ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ; ಕೇಸ್ ದಾಖಲು, ಯಾರಿಂದ ಕೃತ್ಯ?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಸಂಬಂಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ಅವರು ಮನೆಯಲ್ಲಿ ಇಲ್ಲದಿದ್ದಾಗ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ವಿಜಯಲಕ್ಷ್ಮಿ ಅವರು ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ಪ್ರತಿಷ್ಠಿಯ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಈ ಮನೆಗೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಹಣ ಎಗರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯಲಕ್ಷ್ಮಿ ಅವರು ತಮ್ಮ ಬೆಡ್‌ರೂಂನ ವಾರ್ಡ್‌ರೋಬ್‌ನಲ್ಲಿ ಸ್ವಲ್ಪ ಹಣ ಇಡುವಂತೆ ಮ್ಯಾನೇಜರ್‌ಗೆ ಹೇಳಿದ್ದರಂತೆ. ನಂತರ ಅವರು ಮೈಸೂರಿಗೆ ತೆರಳಿದ್ದರು. ಹೀಗಾಗಿ ಅವರು ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಕಳ್ಳರು ಕೈಚಳಕ ತೋರಿದ್ದಾರೆ. ಸೆಪ್ಟೆಂಬರ್ 4ರಿಂದ 8ರ ನಡುವೆ ಈ ಕಳ್ಳತನ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಯಾರ ಮೇಲೆ ಅನುಮಾನ?
ಸೆಪ್ಟೆಂಬರ್ 8ರಂದು ವಿಜಯಲಕ್ಷ್ಮಿ ಅವರು ಮೈಸೂರಿನಿಂದ ವಾಪಸ್ ಆಗಿದ್ದರು. ಬಳಿಕ ಬಂದು ನೋಡಿದಾಗ ಅಲ್ಲಿ ಹಣ ಇರಲಿಲ್ಲ. ಈ ಬಗ್ಗೆ ಮನೆ ಕೆಲಸ ಮಾಡುವವರನ್ನು ಕೇಳಿದಾಗಲೂ ತಮಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ ಕೊನೆಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ ಅವರ ಮನೆಯಿಂದ ಬರೋಬ್ಬರಿ 3 ಲಕ್ಷ ರೂಪಾಯಿ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ವಿಜಯಲಕ್ಷ್ಮಿ ಅವರು ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಾವು ಮನೆಯಲ್ಲಿ ಇಲ್ಲದಿರುವಾಗ ಮನೆ ಕೆಲಸದವರು ಮಾತ್ರವೇ ಇದ್ದಿದ್ದರಿಂದ ಅವರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಮೊದಲ ಬಾರಿ ಜೈಲು ಸೇರಿದಾಗ ವಿಜಯಲಕ್ಷ್ಮಿ ಅವರು ಬಹಳ ನೊಂದಿದ್ದರು. ಅಲ್ಲದೆ ಕೋರ್ಟು, ಕೇಸು, ಸ್ಟೇಷನ್ ಅಂತೆಲ್ಲ ಅಲೆದಾಡಿದ್ದರು. ಪತಿಯನ್ನು ಜೈಲಿನಿಂದ ಹೊರಗಡೆ ತರಲು ಪರದಾಡಿದ್ದರು. ಆದರೆ ಮತ್ತೆ ದರ್ಶನ್ ಅವರು ಜೈಲು ಸೇರಿರುವುದರಿಂದ ಅದೇ ನೋವಿನಲ್ಲಿದ್ದಾರೆ. ಇದರ ನಡುವೆ ಮನೆಯಲ್ಲಿ ಕಳ್ಳತನವಾಗಿರುವುದು ಕೇಳಿ ಮತ್ತಷ್ಟು ನೊಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರ ರಿಲೀಸ್‌ಗಾಗಿ ವಿಜಯಲಕ್ಷ್ಮಿ ಅವರು ಹಲವು ದೇವಸ್ಥಾನಗಳಿಗೆ ಹರಕೆ ಹೊತ್ತಿದ್ದರು. ನಂತರ ದರ್ಶನ್ ಅವರಿಗೆ ಜಾಮೀನು ಮಂಜೂರಾಗಿ ಕೆಲ ತಿಂಗಳ ಕಾಲ ಹೊರಗಿದ್ದರು. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದು ಮಾಡಿತ್ತು. ಹೀಗಾಗಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಹೀಗಾಗಿ ವಿಜಯಲಕ್ಷ್ಮಿ ಅವರು ಮತ್ತೆ ದರ್ಶನ್ ಅವರನ್ನು ಜೈಲಿನಿಂದ ಕರೆತರಲು ಒದ್ದಾಡುತ್ತಿದ್ದಾರೆ.












Click it and Unblock the Notifications