ಸೋನು ನಿಗಮ್ ವಿವಾದದ ಬಳಿಕ ಹೊಸ ರೂಲ್ಸ್, ಕನ್ನಡ ಹಾಡು ಕೇಳಿದ್ರೆ ಗಾಯಕರು ಹಾಡಲೇಬೇಕು!
ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಹೇಳನ ಮಾಡಿದ ಕಾರಣಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್ ಮಾಡಲಾಗಿದೆ. ಕನ್ನಡ ಹಾಡು ಕೇಳಿದ್ದಕ್ಕೆ ಸೋನು ನಿಗಮ್ ಇದಕ್ಕೇನೆ ಪೆಹಲ್ಗಾಮ್ ದಾಳಿಯಾಗಿದ್ದು ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಕೊನೆಗೂ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಹಾಗಾಗಿ ಅವರ ಮೇಲಿರುವ ನಿಷೇಧ ತೆರವಾಗುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಸೋನು ನಿಗಮ್ ಸೇರಿದಂತೆ ಯಾವುದೇ ಗಾಯಕರು ಇನ್ನು ಮುಂದೆ ರಾಜ್ಯದ ಈ ಭಾಗದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಾದರೆ ಈ ನಿಯಮ ಪಾಲಿಸಲೇಬೇಕು ಎಂಬ ಖಡಕ್ ರೂಲ್ಸ್ ತರಲಾಗಿದೆ.
ಗಾಯಕನ ಒಂದು ಹೇಳಿಕೆಯಿಂದ ಭಾರಿ ವಿವಾದ ಸೃಷ್ಟಿಯಾದ ಕಾರಣ ಇನ್ನು ಮುಂದೆ ಈ ಈತಿಯ ಘಟನೆಗಳು ಮರುಕಳಿಸದಂತೆ ತಡೆಯಲು ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಸೋನು ನಿಗಮ್ ಅವರಿಗೆ ಬೆಂಗಳೂರು ಗ್ರಾಮಾಂತರ ಪೊಲೀಸರು ಹೊಸ ರೂಲ್ಸ್ ಜಾರಿ ಮಾಡಿದ್ದಾರೆ. ಅದರಂತೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನೀಡುವಾಗ ಯಾರಾದರೂ ಕನ್ನಡ ಹಾಡಿಗಾಗಿ ಬೇಡಿಕೆ ಇಟ್ಟರೆ ಅದರಂತೆ ಕನ್ನಡ ಹಾಡನ್ನು ಅವರು ಹಾಡಲೇಬೇಕು ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಹಾಡು ಕೇಳಿದ್ದಕ್ಕೆ ನಾಲಿಗೆ ಹರಿಬಿಟ್ಟಿದ್ದರು. ಇದಕ್ಕೇನೇ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಾಗಿದ್ದು ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂಬ ಉದ್ದೇಶಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸರು ಈ ಹೊಸ ನಿಯಮ ತಂದಿದ್ದಾರೆ. ಈ ಭಾಗದಲ್ಲೂ ಸಾಕಷ್ಟು ಕಾಲೇಜುಗಳು ಇರುವುದರಿಂದ ಅಲ್ಲಿಯೂ ಅವರ ಸಂಗೀತ ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ. ಹಾಗಾಗಿ ಯಾವುದೇ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡಿಗೆ ಬೇಡಿಕೆ ಇಟ್ಟರೆ ಅದನ್ನು ಅವರು ಹಾಡಲೇಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಈ ಬಗ್ಗೆ ಖಡಕ್ ಸೂಚನೆ ನೀಡಿದ್ದಾರೆ. ಯಾರೇ ಕಾರ್ಯಕ್ರಮ ಮಾಡಿದರೂ ಅದಕ್ಕೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ಈ ರೀತಿಯ ಘಟನೆಗಳು ನಡೆದರೆ ಅದಕ್ಕೆ ಕಾರ್ಯಕ್ರಮದ ಆಯೋಜಕರನ್ನೇ ಹೊಣೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಸೋನು ನಿಗಮ್ ವಿಡಿಯೋ ವೈರಲ್ ಆದ ಬಳಿಕ ಭಾರಿ ವಿರೋಧಕ್ಕೆ ಕಾರಣವಾಯಿತು. ಕನ್ನಡ ಸಂಘಟನೆಗಳು ಸೋನು ನಿಗಮ್ ಅವರನ್ನು ಬ್ಯಾನ್ ಮಾಡುವಂತೆ ಪ್ರತಿಭಟನೆ ನಡೆಸಿದವು. ಅದರಂತೆ ಅವರನ್ನು ಬ್ಯಾನ್ ಕೂಡ ಮಾಡಲಾಗಿದೆ. ವಿವಾದ ಹುಟ್ಟುಕೊಂಡಿದ್ದರಿಂದ ಮತ್ತೊಂದು ವಿಡಿಯೋ ಮಾಡಿ ಸೋನು ನಿಗಮ್ ಸ್ಪಷ್ಟನೆ ನೀಡಿದ್ದರು. ಆದರೆ ಅದು ಕನ್ನಡಿಗರ ಕೋಪ ಶಮನ ಮಾಡಲಿಲ್ಲ. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಗಾಯಕ "ಕನ್ನಡಿಗರ ಪ್ರೀತಿಗಿಂತ ನನ್ನ ಅಹಂ ದೊಡ್ಡದಲ್ಲ. ನಾನು ಕನ್ನಡಿಗರಲ್ಲಿ ಕ್ಷಮೆ ಕೇಳುತ್ತೇನೆ" ಎಂದಿದ್ದರು. ಈ ಹಿನ್ನೆಲೆ ಅವರ ಮೇಲಿನ ನಿಷೇಧ ತೆರವಾಗುವ ಸಾಧ್ಯತೆ ಇದೆ.












Click it and Unblock the Notifications