ವಿಷ್ಣುವರ್ಧನ್ ಅಭಿಮಾನಿಗಳ ದೊಡ್ಡ ಕನಸು: ಸಿಎಂ ಅಂಗಳದಲ್ಲಿ ಚರ್ಚೆಯಾಗಿದ್ದೇನು?
ನಟ ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಬಹುವರ್ಷಗಳ ಕನಸು ನನಸಾಗುವ ದಿನ ಹತ್ತಿರದಲ್ಲಿದೆ. ವಿಷ್ಣುದಾದಾ ಫ್ಯಾನ್ಸ್‌ಗಾಗಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮಹತ್ವದ ಚರ್ಚೆಯೊಂದು ನಡೆದಿದ್ದು, ಶೀಘ್ರವೇ ಅಭಿಮಾನಿಗಳ ಕನಸು ಈಡೇರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ವಿಷ್ಣುವರ್ಧನ್ ಅವರ ಸ್ಮಾರಕದ ಜಾಗವನ್ನು ಅರಣ್ಯ ಇಲಾಖೆ ಮತ್ತೆ ವಾಪಸ್ ಪಡೆಯಲು ಮುಂದಾಗಿರುವುದು ಸುದ್ದಿಯಾಗಿತ್ತು. ಇದರ ನಡುವೆ ವಿಷ್ಣು ಅಭಿಮಾನಿಗಳ ಮತ್ತೊಂದು ಆಸೆ ಈಡೇರುವ ಸೂಚನೆ ಸಿಕ್ಕಿದ್ದು, ಸಂತಸ ದುಪ್ಪಟ್ಟಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಹಾಗೂ ಮಾಳವಿಕ ಅವಿನಾಶ್ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ನಟ ವಿಷ್ಣುವರ್ಧನ್ ಅವರ ಪರವಾಗಿ ಮಹತ್ವದ ವಿಚಾರವೊಂದನ್ನು ಚರ್ಚಿಸಿದ್ದಾರೆ. ಹಲವು ವರ್ಷಗಳಿಂದ ಈಡೇರದ ಈ ಬೇಡಿಕೆ ಈಗಲಾದರೂ ಕಾರ್ಯರೂಪಕ್ಕೆ ಬರಲಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಅದೇನು ಎಂಬ ಮಾಹಿತಿ ಇಲ್ಲಿದೆ.

ನಟ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಆದ ಮೇಲೂ ವಿವಾದಗಳು ಸೃಷ್ಟಿಯಾಗಿದ್ದವು. ಅವರ ಸ್ಮಾರಕ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋದಲ್ಲಿ ಸಾಧ್ಯವಾಗಲಿಲ್ಲ. ಈ ಸಂಬಂಧ ಹಲವು ವರ್ಷಗಳ ಕಾಲ ಹೋರಾಟ ನಡೆಸಿದರೂ ಫಲ ಸಿಗಲಿಲ್ಲ. ನಂತರ ವಿಷ್ಣು ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಿದ್ದರು. ಆದರೆ ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಜಾಗವನ್ನೇ ಮೂಲ ಸಮಾಧಿ ಸ್ಥಳ ಎಂದು ಭಾವಿಸಿದ್ದರು. ಇತ್ತೀಚೆಗೆ ಅಲ್ಲಿದ್ದ ಸ್ಮಾರಕ ತೆರವು ಮಾಡಲಾಗಿತ್ತು.
ಇದರಿಂದ ವಿಷ್ಣು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಸ್ಮಾರಕ ಮತ್ತೆ ಅದೇ ಜಾಗದಲ್ಲಿ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದೇ ಹೊತ್ತಿಗೆ ಇದು ಮತ್ತೊಂದು ತಿರುವು ಪಡೆದುಕೊಂಡಿದ್ದು, ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಮತ್ತೆ ಅದನ್ನು ವಾಪಸ್ ಪಡೆಯುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು. ಹಾಗಾಗಿ ಆ ಜಾಗದಲ್ಲಿ ಮತ್ತೆ ವಿಷ್ಣು ಸ್ಮಾರಕ ತಲೆ ಎತ್ತುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ
ಇತ್ತ ವಿಷ್ಣು ಅಭಿಮಾನಿಗಳ ಮತ್ತೊಂದು ಬೇಡಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಂಗಳದಲ್ಲಿ ಚರ್ಚೆಯಾಗಿದೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಎಂದು ಫ್ಯಾನ್ಸ್ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಈಡೇರಿರಲಿಲ್ಲ. ಇದೀಗ ಸ್ಯಾಂಡಲ್‌ವುಡ್ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ರಸ್ತೆಗೆ ನಾಮಕರಣ ಮಾಡುವಂತೆ ಸಹ ಮನವಿ ಮಾಡಿದ್ದಾರೆ. ಈ ಎರಡೂ ಬೇಡಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಶೀಘ್ರದಲ್ಲೇ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವ ಸಾಧ್ಯತೆ ಇದೆ.












Click it and Unblock the Notifications