Darshan Release Prediction: ದರ್ಶನ್‌ಗೆ ಬಿಡುಗಡೆ ಯಾವಾಗ? ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯವಾಣಿ
ಬೆಂಗಳೂರು ಜುಲೈ 6: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಜೈಲು ವಾಸ ಅನುಭವಿಸುತ್ತಿರುವುದು ಗೊತ್ತೇ ಇದೆ. ಸದ್ಯಕ್ಕೆ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಬಿಡುಗಡೆ ಭಾಗ್ಯ ಇಲ್ಲ. ಬಗೆದಷ್ಟು ಸಾಕ್ಷಿಗಳು ದರ್ಶನ್ ವಿರುದ್ಧ ಲಭ್ಯವಾಗಿವೆ ಎನ್ನುವ ಆರೋಪಗಳಿವೆ. ಈ ನಡುವೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಜೈಲುವಾಸ ಎಲ್ಲಿವರೆಗೆ? ಅವರು ಸದ್ಯಕ್ಕೆ ಬಿಡುಗಡೆಯಾಗುವುದಿಲ್ವಾ? ಎಂಬ ಪ್ರಶ್ನೆಗಳಿಗೆ ಹಲವರು ಹಲವು ಮಾತುಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ದರ್ಶನ್ ಬಿಡುಗಡೆ ಯಾವಾಗ? ನಟ ದರ್ಶನ್ ಬಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದೇನು? ಎಂದು ನೋಡೋಣ.

'ಅಕ್ಟೋಬರ್ ನಂತರವೇ ದರ್ಶನ್ ಏಳಿಗೆ ಆರಂಭವಾಗಲಿದೆ. ಅಲ್ಲಿವರೆಗೆ ದರ್ಶನ್ ಅವರಿಗೆ ಜೈಲೇ ಗತಿ' ಎಂದು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
'ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ. ಅನ್ನೋಹಾಗೆ ದರ್ಶನ್ ಅವರು ತಮ್ಮ ಕೋಪದಿಂದ ಜೀವನ ಹಾಳು ಮಾಡಿಕೊಂಡಿದ್ದಾರೆ. ಯಾರದ್ದು ತಪ್ಪು ಯಾರದ್ದು ಸರಿ ಎಂಬುದನ್ನು ನಾವು ಹೇಳಬಾರದು. ದರ್ಶನ್ ಅವರಿಗೆ ಗುರುದಶ ಆರಂಭವಾಗಿದ್ದು ದೊಡ್ಡ ಸಮಸ್ಯೆಗಳನ್ನು ಅವರು ಅನುಭವಿಸುತ್ತಿದ್ದಾರೆ. ಈ ಹಿಂದೆ ಕೂಡ ಅವರು ಕೆಲ ದಿನ ಜೈಲಿನಲ್ಲಿದ್ದರು. ಹೊರಗೆ ಇರೋ ದರ್ಶನ್‌ಗೂ ಅಂತರ್ಯದಲ್ಲಿರೋ ದರ್ಶನ್‌ಗೂ ಸಾಕಷ್ಟು ವ್ಯತ್ಯಾಸ ಇದೆ. ಗುರುದಶ ಶುರುವಾದಾಗಿನಿಂದ ಅವರು ಮೇಲೆ ಹೋಗೋದು ಪಾತಾಳಕ್ಕೆ ಬೀಳೋದು ಆಗುತ್ತಿದೆ' ಎಂದರು.

'ಸದ್ಯ ದರ್ಶನ್ ಅವರ ಜಾತಕದಲ್ಲಿ ಕುಜ ಭುಕ್ತಿ ಇದೆ. ಕುಜ ತುಂಬಾ ಕೋಪದವನು. ಕುಜ ಕಾರಾಗೃಹ ವಾಸವನ್ನು ಕೊಡ್ತಾನೆ. ಅಲ್ಲಿಯೇ ಕೇತು ಬೇರೆ ಇರುವುದರಿಂದ ಅಪನಿಂದನೆ ಆಗುತ್ತದೆ. ಗೌರವ ಕಡಿಮೆಯಾಗಲಿದೆ. ಅವರ ಹೆಸರು ಸಾಕಷ್ಟು ಹಾಳಾಗಲಿದೆ. ಈ ಸಮಯದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಿತ್ತು. ಆದರೆ ಕೋಪದ ಕೈಯಲ್ಲಿ ಬುದ್ಧಿಕೊಟ್ಟು ದರ್ಶನ್ ತಪ್ಪು ಮಾಡಿದ್ದಾರೆ' ಎಂದು ಸ್ವಾಮೀಜಿ ಹೇಳಿದ್ದಾರೆ.
'ದರ್ಶನ್ ಅವರನ್ನು ಮಂಗಳವಾರದಂದು ಬಂಧನ ಮಾಡಲಾಗಿದೆ. ಹುಟ್ಟಿದ ದಿನ ಹಾಗೂ ಅವರ ಬಂಧನದ ದಿನ ಅವರ ಜಾತಕದಲ್ಲಿ ಗುರುದಶ ಇದೆ. ಹೀಗಾಗಿ ಮುಂದಿನ ಅಕ್ಟೋಬರ್‌ವರೆಗೂ ಅವರಿಗೆ ಸ್ವಲ್ಪ ಕಠಿಣ ದಿನಗಳು ಇವೆ. ನಂತರ ಅವರ ಜೀವನ ಬದಲಾಗುತ್ತದೆ. ದರ್ಶನ್‌ಗೆ ಅಕ್ಟೋಬರ್ ವರೆಗೂ ಜಾಮೀನು ಸಿಗುವ ಸಾಧ್ಯತೆ ಇದೆ. ಆದರೆ ಸಾಕಷ್ಟು ಬೇಸರ, ತೊಂದರೆ ಹಾಗೂ ಅಗೌರವ ಅನುಭವಿಸಬೇಕಾಗುತ್ತದೆ. ದರ್ಶನ್ ಮತ್ತೆ ಸಹಜ ಸ್ಥಿತಿಗೆ ಬರಲು ಕೆಲ ತಿಂಗಳು ಬೇಕು' ಎಂದು ಸ್ವಾಮೀಜಿ ಹೇಳಿದ್ದಾರೆ.

'ಅವರ ಜಾತಕ ಸದ್ಯ ಸರಿಯಾಗಿಲ್ಲ. ಅವರ ಗ್ರಹಗತಿಗಳು ಉತ್ತಮವಾಗಿಲ್ಲ. ಹೀಗಾಗಿ ದರ್ಶನ್ ಮೇಲಿಂದ ಮೇಲೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮನುಷ್ಯ ಎಷ್ಟೇ ಒಳ್ಳೆಯದ್ದನ್ನೇ ಮಾಡಲಿ ಗ್ರಹಗತಿಗಳು ಕೈ ಹಿಡಿಯದಿದ್ದಾಗ ಆ ಮನುಷ್ಯ ಜಾಗರೂಕನಾಗಿರಬೇಕು. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ದರ್ಶನ್ ಅವರೇ ಸಾಕ್ಷಿ' ಎಂದಿದ್ದಾರೆ.
ಈ ಹಿಂದೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರಾದ ಪ್ರಕಾಶ್ ಅಮ್ಮಣ್ಣಾಯ ಅವರು ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದರು. 'ನಟ ದರ್ಶನ್ ಅವರದು ಶ್ರಾವಣ ನಕ್ಷತ್ರ ಎರಡನೇ ಪಾದ ಮಕರ ರಾಶಿ. ಜೂನ್ ಮೂವತ್ತನೇ ತಾರೀಕಿನಿಂದ ಶನಿ ವಕ್ರಿ ಆಗಿದ್ದು ದ್ವಿತೀಯದ ಫಲ ದುಪ್ಪಟ್ಟಾಗುತ್ತದೆ. ನವೆಂಬರ್ ಹದಿನೈದನೇ ತಾರೀಕು ತನಕ ಇದೇ ಸನ್ನಿವೇಶ ಇರುತ್ತದೆ. ಇದರಿಂದ ಒತ್ತಡ, ಸಮಸ್ಯೆಗಳು ತೀವ್ರವಾಗುತ್ತವೆ. ಹಣಕಾಸಿನ ವ್ಯವಹಾರಗಳು ಕುಣಿಕೆಯಾಗುತ್ತವೆ. ಕುಟುಂಬದ ಒಳಗೆ ನಾನಾ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ' ಎಂದು ಹೇಳಿದರು.












Click it and Unblock the Notifications