K.Shivaram: ಅಂತಿಮ ದರ್ಶನ ಪಡೆಯಲು ಬಂದ ಪ್ರಿಯಾಂಕ್ ಖರ್ಗೆ ವಿರುದ್ಧ ಕೆ.ಶಿವರಾಮ್ ಪತ್ನಿ ಗರಂ
ಬೆಂಗಳೂರು, ಮಾರ್ಚ್ 01: ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ನಿನ್ನೆ ವಿಧಿವಶರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದು ಮುಂಜಾನೆಯಿಂದಲೇ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕೆ.ಶಿವರಾಮ್ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದು, ಕೆ.ಶಿವರಾಮ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಕೆ.ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಕೆ.ಶಿವರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿದ್ದರು. ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಕೆ.ಶಿವರಾಂ ಪತ್ನಿ ವಾಣಿ, ಪಾರ್ಥಿವ ಶರೀರದ ದರ್ಶನ ಪಡೆಯುವ ರೈಟ್ಸ್ ನಿಮಗೆ ಇಲ್ಲ.. ಅವರು ಯಾಕೆ ಬಂದರು? ದಯವಿಟ್ಟು ಅವರನ್ನು ಕಳುಹಿಸಿ ಎಂದು ಹೇಳಿದ್ದು, ದುಃಖದ ನಡುವೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆ.ಶಿವರಾಮ್ ಅವರ ಪತ್ನಿ ಯಾಕೆ ಈ ರೀತಿ ಹೇಳಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ನಟ ಶಿವರಾಮ್ ಬೆಂಬಲಿಗರ ಆಕ್ರೋಶ
ಇನ್ನು ಸರ್ಕಾರ ಕೆ.ಶಿವರಾಮ್ ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಬೇಕು ಎಂದು ನಟ ಶಿವರಾಮ್ ಬೆಂಬಲಿಗರು ಆಗ್ರಹಿಸಿದ್ದಾರೆ. ಕೆ.ಶಿವರಾಮ್ ಒಬ್ಬ ಮಹಾನ್ ವ್ಯಕ್ತಿ. ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಸರ್ಕಾರ ಜಾಗ ಕೊಟ್ಟಿಲ್ಲ ಅಂದರೆ ವಿಧಾನಸೌಧದ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಛಲವಾದಿ ಮಹಾಸಭಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಕಾರ್ಡಿಯಕ್ ಅರೆಸ್ಟ್ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕಳೆದ 20 ದಿನಗಳಿಂದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನದಿಂದ ದಿನಕ್ಕೆ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿತ್ತು. ಶಿವರಾಮ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.












Click it and Unblock the Notifications