ವಿಷ್ಣುವರ್ಧನ್ ಸಿಹಿ ಕಹಿ ಚಂದ್ರುಗೆ ಜೀವದಾತ ಆಗಿದ್ದೇಗೆ?: ಉಮಾಶ್ರೀ ಮಾಡಿದ ಸಹಾಯವೇನು?
ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ಸಿಹಿ ಕಹಿ ಚಂದ್ರು ಹೆಸರು ಜನಪ್ರಿಯ ಹಾಗೂ ಚಿರಪರಿಚಿತ. ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಸಿಹಿ ಕಹಿ ಚಂದ್ರು, ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಅನೇಕ ದಶಕಗಳನ್ನು ಕಳೆದಿರುವ ಅವರು ಶಂಕರ್‌ನಾಗ್, ಅನಂತ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಅನೇಕ ಹಿರಿಯ ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಅಂದಿನ ಸಮಯಕ್ಕೆ ತಮಗೆ ಎದುರಾದ ಕಷ್ಟದ ಸಮಯದಲ್ಲಿ ನಟ ವಿಷ್ಣುವರ್ಧನ್ ಹೇಗೆ ನೆರವಾಗಿ ತಮ್ಮ ಜೀವ, ಜೀವನ ಎರಡನ್ನೂ ಉಳಿಸಿದರು ಎನ್ನುವುದನ್ನು ಸಿಹಿ ಕಹಿ ಚಂದ್ರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ವಿಷ್ಣುವರ್ಧನ್ ನನಗೆ ಜೀವ ಕೊಟ್ಟವರು. ಅವರು ನನ್ನ ಗೆಳೆಯ ಎನ್ನುವುದಕ್ಕಿಂತ ಜೀವದಾತ. ಅವರು ಇರದೇ ಇದ್ದರೆ ನನ್ನ ಆರೋಗ್ಯ ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿತ್ತು. ನನಗೆ ತಪ್ಪಾಗಿ ಡಯಾಗ್ನೋಸಿಸ್ ಮಾಡಿದರು. ಅದಕ್ಕೆ ಅಮೇರಿಕಾದಿಂದ ಔಷಧಿ ತರಬೇಕು ಅಂದರು. ಆಗಿನ ಕಾಲಕ್ಕೆ ಇಪ್ಪತ್ತೊಂದು ದಿನಕ್ಕೆ ಒಂದು ಡೋಸೇಜ್ ಒಂದೂವರೆ ಲಕ್ಷ. ಆ ಚಿಕಿತ್ಸೆ ತೆಗೆದುಕೊಂಡರೂ ಸಹ ಸಂಪೂರ್ಣವಾಗಿ ಗುಣ ಆಗುತ್ತೇನೆ ಎನ್ನುವ ಗ್ಯಾರಂಟಿ ಇರಲಿಲ್ಲ'.

'ನಾನು ಸಾಯುತ್ತೇನೆ ಎನ್ನುವ ಆಲೋಚನೆ ನನ್ನ ತಲೆಯಲ್ಲಿ ಬಲವಾಗಿತ್ತು. ನನ್ನ ಹೆಂಡತಿಗೂ ನಾನಿಲ್ಲದೇ ಹೇಗೆ ಬದುಕಬೇಕು ಎಂದು ಧೈರ್ಯ ಕೂಡ ತುಂಬಿದ್ದೆ. ಆ ಸಮಯದಲ್ಲಿ ನಾನು ನೆಪಿಸಿಕೊಳ್ಳ ಬೇಕಾಗಿರುವುದು ವಿಷ್ಣುವರ್ಧನ್ ಹಾಗೂ ಉಮಾಶ್ರೀ ಅವರನ್ನು ಹಾಗೂ ಮುಖ್ಯಮಂತ್ರಿ ಚಂದ್ರು ಅವರನ್ನು. ಉಮಾಶ್ರೀ ಅವರು ಕರೆ ಮಾಡಿ ಏನೋ ಆಗಿದೆ ನಿನಗೆ ಅಂತಾ ವಿಚಾರಿಸಿದರು. ಈ ರೀತಿಯ ಕಾಯಿಲೆ ಎಂದು ಹೇಳಿಕೊಂಡೆ ಬಾ ಮನೆಗೆ ಎಂದು ಹೇಳಿದರು'.
'ಅವರ ಮನೆಗೆ ಹೋಗಲು ಒಂದು ಗಾಡಿ ಸಹ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾನಿದ್ದೆ. ಬಳಿಕ ನನ್ನ ಸ್ನೇಹಿತ ಬಂದು ಕರೆದುಕೊಂಡು ಹೋದ. ಉಮಾಶ್ರೀ ಆಗಿನ ಕಾಲದಲ್ಲಿಯೇ ಇಪ್ಪತೈದು ಸಾವಿರ ರೂಪಾಯಿ ಕೊಟ್ಟಿದ್ದರು. ನಿನಗೆ ಇನ್ನೂ ಹಣ ಬೇಕಿದ್ದರೆ ಹೇಳು, ಹೇಗಾದರೂ ಹೊಂದಿಸಿ ಕೊಡುತ್ತೇನೆ. ನೀನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿ ಕಳುಹಿಸಿಕೊಟ್ಟಳು. ನನಗೆ ಆರೋಗ್ಯ ಕೆಟ್ಟಾಗ ಮೊದಲು ಹಣ ಕೊಟ್ಟಿದ್ದು ಉಮಾಶ್ರೀ' ಎಂದು ಸಿಹಿ ಕಹಿ ಚಂದ್ರು ಹಿರಿಯ ನಟಿ ಉಮಾಶ್ರೀ ಅಂದು ಮಾಡಿದ ಸಹಾಯವನ್ನು ನೆನಪಿಸಿಕೊಂಡರು.

'ಆಮೇಲೆ ವಿಷ್ಣುವರ್ಧನ್ ಅವರನ್ನು ಭೇಟಿಯಾದೆ. ವಿಷ್ಣುವರ್ಧನ್ ಅವರ ಮೂಲಕ ಮುಖ್ಯಮಂತ್ರಿ ನಿಧಿಯಿಂದ ಹಣ ಪಡೆಯಬೇಕು ಎನ್ನುವುದು ನನ್ನ ಆಲೋಚನೆಯಾಗಿತ್ತು. ಆಗ ವಿಷ್ಣುವರ್ಧನ್ ರವಿ ವರ್ಮ ಎನ್ನುವ ಸಿನಿಮಾ ಮಾಡುತ್ತಿದ್ದರು. ಅದರ ನಿರ್ಮಾಪಕರು ರಮೇಶ್ ಅಂತಾ ಅವರು ಸಚಿವರಾಗಿದ್ದರು. ಹೀಗಾಗಿ ರಮೇಶ್ ಅವರ ಮೂಲಕ ಸರ್ಕಾರದಿಂದ ಸಹಾಯ ಪಡೆಯಬೇಕು ಎನ್ನುವ ಯೋಚನೆಯಲ್ಲಿದ್ದೆ. ಹೀಗಾಗಿ ವಿಷ್ಣುವರ್ಧನ್ ಅವರನ್ನು ಭೇಟಿಯಾದೆ'.
'ವಿಷ್ಣುವರ್ಧನ್ ನನ್ನ ನೋಡುತ್ತಿದ್ದಂತೆ ಶಾಕ್ ಆದರು. ಯಾಕೆ ಹೀಗಾಗಿದ್ದೀಯಾ? ಏನಾಯಿತು ನಿನಗೆ ಅಂತಾ ಕೇಳಿದರು. ನಾನು ಕಾಯಿಲೆ ಬಗ್ಗೆ ಎಲ್ಲಾ ಹೇಳಿಕೊಂಡೆ. ಒಂದು ಅರ್ಧ ಗಂಟೆಯಾದ ಮೇಲೆ ಅವರ ಕಾರಿನಲ್ಲೇ ಒಬ್ಬರು ಡಾಕ್ಟರ್ ಅನ್ನು ಭೇಟಿ ಮಾಡಲು ಕಳುಹಿಸಿದರು. ಆ ಡಾಕ್ಟರ್ ನನಗಿದ್ದ ಕಾಯಿಲೆಯ ವಿವರ ಪಡೆದುಕೊಂಡು ಇದು ಆ ಕಾಯಿಲೆ ಅಲ್ಲಾ ಅಂತಾ ಹೇಳಿ ಮತ್ತೆ ಬೇರೆ ಪರೀಕ್ಷೆ ಮಾಡಲು ಬರೆದುಕೊಟ್ಟರು. ಆ ಟೆಸ್ಟ್‌ಗಳನ್ನು ಮಾಡಿಸಿ ಬಳಿಕ ವರದಿ ಬಂದಾಗ ನನಗೆ ಇರುವುದು ಆ ಕಾಯಿಲೆ ಅಲ್ಲಾ ಅಂತಾ ಗೊತ್ತಾಯ್ತು'.

'ಆಗ ನಿಜವಾಗಿ ಇದ್ದ ಸಮಸ್ಯೆ ಗುಣವಾಗಲು ಒಂದು ವರ್ಷ ಒಂದು ಮಾತ್ರೆ ತೆಗೆದುಕೊಳ್ಳಬೇಕಿತ್ತು. ಆ ಡಾಕ್ಟರ್ ನನಗೆ ಒಂದು ವರ್ಷಕ್ಕೆ ಆಗುವಷ್ಟು ಔಷಧಿ ತೆಗೆದುಕೊಟ್ಟರು. ಈ ವೇಳೆ ನಾನು ದುಡ್ಡು ಕೊಡಲು ಹೋದಾಗ, ದುಡ್ಡೆಲ್ಲಾ ಕೊಟ್ಟು ಆಗಿದೆ ಅಂತಾ ಹೇಳಿದರು. ವಿಷ್ಣುವರ್ಧನ್ ಎಲ್ಲವನ್ನೂ ಕೊಟ್ಟಿದ್ದಾರೆ ಎಂದು ಡಾಕ್ಟರ್ ಹೇಳಿದರು. ನನ್ನ ಚಿಕಿತ್ಸೆಯ ಸಂಪೂರ್ಣ ಹಣವನ್ನು ಅವರೇ ಕೊಟ್ಟಿದ್ದರು' ಎಂದು ಸಿಹಿ ಕಹಿ ಚಂದ್ರು ವಿಷ್ಣುವರ್ಧನ್ ತಮ್ಮ ಜೀವ ಉಳಿಸಿದ ಸಮಯವನ್ನು ನೆನಪಿಸಿಕೊಂಡರು.
ಸಿಹಿಕಹಿ ಚಂದ್ರುಗಾಗಿ ಹರಕೆ ಹೊತ್ತಿದ್ದ ವಿಷ್ಣುವರ್ಧನ್ ದಂಪತಿ
ಮಾತು ಮುಂದುವರಿಸಿದ ಅವರು, 'ಇದಿಷ್ಟು ಇನ್ಯಾರೋ ಮಾಡುವ ಸಾಧ್ಯತೆ ಇದೆ ಅಂತಾ ಅಂದುಕೊಳ್ಳೋಣ. ಅದನ್ನು ಮೀರಿ ವಿಷ್ಣುವರ್ಧನ್ ಎಲ್ಲಿ ಗ್ರೇಟ್ ಆಗುತ್ತಾರೆ ಅಂದರೆ, ಒಂದು ದಿನ ಅವರೇ ಫೋನ್ ಮಾಡಿದರು. ಹುಷಾರಾಗಿದ್ದೀಯಾ ಮನೆಗೆ ಬಾ ಅಂದರು. ಮನೆಗೆ ಹೋದೆ. ನಾನು ಮನೆಗೆ ಹೋಗುತ್ತಿದ್ದಂತೆ ಅವರು ತಿರುಪತಿ ಲಡ್ಡು ಕೊಟ್ಟರು. ನಿನಗೋಸ್ಕರ ಭಾರತಿ ಹರಸಿಕೊಂಡಿದ್ದಳು. ನಾವು ತಿರುಪತಿಗೆ ಹೋಗಿ ಹರಕೆ ತೀರಿಸಿ ಬಂದೆವು ಅಂತಾ ಹೇಳಿ ಪ್ರಸಾದ ಕೊಟ್ಟರು'.
'ನನಗೋಸ್ಕರ ಅವರು ಹರಿಸಿಕೊಂಡಿದ್ದರು ಅಂದರೆ ಯಾರಾದರೂ ನಂಬುತ್ತಾರಾ?. ಅವರಂತಹ ವ್ಯಕ್ತಿತ್ವವನ್ನು ನಾನು ಎಲ್ಲಿಯೂ ನೋಡಿಲ್ಲ. ಹೀಗಾಗಿ ಅವರು ಜೀವದಾತ, ದೇವತಾ ಮನುಷ್ಯ. ಅವರು ಮತ್ತು ನಮ್ಮ ಮಧ್ಯೆ ಬಾಂಧವ್ಯ ಹಾಗೆ ಇತ್ತು. ಅವರು ಆ ಸ್ನೇಹಕ್ಕೆ ಅಷ್ಟು ಬೆಲೆ ಕೊಡುತ್ತಿದ್ದರು. ಆಗೆಲ್ಲಾ ಹೀರೋ, ಹಾಸ್ಯ ನಟ ಎನ್ನುವುದೆಲ್ಲಾ ಇರುತ್ತಲೇ ಇರಲಿಲ್ಲ. ಎಲ್ಲರಿಗೂ ನಮ್ಮವರು ನಮ್ಮವನು ಎನ್ನುವುದು ಇತ್ತು. ಆ ನಮ್ಮವನು ಎನ್ನುವ ಭಾವನೆಗೆ ಬೆಲೆ ಕಟ್ಟಲಾಗದು. ನಾವು ಈ ಚಿತ್ರರಂಗಕ್ಕೆ ಬಂದು ಏನು ಸಂಪಾದಿಸಿದೆವು ಅಂದರೆ ಈ ಬಾಂಧವ್ಯವನ್ನು ಸಂಪಾದಿಸಿದೆವು' ಎಂದರು.
ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಕಲಾವಿದರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಒಬ್ಬರ ಸಹಾಯಕ್ಕೆ ಮತ್ತೊಬ್ಬರು ಸದಾ ಇರುತ್ತಿದ್ದರು. ಶಂಕರ್‌ನಾಗ್, ವಿಷ್ಣುವರ್ಧನ್ ಅಂತಹ ನಟರು ಸಹ ಕಲಾವಿದರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎನ್ನುವುದನ್ನು ಸಿಹಿಕಹಿ ಚಂದ್ರು ಹೇಳಿದ್ದಾರೆ.












Click it and Unblock the Notifications