ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ: ಸಂದೇಶ ಕಳುಹಿಸಿದ ವ್ಯಕ್ತಿ ಪತ್ತೆ
ಮುಂಬೈ ಏಪ್ರಿಲ್ 16: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಬಂದ 24 ಗಂಟೆಯಲ್ಲಿ ಮುಂಬೈ ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸಿ ಆರೋಪಿಯನ್ನು ಪತ್ತೆಮಾಡಿದ್ದಾರೆ. ವಿಚಾರಣೆ ಬಳಿಕ ಈ ವ್ಯಕ್ತಿ ಯಾರು? ಯಾಕಾಗಿ ಹೀಗೆ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ.
25 ವರ್ಷದ ಮಯಾಂಕ್ ಪಾಂಡ್ಯ ಬೆದರಿಕೆ ಸಂದೇಶ ಕಳುಹಿಸಿದ ಆರೋಪಿ. ಈತ ವಾಟ್ಸಾಪ್ ಸಂದೇಶದ ಮೂಲಕ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಕಳುಹಿಸಿದ್ದ. ಮಯಾಂಕ್ ಪಾಂಡ್ಯ ತನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ನ ವಡೋದರಾದ ಮಯಾಂಕ್, ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೀಡಿದ ಬೆದರಿಕೆ ಶೈಲಿಯನ್ನು ನಕಲು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಭಾನುವಾರ ಬೆದರಿಕೆ ಸಂದೇಶ ಬಂದಿತ್ತು. ಸಂದೇಶ ಕಳುಹಿಸಿದವರು ಸಲ್ಮಾನ್ ಖಾನ್ ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಮತ್ತು ನಿವಾಸಕ್ಕೆ ನುಗ್ಗಿ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಮುಂಬೈನ ವರ್ಲಿ ಪೊಲೀಸರು ನಂತರ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351(2)(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಜೊತೆಗೆ ಬಾಂದ್ರಾ ಪ್ರದೇಶದ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಬಿಗಿಗೊಳಿಸಿದ್ದರು.

ತನಿಖೆಯ ನಂತರ ವಡೋದರಾದ ವಾಘೋಡಿಯಾ ತಾಲೂಕಿನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ತಿಳಿದುಬಂದಿದೆ. ಆಗ ವಾಘೋಡಿಯಾ ಪೊಲೀಸರೊಂದಿಗೆ ಮುಂಬೈ ಪೊಲೀಸರ ತಂಡವು ಸೋಮವಾರ ವಾಘೋಡಿಯಾದ ಹಳ್ಳಿಯಲ್ಲಿರುವ ಶಂಕಿತನ ಮನೆಗೆ ಹೋಗಿತ್ತು.
ಆಗ ಸಂದೇಶ ಕಳುಹಿಸಿದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ವಿಚಾರಿಸಿದಾಗ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಿಸಲು ಹೀಗೆ ಮಾಡಿದೆ ಎಂದಿದ್ದಾನೆ. ಬಳಿಕೆ ಮುಂಬೈ ಪೊಲೀಸರು ಆತನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ವಾಪಾಸ್ಸಾಗಿದ್ದಾರೆ. ನೋಟಿಸ್ ಪ್ರಕಾರ, ಈ ವ್ಯಕ್ತಿ ಅಗತ್ಯ ಬಿದ್ದಾಗಲೆಲ್ಲಾ ತನಿಖೆಗಾಗಿ ಮುಂಬೈ ಪೊಲೀಸರ ಮುಂದೆ ಹಾಜರಾಗಬೇಕು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಖಾನ್ ಅವರ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಅಲ್ಲದೆ ಸಲ್ಮಾನ್ ಖಾನ್ ಈ ಹಿಂದೆ ಸಾಕಷ್ಟು ಬಾರಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಗಳನ್ನು ಎದುರಿಸಿದ್ದಾರೆ.
ಸಲ್ಮಾನ್ ಖಾನ್ ಕೃಷ್ಣಮೃಗ ಹತ್ಯೆ ಆರೋಪದ ಮೇಲೆ ಬಿಷ್ಣೋಯ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 1998ರಲ್ಲಿ ಕೃಷ್ಣಮೃಗ ಮೇಲೆ ಗುಂಡಿನ ದಾಳಿ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಶಿಕ್ಷೆಗೊಳಗಾದರು. ಈ ಘಟನೆಯ ಬಳಿಕೆ ನಟನಿಗೆ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಬಿಷ್ಣೋಯ್ ಸಮುದಾಯವು ಕೃಷ್ಣಮೃಗಗಳನ್ನು ಪವಿತ್ರವೆಂದು ಪರಿಗಣಿಸುವುದರಿಂದ ಈ ದ್ವೇಷವು ಕೃಷ್ಣಮೃಗ ಗುಂಡಿನ ದಾಳಿ ಪ್ರಕರಣದಿಂದ ಹುಟ್ಟಿಕೊಂಡಿದೆ.
ಜೈಲಿನಲ್ಲಿರುವ ಈ ಗ್ಯಾಂಗ್‌ಸ್ಟರ್ ನಟನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದು, ಈ ಹಿಂದೆ ಸಲ್ಮಾನ್ ಖಾನ್‌ಗೆ ಆತ ಹಲವಾರು ಬೆದರಿಕೆಗಳನ್ನು ಹಾಕಿದ್ದಾನೆ. ಬಾಲಿವುಡ್ ತಾರೆಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 18 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ಬಿಷ್ಣೋಯ್ ಸಮುದಾಯದ ಬೆದರಿಕೆಗಳ ನಂತರ ಮುಂಬೈ ಪೊಲೀಸರು ಅವರಿಗೆ ವೈ-ಪ್ಲಸ್ ಭದ್ರತೆಯನ್ನು ಒದಗಿಸಿದ್ದಾರೆ.












Click it and Unblock the Notifications