Sudeep-Darshan: ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಸಿಗಲಿ: ದರ್ಶನ್ ಬಂಧನದ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ಮತ್ತೊಂದು ದೊಡ್ಡ ನಟ ಸುದೀಪ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಮೃತ ರೇಣುಕಾಸ್ವಾಮಿ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ.
ಈ ತರದ ಯಾವುದೇ ಘಟನೆ ಆದರೂ ಇಡೀ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಮೊದಲೇ ಜನ ಸಿನಿಮಾ ನೋಡಲು ಬರುತ್ತಿಲ್ಲ, ನಾವು ಒಳ್ಳೆ ಸಿನಿಮಾ ಮಾಡಿ ಪ್ರಯತ್ನ ಪಟ್ಟರೆ ಮಾತ್ರ ಚಿತ್ರರಂಗ ಬೆಳೆಯುತ್ತದೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ಏನು ಬರುತ್ತಿದಿಯೋ ಅಷ್ಟೇ ನನಗೂ ಗೊತ್ತಿರುವುದು. ಸತ್ಯವನ್ನು ಹೊರತರಲು ಮಾಧ್ಯಮಗಳು, ಪೊಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಈ ಪ್ರಕರಣದಲ್ಲಿ ಸತ್ಯ ಹೊರತರಲು ಹಠ ಹಿಡಿದಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಸಾಮಾನ್ಯ ಮನುಷ್ಯನಾಗಿ ನಾನು ಯಾರ ಪರ, ವಿರುದ್ಧವೂ ಅಲ್ಲ, ಆದರೆ ಬಾಳಿ ಬದುಕಬೇಕಾದ ಹುಡುಗ ಸತ್ತಿದ್ದಾನಲ್ಲ ಆತನಿಗೆ ನ್ಯಾಯ ಸಿಗಬೇಕು, ಆತನ ಕುಟುಂಬಕ್ಕೆ, ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು ಎಂದರು.
ಎಲ್ಲರಿಗೂ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಬರಬೇಕು ಎಂದರೆ ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಚಿತ್ರರಂಗಕ್ಕೆ ಇಂದು ನ್ಯಾಯ ಸಿಗಬೇಕು, ಚಿಕ್ಕ ಚಿಕ್ಕ ವಿಚಾರಗಳಿಗೂ ಚಿತ್ರರಂಗವನ್ನು ದೂಷಿಸಲಾಗುತ್ತಿದೆ. ಒಬ್ಬಿಬ್ಬರಿಂದ ಚಿತ್ರರಂಗ ಅಲ್ಲ, ಆ ಕುಟುಂಬಕ್ಕೆ ನ್ಯಾಯ ಸಿಕ್ಕಾಗ ಚಿತ್ರರಂಗಕ್ಕೂ ಖುಷಿಯಾಗುತ್ತದೆ ಎಂದರು.
ದರ್ಶನ್ ಬ್ಯಾನ್ ಮಾಡಬೇಕಾ?
ದರ್ಶನ್‌ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕಾ ಎನ್ನುವ ಬಗ್ಗೆ ಉತ್ತರ ಕೊಟ್ಟ ಸುದೀಪ್, ನಾವು ಕಾನೂನಲ್ಲ, ದರ್ಶನ್ ಈ ಕೇಸ್‌ನಿಂದ ಹೊರಗಡೆ ಬಂದರೆ ಬ್ಯಾನ್ ಎನ್ನುವುದು ಬರುವುದೇ ಇಲ್ಲ, ಅಥವಾ ಅವರು ಹೊರಬರದೇ ಇದ್ದರೂ ಬ್ಯಾನ್ ಮಾಡುವುದು ಬರಲ್ಲ. ಇಲ್ಲಿ ಬೇಕಾಗಿರುವುದು ನ್ಯಾಯ ಅಷ್ಟೇ, ಫಿಲ್ಮ್ ಚೇಂಬರ್ ಕೂಡ ಆ ಹುಡುಗನ ಸಾವಿಗೆ ನ್ಯಾಯ ಸಿಗಲಿ ಎಂದೇ ಬಯಸುತ್ತಿದೆ ಎಂದರು.
ಸ್ನೇಹ ಬೇರೆ, ನ್ಯಾಯ ಬೇರೆ, ಸಾವಿರಾರು ಜನ ಕಷ್ಟಪಟ್ಟು ದುಡಿದ ಕಾರಣ ಇಂದು ಚಿತ್ರರಂಗ ಇದೆ. ಆರೋಪಿ, ಅಪರಾಧಿ ಯಾರು ಎಂದು ಹೇಳಲು ಜಡ್ಜ್ ಇದ್ದಾರೆ, ನಾವು ಅದನ್ನು ತೀರ್ಮಾನಿಸಲು ಆಗಲ್ಲ ಎಂದರು.
ಯಾರಿಗೂ ಬುದ್ದಿ ಹೇಳುವಷ್ಟು ದೊಡ್ಡವನು ನಾನಲ್ಲ. ನಾವು ಸೆಲೆಬ್ರಟಿಗಳು ಅಂದತಕ್ಷಣ ನಾವು ದೇವರಲ್ಲ, ತಪ್ಪು ಮಾಡುವವನೇ ಮನುಷ್ಯ, ಫ್ಲಾಪ್‌ಗಳನ್ನು ಕೊಡುವವನೇ ಹೀರೋ ಎಂದರು.












Click it and Unblock the Notifications