Darshan Thoogudeepa: 'ನಾನು ಎಂದಿಗೂ ದರ್ಶನ್ ಪರ'- ಮಂಡ್ಯದಲ್ಲಿ ಸುಮಲತಾ ಪ್ರತಿಕ್ರಿಯೆ
'ದರ್ಶನ್ ದೊಡ್ಡ ಮನಸ್ಸು, ಪ್ರೀತಿ ಇರುವ ವ್ಯಕ್ತಿ. ಹೀಗಾಗಿ ದರ್ಶನ್ ಅವರನ್ನು ಆ ದೇವರೇ ಕಾಪಾಡುತ್ತಾನೆ' ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದರ್ಶನ್ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು?
ಇಂದು ಮಂಡ್ಯದಲ್ಲಿ ಮಾತನಾಡಿದ ಸುಮಲತಾ ಅವರು ದರ್ಶನ್ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ದರ್ಶನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಜರಿ ಮಾಡ್ಬೇಕು ಅಂತ ಹೇಳ್ತಾಯಿದಾರೆ. ದರ್ಶನ್‌ಗೆ ಬೆನ್ನು ನೋವು ಇದೆ. ಅವರಿಗೆ ಸರ್ಜರಿ ಮಾಡಬೇಕು ಅನ್ನೋದನ್ನು ನಾನು ಕೇಳ್ಪಟ್ಟೆ. ಆದರೆ ಸರ್ಜರಿ ಮಾಡಿಸಿಕೊಂಡರೆ ವಾಸಿ ಆಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ' ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

'ನಮ್ಮ ಸಂಬಂಧ ಹಿಂದೆ ಹೇಗಿತ್ತೋ ಹಾಗೇ ಇರುತ್ತದೆ. ನನ್ನ ಲೈಫ್ ಇರುವವರೆಗೂ ದರ್ಶನ್ ನನ್ನ ಮಗನೇ. ನಾನು ಎಂದಿಗೂ ದರ್ಶನ್ ಪರ ಇದ್ದೇನೆ. ಎಲ್ಲಾ ಒಳ್ಳೆಯದಾಗಬೇಕು. ನಿಜಾಂಶ ಏನು ಎನ್ನುವುದು ಹೊರಗಡೆ ಬರಬೇಕು. ಅವರು ನಿರಪರಾಧಿ ಅನ್ನೋದು ಸಾಬೀತಾಗಬೇಕು ಅನ್ನೋದು ನನ್ನ ಆಸೆ. ಅವರು ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತಾರೆ ಅನ್ನೋ ನಂಬಿಕೆ ಕೂಡ ಇದೆ. ಮುಂದಿನ ದಿನಗಳಲ್ಲಿ ದರ್ಶನ್ ಪರ ವಕೀಲರು ನಿಜಾಂಶ ಸಾಬೀತುಪಡಿಸುತ್ತಾರೆ' ಎಂದರು.
ದರ್ಶನ್‌ಗೆ ಒಳ್ಳೆಯದಾಗಬೇಕು- ಸುಮಲತಾ
'ನಾವು ಆ ದೇವರಲ್ಲಿ ಪಾರ್ಥನೆ ಮಾಡಿಕೊಳ್ಳುತ್ತೇನೆ. ದರ್ಶನ್ ಆಚೆ ಬರಬೇಕು ಅನ್ನೋದು ನನ್ನ ಆಸೆ. ಮಧ್ಯಂತರ ಜಾಮೀನು ಬಗ್ಗೆ ತುಂಬಾ ಆಳವಾಗಿ ನಮಗೂ ಗೊತ್ತಿಲ್ಲ. ದರ್ಶನ್ ಅವರು ಜಾಮೀನಿಗಾಗಿ ತುಂಬಾ ಪ್ರಯತ್ನ ಪಡುತ್ತಿದ್ದಾರೆ. ನಾವು ಅವರಿಗೆ ಮಾರಲ್ ಸಪೋರ್ಟ್ ಕೊಡಬೇಕಾಗುತ್ತದೆ ಅಷ್ಟೇ. ಅದು ಬಿಟ್ಟರೆ ನಾವೇನು ಮಾಡಲು ಚಾನ್ಸ್ ಇಲ್ಲ. ಒಳ್ಳೆಯದಾಗಬೇಕು ಅನ್ನೋ ಆಸೆ ಇದೆ' ಎಂದರು.

ಸಿನಿಮಾ ಇಂಡಸ್ಟ್ರಿಗೆ ದೊಡ್ಡ ನಷ್ಟ....
'ಜೊತೆಗೆ ಅವರ ಸಿನಿಮಾಗಳೂ ಅರ್ಧಕ್ಕೆ ನಿಂತು ಹೋಗಿವೆ. ಇದರಿಂದ ನಷ್ಟವಾಗುತ್ತಿದೆ. ಸಿನಿಮಾಗಳ ಬಗ್ಗೆ ಕೂಡ ನನಗೆ ಚಿಂತೆ ಇದೆ. ಹೀಗಾಗಿ ಇದೆಲ್ಲಾ ಸರಿ ಹೋಗಲಿ ಎನ್ನೋದು ನನ್ನ ಆಶಯ. ದರ್ಶನ್ ಅವರು ಆರೋಗ್ಯ ಸರಿ ಹೋಗಬೇಕು. ಅವರ ಜಾಮೀನು ವಿಚಾರಣೆ ಎಲ್ಲವನ್ನೂ ಅವರು ಎದುರಿಸಿ ಹೊರಗಡೆ ಬರ್ತಾರೆ ಅನ್ನೋ ಆಸೆ ಇಟ್ಟುಕೊಂಡವರು ನಾವು' ಎಂದರು.
ದರ್ಶನ್ ಕೈಯಲ್ಲಿ ಫೋನ್ ಇಲ್ಲ
'ದರ್ಶನ್ ಕೈಯಲ್ಲಿ ಫೋನ್ ಇರುವುದಿಲ್ಲ. ಏನೇ ಇದ್ದರೂ ನಾವು ಅವರ ಪತ್ನಿ ವಿಜಯಲಕ್ಷ್ಮೀಯೊಂದಿಗೆ ಮಾತನಾಡುವ ಮೂಲಕ ತಿಳಿದುಕೊಳ್ಳಬೇಕು. ಅಭಿ ದರ್ಶನ್ ಜೈಲಿನಲ್ಲಿ ಇರುವಾಗ ಹೋಗಿ ಮಾತನಾಡಿ ಬಂದ. ದರ್ಶನ್ ಅವರೂ ಕೂಡ ಘಟನೆಯ ಬಗ್ಗೆ ಯಾರೊಂದಿಗೆ ಮಾತನಾಡುವ ಹಾಗಿಲ್ಲ. ಹೀಗಾಗಿ ನಾವು ಈ ಪ್ರಕರಣದ ಬಗ್ಗೆ ಹೆಚ್ಚೇನು ಮಾತನಾಡಿಲ್ಲ' ಎಂದರು.
ಚಿತ್ರರಂಗಕ್ಕೆ ಸಂಕಷ್ಟ ಎದುರಾಗಿದೆ...
ದರ್ಶನ್ ಸಿನಿಮಾ ಇಂಡಸ್ಟ್ರೀಗೆ ದೊಡ್ಡ ಪಿಲ್ಲರ್. ಕಾಟೇರ್ ಸಿನಿಮಾ ಲಾಸ್ಟ್ ಹಿಟ್ ಸಿನಿಮಾ ಆಗಿತ್ತು. ದರ್ಶನ್ ಸಿನಿಮಾ ರಂಗಕ್ಕೆ ಶಕ್ತಿ ಆಗಿದ್ದರು. ಈಗ ದರ್ಶನ್ ಇಲ್ದೆ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅದೆಲ್ಲವೂ ಸರಿ ಹೋಗಬೇಕು. ಅಭಿಮಾನಿಗಳಿಗೆ ಎಲ್ಲಾ ವಿಷಯವನ್ನು ನಾವು ಅರ್ಥ ಮಾಡಿಸಲು ಆಗಲ್ಲ. ದೊಡ್ಡ ಮಟ್ಟದಲ್ಲಿರುವ ಹೀರೋ ಸಿನಿ ಜರ್ನಿ ನಿಂತು ಹೋದಾಗ ಅದರ ಶಿಕ್ಷೆ ನಿರ್ದೇಶಕರು, ನಿರ್ಮಾಪಕರೂ ಎಲ್ಲರೂ ಅನುಭವಿಸುತ್ತಿದ್ದಾರೆ ಎಂದು ಸುಮಲತಾ ಹೇಳಿದರು.
ದರ್ಶನ್ ದೊಡ್ಡ ಮನಸ್ಸು ಇರುವ ವ್ಯಕ್ತಿ..
ಯಾರೂ ಕೂಡ ಈ ರೀತಿ ಆಗ್ಬೇಕು ಅನ್ನೋ ಮನಸ್ಥಿತಿ ಇರಲ್ಲ. ದರ್ಶನ್ ದೊಡ್ಡ ಮನಸ್ಸು, ಪ್ರೀತಿ ಇರುವ ವ್ಯಕ್ತಿ. ಹೀಗಾಗಿ ದರ್ಶನ್ ಅವರನ್ನು ಆ ದೇವರೇ ಕಾಪಾಡುತ್ತಾನೆ. ಅವರು ಕೂಡ ತುಂಬಾ ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ ಈ ತಪ್ಪು ಯಾರು ಮಾಡಿದ್ದಾರೆ ಅನ್ನೋದು ಕೋರ್ಟ್ ತೀರ್ಪು ಮಾಡುತ್ತದೆ. ಹೀಗಾಗಿ ತಪ್ಪು ಯಾರೇ ಮಾಡಿದ್ದರು ಕೂಡ ದರ್ಶನ್ ಪರ ನಾನಿದ್ದೇನೆ ಎಂದು ಹೇಳಿದರು.












Click it and Unblock the Notifications