‘ಅಪ್ಪು’ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅಣ್ಣ ಶಿವರಾಜ್‌ಕುಮಾರ್ ಹೇಳಿದ ಮಾತನ್ನು ಕೇಳಿದ್ರೆ ಕಣ್ಣೀರು ಬರುತ್ತೆ...
ಅಪ್ಪು.. ಅಪ್ಪು.. ಅಪ್ಪು.. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಕನ್ನಡಿಗರ ನೆಲಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿಹೋಗಿದೆ. ಅದರಲ್ಲೂ ಕಳೆದ 2 ವರ್ಷಗಳಲ್ಲಿ, ಕನ್ನಡಿಗರ ಗುಣ & ಕೀರ್ತಿಯ ಸಿರಿ ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ದರೂ ಪುನೀತ್ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ. ಹೀಗಿದ್ದಾಗ ಪುನೀತ್ ಅವರ ಸಹೋದರರಾದ ನಟ ಶಿವರಾಜ್‌ಕುಮಾರ್ ಮನಸ್ಸು ತುಂಬಿ ಮಾತನಾಡಿದ್ದಾರೆ.
ಅದು 2021ರ ಅಕ್ಟೋಬರ್ 29, ಯಾರೂ ಕನಸು & ಮನಸ್ಸಿನಲ್ಲೂ ಊಹೆ ಮಾಡಲಾಗದ ಘಟನೆ ನಡೆದು ಹೋಗಿತ್ತು. ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಅಕ್ಷರಶಃ ದೇವರಾಗಿ, ಸಮಾಜ ಸೇವೆ ಮೂಲಕ ಹೆಸರು ಮಾಡುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಈ ನಮ್ಮ ಕನ್ನಡ ನಾಡನ್ನು ಬಿಟ್ಟು ಹೋಗಿದ್ದರು. ಅಂದಿಗೆ ಇಡೀ ಭಾರತ ಅಪ್ಪು ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿತ್ತು. ಹೀಗೆ ಅಪ್ಪು ನಮ್ಮನ್ನ ಬಿಟ್ಟು ಹೋಗಿ ಈಗಾಗಲೇ 2 ವರ್ಷ ಕಳೆದು ಹೋಗಿದೆ. ಹೀಗಿದ್ದರೂ ಅಪ್ಪು ಬಂದೇ ಬರ್ತಾರೆ ಅಂತಾ ಅವರ ಅಣ್ಣ, ನಟ ಶಿವರಾಜ್‌ಕುಮಾರ್ ಇಂದಿಗೂ ಕಾಯುತ್ತಿದ್ದಾರಂತೆ!

ನನ್ನ ತಮ್ಮ ಎಲ್ಲಿಗೂ ಹೋಗಿಲ್ಲ..
ಹೌದು ನಟ ಶಿವರಾಜ್‌ಕುಮಾರ್ ಬಹಿರಂಗವಾಗಿ ಕಣ್ಣೀರು ಹಾಕಿದ್ದು ಕನ್ನಡಿಗರು ನೋಡೇ ಇರಲಿಲ್ಲ. ಆದ್ರೆ ಅವರ ತಮ್ಮ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಶಿವಣ್ಣ ಅವರಿಗೆ ಅಪಾರ ನೋವು ಕೊಟ್ಟಿತ್ತು. ಅಪ್ಪು ಅವರು ಈ ಲೋಕ ಬಿಟ್ಟು ಹೋದ ದಿನದಿಂದ ಹಿಡಿದು, ಇಂದಿನವರೆಗೂ ನಟ ಶಿವಣ್ಣ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವ್ರು, ಪದೇ ಪದೇ ಯಾಕೆ ಅಪ್ಪು ಅವರ ಸಮಾಧಿಯ ಬಳಿ ಹೋಗೋದಿಲ್ಲ? ಅನ್ನೋ ಪ್ರಶ್ನೆಗೆ ಕೂಡ ಶಿವಣ್ಣ ಉತ್ತರ ನೀಡಿದ್ದಾರೆ.
'ಅಪ್ಪು' ಅಭಿಮಾನಿಗಳಿಗೆ ಮಾದರಿ ಆದರು
ನಟ ಶಿವಣ್ಣ ಅವರ 2ನೇ ತಮಿಳು ಸಿನ್ಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್‌ಗೆ ಸಿದ್ಧವಾಗಿ ನಿಂತಿದೆ. ಹೀಗಿದ್ದಾಗ ತಮಿಳು ಖಾಸಗಿ ಸಂದರ್ಶನ ವೇಳೆ ನಟ ಶಿವಣ್ಣ, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶಕರು ಪುನೀತ್ ಅವರ ಹೆಸರು ಹೇಳುತ್ತಿದ್ದಂತೆ, ನಟ ಶಿವರಾಜ್‌ಕುಮಾರ್ ಭಾವುಕರಾದರು. ಹಾಗೇ ಅಪ್ಪು ಅವರ ಬಗ್ಗೆ ಮಾತನಾಡಿದ ನಟ ಶಿವಣ್ಣ, ಪುನೀತ್ ಅವರ ಟ್ಯಾಲೆಂಟ್‌ಗೆ ಯಾರನ್ನೂ ಕಂಪೇರ್ ಮಾಡಲು ಆಗಲ್ಲ. ಅಪ್ಪು ಸಣ್ಣ ಹುಡುಗನಿದ್ದಾಗಲೇ ಸೂಪರ್ ಸ್ಟಾರ್. ಇಷ್ಟೆಲ್ಲಾ ಇದ್ದರೂ ಅಪ್ಪು ಅಭಿಮಾನಿಗಳಿಗೆ, ಹಾಗೂ ಈ ಸಮಾಜಕ್ಕೆ ಮಾದರಿ ಅದರು ಎಂದಿದ್ದಾರೆ ಶಿವರಾಜ್‌ಕುಮಾರ್.
ಅಪ್ಪು ನಗು ಪ್ರಪಂಚಕ್ಕೆ ಇಷ್ಟ
ಇನ್ನು ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ಅವರ ನಗುವಿನ ವಿಚಾರ ಪ್ರಸ್ತಾಪಿಸಿ, ಅಪ್ಪು ಸ್ಮೈಲ್ ಬಗ್ಗೆ ನಟ ಶಿವಣ್ಣ ಮಾತನಾಡಿದರು. ಅಪ್ಪು ಅವರ ನಗು ಎಲ್ಲಾ ಕಡೆಗೂ ಹಬ್ಬಿದೆ. ನಾನು ಹೊರ ದೇಶಕ್ಕೆ ಹೋದಾಗಲೂ ಅದರ ಬಗ್ಗೆ ಮಾತನಾಡುತ್ತಾರೆ. ಏನಿದು ಇಂತಹ ಅದ್ಭುತ ನಗು? ಎಂದು ನನ್ನ ಪ್ರಶ್ನೆ ಮಾಡುತ್ತಾರೆ. ಹೀಗಿದ್ದರೂ ಅಪ್ಪು ಎಲ್ಲಿಗೂ ಹೋಗಿಲ್ಲ, ಅವರು ಬಂದೇ ಬರ್ತಾರೆ. ಹೀಗಾಗಿ ನಾನು ಕೂಡ ಕಾಯ್ತಾ ಇದ್ದೀನಿ. ಅವರು ಇಂದಲ್ಲ ನಾಳೆ ಬಂದೇ ಬರ್ತಾರೆ ಅಂತಾ ಕಾಯ್ತಾ ಇರ್ತೀನಿ. ಯಾಕಂದ್ರೆ ಕಾಯುವುದರಲ್ಲಿ ಇರುವ ಖುಷಿ ಬೇರೆಯದರಲ್ಲಿ ಸಿಗಲ್ಲ ಎಂದಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್.

ಒಟ್ನಲ್ಲಿ ಪವರ್ ಸ್ಟಾರ್ ಪುನೀತ್ ಅವರು ಇಂದು ನಮ್ಮ ಜೊತೆಗೆ ಇಲ್ಲ, ಆದರೂ ಅವರು ನಮ್ಮ ಎದೆಯಲ್ಲಿ ಅಜರಾಮರ ಅಂತಿದ್ದಾರೆ ಅವರ ಫ್ಯಾನ್ಸ್. ಅದರಲ್ಲೂ ಇಡೀ ಭಾರತಕ್ಕೆ ಮತ್ತು ಭಾರತೀಯ ಸಮಾಜಕ್ಕೆ ಅಪ್ಪು ಅವರು ಮಾದರಿ ಆಗಿದ್ದಾರೆ. ಹಾಗೇ ಅವರ ಸಮಾಜ ಸೇವೆ ಮುಂದಿನ ಪೀಳಿಗೆಗೆ ಕೂಡ ಮಾದರಿ ಆಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ಅಬ್ಬರ
ಮತ್ತೊಂದು ಕಡೆ ಶಿವಣ್ಣ ಅವರ 2ನೇ ತಮಿಳು ಸಿನಿಮಾ ಅಬ್ಬರ ಶುರುವಾಗಿದೆ. ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿದೆ. ಇನ್ನು ಈ ಸಿನಿಮಾಗೆ ಅರುಣ್ ಮಾಥೇಶ್ವರನ್ ಅವರು ಡೈರೆಕ್ಷನ್ ಮಾಡಿದ್ದಾರೆ. ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದೆ. ಈ ಹಿಂದೆ ಟ್ರೇಲರ್ ಬಗ್ಗೆ ಕೂಡ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಿನಿಮಾ ನೋಡಿ ಹೊರಗಡೆ ಬಂದ ಅಭಿಮಾನಿಗಳು ಫಿದಾ ಆಗಿ ಮಾತನಾಡಿದ್ದಾರೆ.












Click it and Unblock the Notifications