನ್ಫರ್ಮ್ ಆಗಿದೆ. ಈ ಎಲ್ಲಾ ಬೆಳವಣಿಗೆ ಮಾತ್ರ ರಾಜಕೀಯ ತಿರುವು ಪಡೆಯುತ್ತಿದ್ದು, ಪುನೀತ್ ಕೆರೆಹಳ್ಳಿ ಇದೀಗ ಮತ್ತೆ ಪೊಲೀಸರ ಅತಿಥಿ ಆಗುವ ಭಾಗ್ಯ ಬಂದಿದೆ!
ಅಂದಹಾಗೆ ಕೆಲವು ದಿನಗಳ ಹಿಂದೆ ರಾಜಸ್ಥಾನ ಮೂಲಕ ಬೆಂಗಳೂರಿನ ರೈಲು ನಿಲ್ದಾಣಕ್ಕೆ ನಾಯಿ ಮಾಂಸ ರಫ್ತು ಮಾಡಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದರು. ಈ ಸಮಯದಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಬಿಜೆಪಿ ನಾಯಕರದ್ದು. ಇದೇ ಕಾರಣಕ್ಕೆ ಇದೀಗ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭ ಮಾಡಿರುವ ಬಿಜೆಪಿ ನಾಯಕರು ಪ್ರತಿಭಟನೆ ಕೂಡ ನಡೆಸಿದರು. ಇದೇ ವೇಳೆ ಎಸಿಪಿ ಚಂದನ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದ್ದು, ಪುನೀತ್ ಕೆರೆಹಳ್ಳಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ.

ಪುನೀತ್ & ಪ್ರತಾಪ್‌ಗೆ ಸಂಕಷ್ಟ?
ಮಾಜಿ ಸಂಸದ ಪ್ರತಾಪ್ ಸಿಂಹ & ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬಿಜೆಪಿ & ಹಿಂದೂ ಸಂಘಟನೆ ಕಾರ್ಯಕರ್ತರು ಬಸವೇಶ್ವರ ನಗರ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಎಸಿಪಿ ಚಂದನ್ ವಿರುದ್ಧ ಪ್ರತಾಪ್ ಸಿಂಹ ಹಲವು ಗಂಭೀರ ಆರೋಪ ಹೊರಿಸಿದರು. ಅದರಲ್ಲೂ ಪುನೀತ್ ಕೆರೆಹಳ್ಳಿಯನ್ನ ಅರೆಸ್ಟ್ ಮಾಡಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿದ್ದಾರೆ, ದೌರ್ಜನ್ಯ ನಡೆಸಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಿದರು. ಇದೇ ವೇಳೆ ಪೊಲೀಸರು ಮತ್ತೊಮ್ಮೆ ಪುನೀತ್ ಕೆರೆಹಳ್ಳಿ, ಸೇರಿದಂತೆ ಹಲವರನ್ನ ವಶಕ್ಕೆ ಪಡೆದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸ್ತ್ರ?
ಇದಿಷ್ಟೇ ಅಲ್ಲ, ಎಸಿಪಿ ಚಂದನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ 'ಆಮ್ ಆದ್ಮಿ ಪಾರ್ಟಿ' ಯುವ ಘಟಕವು ಪಶ್ಚಿಮ ಡಿಸಿಪಿಗೆ ದೂರು ನೀಡಿದೆ. ಪುನೀತ್ ಕೆರೆಹಳ್ಳಿ ಬಂಧನ ಸಂಬಂಧ ಪ್ರತಾಪ್ ಸಿಂಹ ಟ್ವಿಟ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕಾಗಿ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು, ಆಮ್ ಆದ್ಮಿ ಪಾರ್ಟಿ ಯುವ ಘಟಕ ಅಧ್ಯಕ್ಷ ಲೋಹಿತ್ ಕುಮಾರ್ ದೂರು ನೀಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಈ ಘಟನೆಯನ್ನ ಇದೀಗ ಮತ್ತಷ್ಟು ಬಿಗಿಯಾದ ಅಸ್ತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ.












Click it and Unblock the Notifications