'ಜೋಗಿ' ಶೂಟಿಂಗ್ ವೇಳೆ ಶಿವಣ್ಣನಿಗೆ ಪೊಲೀಸ್ ಒದೆಯುವ ಸೀನ್: ಆ ದಿನ ನಡೆದಿದ್ದೇನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿದ್ದ ಜೋಗಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶಿಸಿದ್ದ ಈ ಸಿನಿಮಾ ಶಿವಣ್ಣನಿಗೆ ದೊಡ್ಡ ಸ್ಟಾರ್‌ಡಮ್ ತಂದುಕೊಟ್ಟಿತ್ತು. ಇಂದಿಗೂ ಶಿವಣ್ಣನ ಟಾಪ್ ಸಿನಿಮಾಗಳಲ್ಲಿ ಜೋಗಿ ಕೂಡ ಸ್ಥಾನ ಪಡೆದುಕೊಂಡಿದೆ. ರೌಡಿಸಂ, ಅಮ್ಮನ ಪ್ರೀತಿಯ ಕುರಿತು ಹೆಣೆದಿದ್ದ ಈ ಸಿನಿಮಾ ಕಥೆಗೆ ಪ್ರೇಕ್ಷಕರು ಥಿಯೇಟರ್ ಕಣ್ಣೀರು ಸುರಿಸಿದ್ದರು. ಇನ್ನು ಈ ಸಿನಿಮಾ ಶೂಟಿಂಗ್ ವೇಳೆ ನಡೆದಿದ್ದ ಕೆಲ ಅಚ್ಚರಿ ವಿಚಾರಗಳನ್ನು ಪೋಷಕ ನಟರಾದ ಮೈಕೋ ನಾಗರಾಜ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಶೂಟಿಂಗ್ ವೇಳೆ ನಡೆದ ಘಟನೆಯೊಂದನ್ನು ಅವರು ಬಿಚ್ಚಿಟ್ಟಿದ್ದರು.
'ಜೋಗಿ' ಸಿನಿಮಾ ಶೂಟಿಂಗ್ ವೇಳೆ ಪೊಲೀಸ್ ಪಾತ್ರದಲ್ಲಿದ್ದವರು ಶಿವರಾಜ್ ಕುಮಾರ್ ಅವರನ್ನು ಹೊಡೆಯುವ ಸೀನ್ ಇತ್ತು. ಅದರಲ್ಲಿ ನನಗೆ ಚುಚ್ಚಿದ್ದ ಸೀನ್ ಇತ್ತು. ಶಿವಣ್ಣ ಬಂದು ನನ್ನ ಕಾಪಾಡಬೇಕಿತ್ತು. ಶಿವಣ್ಣನೇ ನನ್ನ ಚುಚ್ಚಿದ್ದು ಎಂಬ ಅಪಾರ್ಥದಲ್ಲಿ ಪೊಲೀಸರು ಅವರನ್ನು ಒದೆಯುವ ಸೀನ್ ಇತ್ತು. ಆದರೆ ಇನ್‌ಸ್ಪೆಕ್ಟರ್ ಪಾತ್ರ ಮಾಡಿದ್ದವರು ಅದಕ್ಕೆ ಒಪ್ಪಲೇ ಇಲ್ಲ. ಶಿವಣ್ಣ ಅವರಂತಹ ಕಲಾವಿದರಿಗೆ ನಾವು ಕಾಲಿನಿಂದ ತುಳಿಬೇಕು ಅಂದ್ರೆ ಆಗಲ್ಲ, ಥಿಯೇಟರ್‌ನಲ್ಲಿ ಜನ ಇದನ್ನ ನೋಡಿದ್ರೆ ಏನ್ ಮಾಡ್ತಾರೋ ಅಂತ ಭಯಪಟ್ಟಿದ್ರು' ಎಂದು ವಿವರಿಸಿದ್ದರು.

'ಆದರೆ ಶಿವರಾಜ್‌ಕುಮಾರ್ ಅವರೇ ನೀನು ಕರೆಕ್ಟಾಗಿ ತುಳಿದ್ರೆ, ಮಾತ್ರ ಈ ಸೀನ್ ಸರಿಯಾಗಿ ಬರುತ್ತೆ ಅಂತ ಹೇಳ್ತಾರೆ. ಕೇಳಿ ಕೇಳಿ ಅವರಿಂದ ಶಿವಣ್ಣ ಹೊಡೆಸಿಕೊಳ್ತಾರೆ. ಬೇರೆ ಕಲಾವಿದರೂ ಅಂತಹ ದೃಶ್ಯ ಒಪ್ಪುತ್ತಿರಲಿಲ್ಲ. ಆದರೆ ಶಿವಣ್ಣ ಏನೂ ಅಂದುಕೊಳ್ಳದೆ ಆ ರೀತಿ ನಡೆದುಕೊಂಡರು. ಬೇರೆ ನಟರಾಗಿದ್ದರೆ ಗ್ರಾಫಿಕ್ ಮಾಡಿಸಿ ಅಂತಿದ್ರುʼ ಎಂದು ಶಿವಣ್ಣನ ಶ್ರದ್ಧೆ ಕೊಂಡಾಡಿದ್ದರು.
'ಬಿಸಿಲಲ್ಲೇ ಗಂಟೆಗಟ್ಟಲೆ ನಿಂತಿದ್ರು'
'ಮುಂದಿನ ಸೀನ್‌ನಲ್ಲಿ ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ. ಬಿಸಿಲು ಜಾಸ್ತಿ ಇತ್ತು. ಆಗ ಅಸಿಸ್ಟೆಂಟ್ ಬಂದು ಶಿವಣ್ಣನಿಗೆ ಛತ್ರಿ ಹಿಡಿದಿದ್ರು. ನಾನು ಕೂಡ ಅಲ್ಲೇ ಇದ್ದೆ. ಆಗ ಶಿವಣ್ಣ ಎತ್ತೋ ಛತ್ರಿ ಅಂದ್ರು, ಕೊಟ್ಟರೆ ಇಬ್ಬರಿಗೂ ಛತ್ರಿ ಕೊಡು, ಇಲ್ಲ ಬೇಡ ಅಂದ್ರು. ಆಗ ಅವರ ಬಗ್ಗೆ ಇದ್ದ ಭಯ ಸ್ವಲ್ಪ ಕಡಿಮೆ ಆಯ್ತು. ಆ ಸೀನ್‌ಗಾಗಿ ಶಿವರಾಜ್‌ಕುಮಾರ್ ಅವರು ಒಂದೂವರೆ ಗಂಟೆ ಬಿಸಿಲಲ್ಲೇ ಇದ್ರು' ಎಂದು ಮೈಕೋ ಶಿವಣ್ಣನ ಸರಳತೆ ನೆನೆದಿದ್ದರು.
'ಆ ಸೀನ್ ತುಂಬಾ ಚೆನ್ನಾಗಿ ಬಂತು. ಶೂಟಿಂಗ್ ಆಗಬೇಕಾದ್ರೆ ನಮಗೆಲ್ಲ ಖುಷಿ ಆಗ್ತಿದೆ. ಶೂಟಿಂಗ್ ಕೂಡ ಬೇಗ ಮುಗೀತು. ಆವತ್ತು ಆರು ಗಂಟೆಗೆ ಇದ್ದ ಕಾಲ್‌ಶೀಟ್‌ನಲ್ಲಿ ಬ್ರೇಕ್‌ಗೆ ಮುಂಚೆನೇ ಎಲ್ಲ ಸೀನ್ ಮುಗೀತು. ಶಿವಣ್ಣ ಆಗ ಬಂದು ನನ್ನ ತಬ್ಬಿಕೊಂಡ್ರು. ಏನ್ ಸರ್ ಇಷ್ಟು ದಿನ ಎಲ್ಲಿದ್ರಿ ಅಂತ ಖುಷಿಯಿಂದ ಕೇಳಿದ್ರು' ಎಂದು ಮೈಕೊ ನಾಗರಾಜ್ ಜೋಗಿ ಸಿನಿಮಾದ ಶೂಟಿಂಗ್ ಅನುಭವವನ್ನು ಹೇಳಿಕೊಂಡಿದ್ದರು.












Click it and Unblock the Notifications