ಹಿರಿಯ ಕಲಾವಿದರಲ್ಲಿದ್ದ ಒಗ್ಗಟ್ಟು ಈಗಿಲ್ಲ: ಕನ್ನಡ ಚಿತ್ರರಂಗದಲ್ಲಿ ಏನಾಗುತ್ತಿದೆ..?
ಬೆಂಗಳೂರು, ಆಗಸ್ಟ್ 12: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದೆ. ಯಾವುದೇ ರೀತಿಯ ಸಿನಿಮಾಗಳನ್ನು ಮಾಡಿದರೂ ಚಿತ್ರತಂಡ ಸಹ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದಾರೆ. ಈ ಸಂಕಷ್ಟದಿಂದ ಕನ್ನಡ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ನಡೆಸಲು ಸಿದ್ಧತೆ ನಡೆಸುತ್ತಿದೆ.
ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಿರಿಯರಾದ ಡಾ. ರಾಜ್ ಕುಮಾರ್ ಅವರು, ಪಾರ್ವತಮ್ಮ ರಾಜ್ ಕುಮಾರ್ ಅವರು, ಅಂಬರೀಷ್ ಅವರು, ವಿಷ್ಣು ಸರ್, ಶಂಕರ್ ನಾಗ್ ಅವರು ಹಾಗೇ ಎಲ್ಲರೂ ಈ ಕನ್ನಡ ಚಿತ್ರರಂಗವನ್ನು ಕಟ್ಟಲು ಎಷ್ಟು ಕಷ್ಟ ಪಟ್ಟರು ಅಂತಾ ಶೇಕಡಾ ತೊಂಬತ್ತರಷ್ಟು ಜನ ಕೇಳಿರಬಹುದು. ಆದರೆ ನಾನು ಹಿರಿಯರು ಒಂದಿಷ್ಟು ಜನ ಕಣ್ಣಾರೆ ನೋಡಿದ್ದೇವೆ. ಅವತ್ತು ಹೋರಾಟ ಮಾಡಿದವರು ಯಾರು ಇಲ್ಲ. ಚಿತ್ರರಂಗ ಉಳಿಸಿಕೊಳ್ಳಲು ಅವರು ಮಾಡಿದ ಹೋರಾಟ ನೆನೆಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ ಎಂದರು.

ಒಂದೊಂದು ಕನ್ನಡ ಚಿತ್ರ ಇಲ್ಲಿ ಬಿಡುಗಡೆಯಾಗಬೇಕು ಅಂದರೆ ಅವರು ಪಟ್ಟಿರುವ ಕಷ್ಟವನ್ನು ಕೇಳಿದ್ದೇವೆ. ಇವರಷ್ಟೇ ಅಲ್ಲ ಎಷ್ಟೋ ಕನ್ನಡ ಸಂಘ ಸಂಸ್ಥೆಗಳು ಜೊತೆಗೆ ನಿಂತು ಚಿತ್ರರಂಗವನ್ನು ಬೆಳೆಸಿದ್ದಾರೆ. ಇವತ್ತು ನಾನು ಒಬ್ಬ ನಿರ್ಮಾಪಕನಾಗಿ ಚಿತ್ರರಂಗವನ್ನು ಬೆಳೆಸಿಕೊಂಡು ಬಂದು ಈ ಸಂದರ್ಭದಲ್ಲಿ ಅದು ಪಾತಾಳಕ್ಕೆ ಹೋಗುತ್ತಿದೆ ಅಂತಾ ಗೊತ್ತಾದಾಗ ತುಂಬಾ ನೋವಾಗುತ್ತದೆ ಎಂದು ಹೇಳಿದರು.
ಸತ್ಯ ಹೇಳಬೇಕು ಅಂದರೆ ಈ ಹಿಂದೆ ಹಿರಿಯ ಕಲಾವಿದರಲ್ಲಿ ಇದ್ದ ಒಗ್ಗಟ್ಟು ಈಗಿಲ್ಲ ಎನ್ನುವುದನ್ನು ಓಪನ್ ಆಗಿ ಹೇಳುತ್ತೇನೆ. ಈಗ ಅವರವರು ಅವರ ಕೆಲಸ ನೋಡಿಕೊಂಡು ಹೋಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ದೇವರ ಮೊರೆ ಹೋಗಿದ್ದೇವೆ. ಫಿಲ್ಮಂ ಛೇಂಬರ್‌ನಲ್ಲಿ ನೂರಾರು ಮೀಟಿಂಗ್ ಮಾಡಿದ್ದೇವೆ. ಏನೂ ಪ್ರಯೋಜನ ಆಗುವುದಿಲ್ಲ. ಯಾಕೆಂದರೆ ಇದು ಯಾರ ಕಂಟ್ರೋಲ್‌ನಲ್ಲಿಯೂ ಇಲ್ಲ. ಏನೂ ಮಾಡಲು ಆಗುವುದಿಲ್ಲ. ಹೀಗಾಗಿ ದೇವರ ಮೊರೆ ಹೋಗಿ ಒಳ್ಳೆ ದಿನ ಅಂತಾ ಪೂಜೆ ಹೋಮ ಮಾಡುತ್ತಿದ್ದೇವೆ ಎಂದು ಹೇಳಿದರು.
ಬರೀ ಕಲಾವಿದರಲ್ಲಿ ಒಗ್ಗಟ್ಟಿಲ್ಲ ಅಂತಾ ನಾನು ಮಾತನಾಡುತ್ತಿಲ್ಲ. ಆದರೆ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅಂತಾ ಹೇಳುತ್ತಿದ್ದೇನೆ. ಕಲಾವಿದರು ನಾಲ್ಕು ಜನ ಯಾವಾಗ ಬೇಕಾದರೂ ಬರುತ್ತಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಅಂತಾ ನಮಗೆ ಗೊತ್ತಿದೆ. ಚಿತ್ರರಂಗ ಬಳಸಿಕೊಳ್ಳಬೇಕು ಅವರನ್ನು. ಚಿತ್ರರಂಗಕ್ಕಿಂತ ದೊಡ್ಡವರು ಇಲ್ಲಿ ಯಾರೂ ಇಲ್ಲ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದರು.












Click it and Unblock the Notifications