Kantara-1: ಕನ್ನಡಿಗರು ಗರ್ವ ಪಡುವ ಕಾಲ: ರಿಷಬ್ ಸಿನಿಮಾ ಕೊಂಡಾಡಿದ ನಾರಾಯಣಗೌಡ
Kantara Chapter 1: ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್-1 ಸಿನಿಮಾ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಹೊಸ ಇತಿಹಾಸವನ್ನು ನಿರ್ಮಿಸುವುದನ್ನು ಕೇಳಿ ಭಾವಪರವಶನಾಗಿದ್ದೇನೆ. ಕನ್ನಡದ ಸಿನಿಮಾ ಒಂದು ಜಗತ್ತಿನ ಮೂವತ್ತು ರಾಷ್ಟ್ರಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶಿತವಾಗುತ್ತಿದೆ ಎಂದರೆ ಮೈರೋಮಾಂಚನವಾಗುತ್ತದೆ. ಒಂದೇ ದಿನದಲ್ಲಿ ಅದು ಮಾಡಿದ ದಾಖಲೆಗಳನ್ನು ಗಮನಿಸಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನದಿಂದ ಗರ್ವ ಪಡುವ ಕಾಲ ಎಂದು ಕೊಂಡಾಡಿದ್ದಾರೆ.
ಮೂರು ವರ್ಷಗಳ ಕೆಳಗೆ ಕಾಂತಾರ ಮೊದಲ ಭಾಗ ಬಿಡುಗಡೆಯಾಗಿದ್ದಾಗ ಅದರ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಕನ್ನಡದಲ್ಲಿ ಮಾಡಿದ ಸಿನಿಮಾ ಎಲ್ಲ ಗಡಿಗಳನ್ನು ದಾಟಿ ದೇಶ ವಿದೇಶವನ್ನು ತಲುಪಿತು. ಅತ್ಯುತ್ತಮ ಸಿನಿಮಾ ಎಂಬ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು. ರಿಷಬ್ ಶೆಟ್ಟಿಯವರಿಗೆ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತು. ಕಾಂತಾರ ಚಾಪ್ಟರ್-1 ಬಗ್ಗೆ ನಿರೀಕ್ಷೆಗಳು ಸಾಕಷ್ಟು ಇದ್ದವು. ಆ ನಿರೀಕ್ಷೆಗಳನ್ನು ಮೀರಿ ಅದು ಯಶಸ್ವಿಯಾಗಿದೆ. ಕಾಂತಾರ ಚಾಪ್ಟರ್-1 ಇಡೀ ದೇಶದ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯಶ್, ನೀಲ್, ರಿಷಬ್ ಕನಸಿಗೆ ನೀರೆರೆದ ಹೊಂಬಾಳೆ
ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಮಹಾಸಾಹಸಿ. ಅವರನ್ನು ನಾನು ಬಹಳ ಹಿಂದಿನಿಂದಲೂ ಬಲ್ಲೆ. ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಕಾಲದಿಂದಲೂ ಅವರು ನಿಗರ್ವಿ. ಯಶಸ್ಸನ್ನು ಯಾವತ್ತೂ ತಲೆಗೆ ಹಚ್ಚಿಕೊಂಡವರಲ್ಲ. ಕೆಜಿಎಫ್ ಸಿನಿಮಾದ ಮೂಲಕ ಅವರು ಕನ್ನಡ ಚಲನಚಿತ್ರ ರಂಗದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿದರು. ಇದೀಗ ಕಾಂತಾರದ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿಯಂಥವರ ಕನಸುಗಳಿಗೆ ನೀರೆರೆದು, ಅವರುಗಳನ್ನು ನಂಬಿ ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿದ್ದು ಅವರ ಮಹಾಸಾಧನೆ ಎಂದಿದ್ದಾರೆ.
ಇಂದು ಹೊಂಬಾಳೆ ಸಂಸ್ಥೆ ಜಗತ್ತಿನ ಅತಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವುದು ಅವರ ಈ ಧೀಶಕ್ತಿ ಮತ್ತು ಸಾಹಸ ಮನೋಭಾವದಿಂದ. ಕನ್ನಡ ಚಿತ್ರರಂಗದಲ್ಲಿ ವಿಜಯ್ ಕಿರಗಂದೂರು ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿ ಆಗಿ ಉಳಿಯುವುದಂತೂ ಖಚಿತ. ಕಾಂತಾರ ಚಾಪ್ಟರ್-1 ಸಿನಿಮಾವನ್ನು ನಾಳೆ ನಾನು ನೋಡುತ್ತಿದ್ದೇನೆ. ರಿಷಬ್ ಶೆಟ್ಟಿಯವರ ಅಭಿನಯ, ನಿರ್ದೇಶನ ಮತ್ತು ಇಡೀ ಚಿತ್ರದ ಕಲಾವಿದರು, ತಂತ್ರಜ್ಞರನ್ನು ದೇಶದ ಎಲ್ಲ ಭಾಷೆಗಳ ಚಿತ್ರರಸಿಕರು ಕೊಂಡಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ಹೆಮ್ಮೆ ಪಡಲು ಇನ್ನೇನು ಬೇಕು. ಇಡೀ ಚಿತ್ರತಂಡಕ್ಕೆ, ಹೊಂಬಾಳೆ ಸಂಸ್ಥೆಗೆ ಅಭಿನಂದನೆಗಳು ಎಂದು ನಾರಾಯಣಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪೈರೆಸಿ ಚಿತ್ರರಂಗಕ್ಕೆ ಅಂಟಿದ ಶಾಪ!
ಕಾಂತಾರ ಚಾಪ್ಟರ್-1 ಸಿನಿಮಾವನ್ನ ಕನ್ನಡ ಪ್ರೇಕ್ಷಕರು ಸಿನಿಮಾ ಮಂದಿರಗಳಲ್ಲೇ ಹೋಗಿ ನೋಡಬೇಕು ಎಂದು ವಿನಂತಿಸುತ್ತೇನೆ. ಚಿತ್ರದ ತುಣುಕುಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪೈರೆಸಿ ಇಡೀ ಚಿತ್ರರಂಗಕ್ಕೆ ಅಂಟಿದ ಶಾಪ. ಹೀಗಾಗಿ ಅದರ ಕುರಿತು ಕಾನೂನು ಪಾಲಕರು ಗಮನ ಹರಿಸಬೇಕು. ಕಾಂತಾರ ಚಾಪ್ಟರ್-1 ಮುಂಬರುವ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನ ಸೃಷ್ಟಿಸಲಿ. ಅದರಿಂದಾಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿ ಲಭಿಸಲಿ. ಇಂತಹ ನೂರು ಸಿನಿಮಾಗಳನ್ನು ಮಾಡುವ ಶಕ್ತಿ ವಿಜಯ್ ಕಿರಗಂದೂರು ಅವರಿಗೆ ಸಿಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications