ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ, ನನ್ನ ಕನ್ನಡ ತಪ್ಪಾದರೆ ಕ್ಷಮಿಸಿ: ಸೋನು ನಿಗಮ್
ಗಾಯಕ ಸೋನು ನಿಗಮ್ ಹಾಡುಗಳಿಗೆ ಮೂಲತಃ ಕನ್ನಡದವರಲ್ಲ. ಅವರಿಗೆ ಕನ್ನಡ ಮಾತನಾಡುವುದಕ್ಕೂ ಅಷ್ಟಾಗಿ ಬರುವುದಿಲ್ಲ. ಆದರೆ ಕನ್ನಡ ಸಿನಿಮಾಗಳಿಗೆ ಅವರು ಹಾಡಿರುವ ಹಾಡುಗಳು ಜನಪ್ರಿಯತೆ ಪಡೆದಿದೆ. ಸೋನು ನಿಗಮ್ ಕಂಠಕ್ಕೆ ಕನ್ನಡಿಗರು ಮಾರುಹೋಗಿದ್ದಂತೂ ಸತ್ಯ. ಆದರೆ ಕೆಲ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ ಗರಂ ಆಗಿದ್ದ ಸೋನು, ಈ ಕಾರಣಕ್ಕೆ ಪಹಲ್ಗಾಮ್ ದಾಳಿ ಆಯ್ತು ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡರು. ಅಲ್ಲಿವರೆಗೆ ಕರುನಾಡಿನ ಮನೆಮಗನಂತಿದ್ದ ಸೋನು ನಿಗಮ್ ಕನ್ನಡಿಗರ ವಿರೋಧ ಎದುರಿಸಬೇಕಾಯಿತು. ಬಳಿಕ ಕ್ಷಮೆಯೂ ಕೇಳಿದ್ದ ಅವರು, ಇದೀಗ ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎನ್ನುವ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ.
ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ-2025 ಕಾರ್ಯಕ್ರಮದಲ್ಲಿ ಸೋನು ನಿಗಮ್ ಈ ಮಾತುಗಳನ್ನಾಡಿದ್ದಾರೆ. ಉತ್ಸವದ ಸಂಗೀತ ಸಂಜೆಯಲ್ಲಿ ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದ್ದಾರೆ. ಇದೇ ವೇದಿಕೆಯಲ್ಲಿ ಕನ್ನಡದ ಬಗ್ಗೆ ವಿಶೇಷ ಅಭಿಮಾನ ತೋರಿರುವ ಅವರು, 'ನಾನು ಕಳೆದ 25 ವರ್ಷಗಳಿಂದ ಸಾವಿರಾರು ಹಾಡುಗಳನ್ನು ಹಾಡುತ್ತಾ ಬಂದಿದ್ದೇನೆ. ಇದರಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನವಿದೆ. ನನಗೆ ಇಷ್ಟು ಒಳ್ಳೆಯ ಕನ್ನಡ ಹಾಡುಗಳನ್ನು ಹಾಡುವ ಅವಕಾಶ ಸಿಕ್ಕಿದ್ದು ನೋಡಿದಾಗ ನಾನು ಯಾವುದೋ ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎನಿಸುತ್ತಿದೆ' ಎಂದಿದ್ದಾರೆ.

'ತಪ್ಪಾದರೆ ಕ್ಷಮಿಸಿ'
'ನಾನು ವಾಸವಿರುವುದು ಮುಂಬೈನಲ್ಲೇ ಆದರೂ ಕನ್ನಡ ಹಾಡನ್ನು ಹಾಡುವಾಗ ಶಬ್ದಗಳ ಅರ್ಥ, ಭಾವನೆ ಅರ್ಥ ಮಾಡಿಕೊಂಡು ಹಾಡುತ್ತೇನೆ. ವೇದಿಕೆಯಲ್ಲಿ ಕನ್ನಡ ಹಾಡು ಹಾಡುವ ವೇಳೆ ಉಚ್ಛಾರಣೆ ಅಥವಾ ಭಾವನೆ ತಪ್ಪಾದರೆ ದಯವಿಟ್ಟು ಕ್ಷಮಿಸಿ ಎಂದು ಸೋನು ನಿಗಮ್ ಹೇಳಿದ್ದಾರೆ. ಇನ್ನು ಹಿಂದಿ ಹಾಡುಗಳಿ ನನ್ನ ಬಳಿ ಹಿಂದಿ ಹಾಡುಗಳಿಗಿಂತಲೂ ಸುಮಧುರವಾದ ಕನ್ನಡ ಹಾಡುಗಳು ಇವೆ. ಒಂದು ವೇಳೆ ನಾನು ಕನ್ನಡ ಹಾಡುಗಳನ್ನೇ ಹಾಡಿವುದಾದರೆ ನಿರಂತರವಾಗಿ 6 ಗಂಟೆಗಳ ಕಾಲ ಹಾಡುವಷ್ಟು ಗೀತೆಗಳ ಸಂಗ್ರಹವನ್ನು ನಾನು ಹೊಂದಿದ್ದೇನೆ, ಐ ಲವ್ ಕನ್ನಡ. ಇಲ್ಲೂ ಕೂಡ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯ ಹಾಡುಗಳನ್ನು ಹಾಡುತ್ತೇನೆ' ಎಂದಿದ್ದಾರೆ ಸೋನು ನಿಗಮ್.
ಸೋನು ಮೇಲೆ ಎಫ್‌ಐಆರ್
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಅಲ್ಲಿ ಬೇರೆ ಭಾಷೆಯ ಹಾಡುಗಳನ್ನೇ ಹೆಚ್ಚಾಗಿ ಹಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಕೆಲ ಕನ್ನಡಿಗರು ಕನ್ನಡ ಹಾಡು ಹಾಡುವಂತೆ ಕೂಗಿದ್ದರು. ಇದರಿಂದ ಕೋಪಗೊಂಡಿದ್ದ ಸೋನು, 'ಇದಕ್ಕೇನೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು' ಎಂದಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಸೋನು ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಕನ್ನಡಿಗರನ್ನು ಅವಮಾನಿಸಿದ ಅವರನ್ನು ಚಿತ್ರರಂಗದಲ್ಲಿ ಬ್ಯಾನ್ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಕೂಡ ಆಗ್ರಹಿಸಿದ್ದವು.

ಕೆಲ ಸಿನಿಮಾ ತಯಾರಕರು ಸೋನು ಅವರಿಂದ ಹಾಡಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಅಲ್ಲದೆ ಸೋನು ನಿಗಮ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ನಾನು ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡಿದ್ದೇನೆ, ಅವರು ಕನ್ನಡ ಕನ್ನಡ ಎಂದು ಒತ್ತಾಯ ಮಾಡಿದ್ದಕ್ಕೆ ನನಗೆ ಕೋಪ ಬಂದು ಹಾಗೆ ಮಾತನಾಡಿದೆ. ಕನ್ನಡದ ಮೇಲೆ ನನಗೆ ತುಂಬಾ ಗೌರವ ಇದೆ ಎಂದು ಸ್ಪಷ್ಟನೆ ನೀಡಿದ್ದರು. ಈಗ ಮತ್ತೊಮ್ಮೆ ಕನ್ನಡ ಹಾಗೂ ಕನ್ನಡಿಗರ ಗುಣಗಾನ ಮಾಡಿ ಮನಗೆದ್ದಿದ್ದಾರೆ.












Click it and Unblock the Notifications