Sonu Nigam: ಕನ್ನಡಿಗರ ಬಗ್ಗೆ ಮತ್ತೊಂದು ವಿಡಿಯೋ ಮಾಡಿದ ಗಾಯಕ ಸೋನು ನಿಗಮ್, ಇಲ್ಲಿದೆ ವೈರಲ್ ವಿಡಿಯೋ!
Sonu Nigam: ಬೆಂಗಳೂರಿನಲ್ಲಿ ಕನ್ನಡ ಹಾಡು ಕೇಳಿದ ಕನ್ನಡಿಗರ ಬಗ್ಗೆ ವ್ಯಂಗ್ಯವಾಡಿದ್ದ ಗಾಯಕ ಸೋನು ನಿಗಮ್ ಇದೀಗ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಮತ್ತೊಂದು ವಿಡಿಯೋ ಮಾಡಿದ್ದಾರೆ. ಕನ್ನಡದ ಹಾಡು ಹಾಡುವಂತೆ ಕನ್ನಡಿಗ ಅಭಿಮಾನಿ ಮನವಿ ಮಾಡಿದ್ದಕ್ಕೆ ಈ ಬೇಡಿಕೆಯನ್ನು ಸೋನು ನಿಗಮ್ ಜಮ್ಮ ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಕೆ ಮಾಡಿದ್ದರು. ಇದು ಕನ್ನಡಿಗರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಮಾಡಿ ಸೋನು ನಿಗಮ್ ಕನ್ನಡಿಗರನ್ನು ಕೆಣಕಿದ್ದರು. ಇದೀಗ ಮತ್ತೊಂದು ವಿಡಿಯೋ ಮಾಡಿ ತಮ್ಮ ಮಾತು ಬದಲಾಯಿಸಿದ್ದಾರೆ. ಆದರೆ ಕನ್ನಡಿಗರ ಮೇಲೆ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಇನ್ನು ಈ ಮಾತು ಸಹ ಕನ್ನಡಿಗರ ಕೋಪವನ್ನು ತಣಿಸುತ್ತಿಲ್ಲ. ಸೋನು ನಿಗಮ್ ಈಗ ಹೇಳಿದ್ದೇನು, ಕನ್ನಡಿಗರ ಆಕ್ರೋಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ಸೋನು ನಿಗಮ್ ಕನ್ನಡಿಗರ ಅಚ್ಚುಮೆಚ್ಚಿನ ಗಾಯಕರಾಗಿದ್ದವರು. ಆದರೆ, ಕಳೆದೊಂದು ವಾರದಿಂದ ಕನ್ನಡಿಗರು ಸೋನು ನಿಗಮ್ ಮೇಲೆ ಕೊತ ಕೊತ ಅಂತ ಕುದಿಯುತ್ತಿದ್ದಾರೆ. ಈ ರೀತಿ ಇರುವಾಗಲೇ ಸೋನು ನಿಗಮ್ ಮತ್ತೊಂದು ವಿಡಿಯೋ ಮಾಡಿದ್ದರು. ಈಗಾಗಲೇ ಸೋನು ನಿಗಮ್ ಮೇಲೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಕನ್ನಡಿಗರ ಮೇಲೆ ಸೋನು ನಿಗಮ್ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಆ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಿ ಅಂತ ರಿಕ್ವೆಸ್ಟ್ ಮಾಡಲಿಲ್ಲ. ದಬಾಯಿಸಿದರು, ನನಗೆ ಬೆದರಿಕೆ ಹಾಕಿದರು ಅಂತ ಅವರು ಹೇಳಿದ್ದಾರೆ. ಕೆಲವೇ ಕೆಲವರ ತಪ್ಪು ನಡವಳಿಕೆಯಿಂದಾಗಿ ಎಲ್ಲಾ ಕನ್ನಡಿಗರನ್ನೂ ಕೆಟ್ಟವರೆಂದು ಭಾವಿಸಬಾರದು ಅಂತ ಅವರು ಹೇಳಿದ್ದಾರೆ. ಆಗ ನಾನು ಕನ್ನಡದ ಹಾಡು ಹಾಡುವುದಕ್ಕೆ ಸಿದ್ಧನಿದ್ದೆ. ಆದರೆ, ಬಲವಂತ & ಒತ್ತಾಯ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

ಕನ್ನಡ.. ಕನ್ನಡ ಅಂತ ಪ್ರೀತಿಯಿಂದ ಹೇಳುವುದಕ್ಕೂ ಕನ್ನಡ.. ಕನ್ನಡ ಅಂತ ಧಮ್ಕಿ ಹಾಕುವುದರ ನಡುವೆ ಸಾಕಷ್ಟು ವ್ಯತ್ಯಾಸಗಳು ಇವೆ. ಆ ಕಾರ್ಯಕ್ರಮದಲ್ಲಿ ವೇದಿಕೆ ಕೆಳಗಿದ್ದ ಕೆಲವು ಗೂಂಡಾಗಳು ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಕೊಡುತ್ತಿದ್ದರು. ನಾನು ಅವರಿಗೆ ಪಹಲ್ಗಾಮ್ನಲ್ಲಿ ಉಗ್ರರು ಪ್ಯಾಂಟ್ ಕಳಚುವಾಗ ಭಾಷೆಯನ್ನು ಕೇಳಿಲ್ಲ ಅಂತ ಹೇಳುವುದು ತೀರ ಅನಿವಾರ್ಯವಾಗಿತ್ತು ಎಂದಿದ್ದಾರೆ. ನಾನು ಸುಂದರ ಕ್ಷಣಗಳನ್ನು ಹಾಳು ಮಾಡಬೇಡಿ ಅಂತ ಹೇಳಿದ್ದೆ ಅವರು ಕೇಳಲಿಲ್ಲ.
ಕನ್ನಡಿಗರು ತುಂಬಾ ಪ್ರೀತಿಯ ಜನ ಎಲ್ಲರೂ ಆ ರೀತಿ ಇಲ್ಲ. ಕೆಲವರು ಎಲ್ಲಾ ಕಡೆಯೂ ಇದ್ದಾರೆ. ಅವರಿಗೆ ಅಲ್ಲಿಯೇ ಉತ್ತರಿಸುವುದು ಅನಿವಾರ್ಯ ಅಂತ ಅವರು ಹೇಳಿದ್ದಾರೆ. ಎಲ್ಲರೂ ಒಂದೇ ಅಲ್ಲ.. ನಾನು ಮೊದಲ ಹಾಡು ಪ್ರಾರಂಭಿಸಿದಾಗಲೇ ಅವರು ಒತ್ತಾಯಿಸಿದ್ದರು. ಹೀಗಾಗಿ ನಾನು ರಿಯಾಕ್ಟ್ ಮಾಡಬೇಕಾಯಿತು. ಕಮೆಂಟ್‌ಗಳನ್ನು ನೋಡಿ ನೀವು ಅಲ್ಲಿ ಎಲ್ಲಾ ಕನ್ನಡಿಗರು ಸಹ ಈ ರೀತಿ ಇಲ್ಲ ಅಂತ ಹೇಳಬೇಕಾಯ್ತು ಅಂತ ಹೇಳಿದ್ದಾರೆ.

ಗೀತರಚನೆಕಾರ ಕವಿರಾಜ್ ಆಕ್ರೋಶ!
ಗೀತರಚನೆಕಾರ ಕವಿರಾಜ್ ಅವರು, ಸೋನು ನಿಗಮ್ ಅವರ ವೀಡಿಯೊ ಕ್ಲಿಪ್ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಅದು conclusive ಆಗಿರಲಿಲ್ಲ. ಹಾಗಾಗಿ ನಾನು ಯಾವತ್ತೂ ವಿಧಿಸಿಕೊಂಡಿರುವ ನಿಯಮದಂತೆ ಸರಿಯಾದ ಮಾಹಿತಿ ಬರೋವರೆಗೂ ಅವಸರಕ್ಕೆ ಬಿದ್ದು ಕಾಮೆಂಟ್ ಮಾಡಿರಲಿಲ್ಲ. ಈಗಷ್ಟೇ ಸೋನುನಿಗಮ್ ಸ್ಪಷ್ಟೀಕರಣ ನೀಡಿದ ವೀಡಿಯೊ ನೋಡಿದೆ. ಅಲ್ಲಿಗೆ ಕನ್ನಡ ಹಾಡಿಗೆ ಬೇಡಿಕೆ ಇಟ್ಟಿದ್ದನ್ನು ಪೆಹಲ್ಗಾಮ್ ಉಗ್ರಗಾಮಿಗಳ ದಾಳಿಯೊಂದಿಗೆ ಸಮೀಕರಿಸಿದ್ದು ಅವರ ಮೂರ್ಖತನ ಮತ್ತು ದುರಹಂಕಾರವನ್ನು ಇನ್ನಷ್ಟು ಜಾಹೀರು ಮಾಡಿದೆ ಎಂದು ಅವರು ಹೇಳಿದ್ದಾರೆ.
ಹಿಂದಿ ಚಿತ್ರೋದ್ಯಮದಿಂದ ಅಘೋಷಿತ ಬಹಿಷ್ಕಾರ ಅನುಭವಿಸಿದ್ದ ಅವರಿಗೆ ಆಸರೆ ಆಗಿದ್ದೆ ಕನ್ನಡ ಹಾಡುಗಳು. ಅವರೂ ಕೂಡ ಎಲ್ಲಿ ಹೋದರು ಕನ್ನಡ ಹಾಡುಗಳ ಬಗ್ಗೆ ವ್ಯಕ್ತಪಡಿಸುವ ಕೃತಜ್ಞತೆ ಖುಷಿಕೊಡುತ್ತಿತ್ತು. ನಾನು ಬರೆದ ಸುಮಾರು ನೂರು ಹಾಡುಗಳನ್ನು ಸೋನು ಹಾಡಿರಬಹುದು. ಸೋನು ಧ್ವನಿ ನಮ್ಮ ಹಾಡುಗಳಿಗೆ ಮೆರುಗು ನೀಡುತ್ತಿದ್ದದ್ದು ನಿಜಾ. ಆದರೆ ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ. ಉಂಡ ಮನೆಗೆ ಎರಡು ಬಗೆಯುವ ಇಂತಹಾ ವರ್ತನೆ ಖಂಡನೀಯ ಮತ್ತು ಅಕ್ಷಮ್ಯ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications