Rakshak Bullet :ಅಪ್ಪನ ಸಮಾಧಿ ತೊಳೆದು ಭಾವನಾತ್ಮಕ ವಿಡಿಯೋ ಹಂಚಿಕೊಂಡ ರಕ್ಷಕ್ ಬುಲೆಟ್
ಬೆಂಗಳೂರು, ಜುಲೈ. 01: ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಯಾವಾಗಲೂ ಸುದ್ದಿಯಲ್ಲಿಯೇ ಇರುತ್ತಾರೆ. ಟ್ರೋಲ್, ಹೇಳಿಕೆಗಳ ಜೊತೆ ಜೊತೆಗೆ ತಮ್ಮ ತಂದೆಯ ವಿಷಯಕ್ಕೂ ಸಕತ್ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ತನ್ನ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದರು. ಹಲವು ಬಾರಿ ಟ್ರೋಲ್ ಆಗುತ್ತಿದ್ದ ಅವರು, ಬಿಗ್ ಬಾಸ್‌ಗೆ ಬಂದು ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ಮಾಡಿದ್ದರು. ಈಗಲೂ ಅವರನ್ನು ಆಡಿಕೊಳ್ಳುವವರ ನಡುವೆ ಇಷ್ಟ ಪಡುವವರು ಕೂಡ ಹೆಚ್ಚು ಜನರಿದ್ದಾರೆ. ಭಾವನಾತ್ಮಕ ವಿಡಿಯೋದಲ್ಲಿ ರಕ್ಷಕ್ ತನ್ನ ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ.

ರಕ್ಷಕ್ ಬುಲೆಟ್ ಭಾವನಾತ್ಮಕ ವಿಡಿಯೋ
ಬಿಲ್ಡಪ್ ಸ್ಟಾರ್ ಎಂದು ಕರೆಸಿಕೊಳ್ಳುವ ರಕ್ಷಕ್ ಬುಲೆಟ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ಅಚ್ಚುಕಟ್ಟಾಗಿ ತೊಳೆದಿದ್ದಾರೆ. ಅದಕ್ಕೆ ಭಾವನಾತ್ಮಕ ವಾಯ್ಸ್ ಓವರ್ ಕೊಟ್ಟಿದ್ದು, ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ವಿಡಿಯೋದಲ್ಲಿ ವಾಯ್ಸ್ ಓವರ್ ಮೂಲಕ ಮಾತನಾಡಿರುವ ರಕ್ಷಕ್ ಬುಲೆಟ್, "ಈ ಜಾಗ ನನಗೆ ಒಂಥರ ಸ್ಪೆಷಲ್... ಯಾಕಂದರೆ ನನಗೆ ಎಷ್ಟೇ ಖುಷಿ , ಬೇಜಾರು ಆಗ್ಲಿ ಇಲ್ಲಿಗೆ ಬಂದು 5 ನಿಮಿಷ ಕೂತು ಇವರ ಬಳಿ ನನ್ನ ಮನಸಲ್ಲಿ ಇರೋದು ಹೇಳ್ಕೊಂಡಾಗ ತುಂಬ ಖುಷಿ ಆಗುತ್ತೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ" ಎಂದಿದ್ದಾರೆ.
ಮುಂದುವರಿದು "ಎಲ್ಲರೂ ಕೇಳ್ತಾರೆ ರಕ್ಷಕ್ ಹೆಂಗೆ 3 ವರ್ಷದಲ್ಲಿ ಬೆಳೆದುಬಿಟ್ಟ ಅಂತ. ಈ ಮೂರು ವರ್ಷದ ಹಿಂದೆ ಶ್ರಮ ಇದೆ. ನಮ್ಮ ಅಜ್ಜಿ, ತಂದೆನಾ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ" ಎಂದು ಹೇಳಿದ್ದಾರೆ.
ರಕ್ಷಕ್ ಬುಲೆಟ್ ವಿಡಿಯೋಗೆ ಭಾರಿ ಮೆಚ್ಚುಗೆ
ರಕ್ಷಕ್ ಬುಲೆಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಪಾಸಿಟಿವ್ ರೆಸ್ಪಾನ್ಸ್ ಪಡೆಯುತ್ತಿದೆ. ವಿಡಿಯೋ ಹಂಚಿಕೊಂಡ ಒಂದು ದಿನದಲ್ಲಿಯೇ 3.5 ಲಕ್ಷ ವೀವ್ಸ್ ಸಿಕ್ಕಿದೆ. ಏಳುನೂರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. "Love you Ajji Appa" ಎಂದು ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.
ಹಲವು ಮಂದಿ ವಿಡಿಯೋಗೆ ಕಾಮೆಂಟ್ ಮಾಡಿದ್ದು, "ನೀನು ಯಾರಿಗೆ ಪರಿಚಯ ಇಲ್ಲ ಗುರು ಎಲ್ಲರಿಗೂ ಪರಿಚಯ ಇದ್ದೀಯ ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ. ಆ ದೇವರು ನಿನಗೆ ಒಳ್ಳೆಯದು ಮಾಡಲಿ ಕನ್ನಡ ಚಿತ್ರರಂಗಲ್ಲಿ ನೀವು ಸ್ಟಾರ್ ಆಗಿರು....". "ಜೀವನದಲ್ಲಿ ನೀನು ಮುಂದೆ ಬರ್ತೀಯ ಬ್ರೋ.. ನಿಮ್ ತಂದೆ ತಾಯಿ ಆಶೀರ್ವಾದ ನಿಮ್ ಮೇಲೆ ಇದ್ದೆ ಇರುತ್ತೆ.. ನಿನ್ ಕ್ಯೆಲಾದಷ್ಟು ಒಳ್ಳೆ ಕೆಲ್ಸ ಮಾಡು, ಬಡವರ ಕಷ್ಟಕ್ಕೆ ನೆರವಾಗು ಬ್ರೋ.. ನಿನ್ನನ್ನ ದೇವ್ರು ಚೆನ್ನಾಗಿ ಇಟ್ಟಿರಲಿ..." ಎಂದು ಜನ ಹರಸುತ್ತಿದ್ದಾರೆ.












Click it and Unblock the Notifications