ಧ್ರುವ ಸರ್ ದೊಡ್ಡವರು..ನನ್ನದೇ ತಪ್ಪು..ದಯವಿಟ್ಟು ಕ್ಷಮೆ ಇರಲಿ: ರೀಲ್ಸ್ ಸ್ಟಾರ್ ಸುಧಾಕರ್ ಗೌಡ
ಬೆಂಗಳೂರು, ಅಕ್ಟೋಬರ್ 18: ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಕುರಿತು ವಿಮರ್ಶೆ ಮಾಡಿ ಧ್ರುವ ಸರ್ಜಾ ಅಭಿಮಾನಿಗಳು ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ರೀಲ್ಸ್ ಸ್ಟಾರ್ ನಟ ಸುಧಾಕರ್ ಗೌಡ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ವಿಡಿಯೋ ಹರಿಬಿಟ್ಟಿರುವ ಸುಧಾಕರ್ ಗೌಡ, ಧ್ರುವಾ ಸರ್ಜಾ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿ ಪ್ರಿಯರಲ್ಲಿ ನೇರವಾಗಿ ಕ್ಷಮೆ ಕೇಳಿದ್ದಾರೆ.
'ನಾನು ಗೊತ್ತಿದ್ದೋ, ಗೊತ್ತಿಲ್ಲದೆನೋ ಒಂದು ರಿವ್ಯೂ ಕೊಟ್ಟಿದ್ದೇನೆ. ನನಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಅದು ಪರಿಣಾಮ ಬೀರುತ್ತದೆ ಅಂತ. ನಾನು ಯಾರದ್ದೇ ಫ್ಯಾನ್ ಆಗಿ. ಯಾರದ್ದೇ ಹೇಟರ್ ಆಗಿ ಆ ವಿಮರ್ಶೆ ಕೊಟ್ಟಿರಲಿಲ್ಲ. ಧ್ರುವ ಸರ್ ಕರ್ನಾಟಕದ ಒಂದು ದೊಡ್ಡ ಮಾಸ್ ಕಟ್ ಔಟ್. ಅವರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿಲ್ವಲ್ಲ ಅಂತಷ್ಟೇ ನನಗೆ ನೋವು ಒತ್ತಡ ತಂದಿದ್ದು. ಉದಯ್ ಮೆಹ್ತಾ ಸರ್ ಪ್ರಡ್ಯೂಸರ್. ಅಷ್ಟೊಂದು ದುಡ್ಡು ಹಾಕಿ ಒಂದೊಳ್ಳೆ ಸಿನಿಮಾ ಬಂದಿಲ್ಲ ಅಲ್ಲಾ ಎನ್ನುವ ಒತ್ತಡ ಬೇಸರದಲ್ಲಿ ನಾನು ಆ ವಿಡಿಯೋ ಮಾಡಿದ್ದು' ಎಂದು ಸುಧಾಕರ್ ಗೌಡ ಒಪ್ಪಿಕೊಂಡಿದ್ದಾರೆ.

'ನಾವು ಯಾರಿಗೂ ನೋವು ಮಾಡಬೇಕು ಅಂತ ಆಗಲಿ, ಯಾರಿಗೋ ನೆಗೆಟಿವ್ ಮಾಡಬೇಕು ಅಂತಾಗಲಿ ಈ ರೀತಿ ಮಾಡಿಲ್ಲ. ಯಾಕಂದರೆ ಇದೇ ಧ್ರುವ ಸರ್‌ದು ಬಹದ್ದೂರು ಸಿನಿಮಾ ನೋಡಿ ಐದು ವರ್ಷ ಕಾಲೇಜ್‌ನಲ್ಲಿ ಓದುವಾಗ ಫೇಸ್‌ಬುಕ್ ಪ್ರೊಫೈಲ್‌ಅನ್ನು ಬಹದ್ದೂರು ಸುಧಾಕರ್ ಅಂತ ಇಟ್ಟುಕೊಂಡಿದ್ದವನು ನಾನು. ಅಷ್ಟು ಸಿನಿಮಾ ಇಷ್ಟ ಆಗಿತ್ತು.
ಅದ್ಧೂರಿಯದ್ದು ಅವಾಗೊಂದು ಟ್ರೆಂಡ್ ಇತ್ತು. ಡೈಲಾಗ್ ಬಂದು ಆಮೇಲೆ ಸಾಂಗ್ ಬರೋದು. ಸೋ ಆ ಪ್ರತಿ ಡೈಲಾಗ್ ನನಗೆ ನೆನಪಿತ್ತು. ಈಗಲೂ ನೆನಪಿದೆ. ಕಟ್ಟೋ ಬಿಲ್ಡಿಂಗ್ ಡೈಲಾಗ್ ಮತ್ತು ಬಾಗಲಲ್ಲಿ ನಿಂತು ಪ್ರೀತಿ ಮಾಡಿದರೆ ಈ ಡೈಲಾಗ್ ಎಲ್ಲಾ ಈಗಲೂ ನೆನಪಿದೆ. ನನ್ನ ಸ್ಕೂಲ್ ಮುಗಿಯೋ ಟೈಮ್‌ನಲ್ಲಿ ಬಂದ ಡೈಲಾಗ್ ಈಗಲೂ ನೆನಪಿದೆ' ಎಂದರು.

'ಅವರ ಕಟ್‌ಔಟ್‌ಗೆ ಆ ತರಹದ ಸಿನಿಮಾ ಬೀಳುತ್ತಿಲ್ಲ ಅನ್ನೋ ನೋವಿನಿಂದ ಆ ವಿಡಿಯೋ ಮಾಡಿದ್ದು ಅಷ್ಟೇ. ಬೇರೆ ಯಾವುದೇ ರೀತಿಯ ಕೆಟ್ಟ ಉದ್ದೇಶ ಇರಲಿಲ್ಲ. ಆದರೆ ಒಂದು ಗಂಟೆಯಲ್ಲಿಯೇ ನಾನು ಡಿಲೀಟ್ ಮಾಡಿದ್ದೆ. ಯಾರೋ ದೊಡ್ಡವರು ಹೇಳಿದ್ದರು. ಇದು ಮಾಡುವುದು ತಪ್ಪು ನೀನು ಒಬ್ಬ ಸಿನಿಮಾ ನಟ ಆಗಬೇಕಾಗಿರುವವನು ಎಂದು ಹೇಳಿದ್ದರು. ಆಗ ಕ್ಷಮೆ ಕೇಳಿ ಡಿಲೀಟ್ ಮಾಡಿದ್ದೆ.
ಆದರೆ ಮೂರು ದಿನ ಆದರೂ ನನಗೆ ಕಾಲ್ ಬರುತ್ತಲೇ ಇತ್ತು. ಇದರಿಂದ ನಾನು ಡಿಸ್ಟರ್ಬ್ ಆಗಿ ಅದಕ್ಕೆ ಪ್ರತ್ಯುತ್ತರವಾಗಿ ನಾನು ಎರಡನೇ ವಿಡಿಯೋ ಮಾಡಿದ್ದು. ನನಗೆ ಕೆಟ್ಟ ಪದಗಳಿಂದ ಬೈದಿದ್ದು ತಡೆದುಕೊಳ್ಳುವುದಕ್ಕೆ ಆಗಿರಲಿಲ್ಲ. ಮೊದಲ ಬಾರಿಗೆ ನಾನು ಇದನ್ನೆಲ್ಲ ಎದುರಿಸುತ್ತಿದ್ದರಿಂದ ನನಗೆ ತೆಗೆದುಕೊಳ್ಳಲು ಆಗಿಲ್ಲ. ಅದಕ್ಕೆ ನನ್ನ ಕಡೆಯಿಂದ ತಪ್ಪು ಆಗಿ ಹೋಗಿದೆ' ಎಂದು ಸುಧಾಕರ್ ಒಪ್ಪಿಕೊಂಡಿದ್ದಾರೆ.
ಧ್ರುವ ಸರ್ಜಾ ಸರ್‌ಗೆ ಮತ್ತು ಸಂಪೂರ್ಣ ಅವರ ಫ್ಯಾನ್ಸ್‌ಗೆ ಹಾಗೇ ಸುಧಾಕರ್ ಮಾಡಿದ್ದು ತಪ್ಪು ಯಾರಿಗೆಲ್ಲ ಅನಿಸಿದೆಯೋ, ಕನ್ನಡ ಚಿತ್ರರಂಗ ಇರಬಹುದು, ಮಾಧ್ಯಮದವರು ಇರಬಹುದು, ಯಾರಿಗೆ ತಪ್ಪು ಅನಿಸಿದೆಯೋ, ಯಾರಿಗೆ ಸುಧಾಕರ್ ಮಾಡಿದ್ದು ತಪ್ಪು ಅನಿಸಿದೆಯೋ ಅದರ ಬಗ್ಗೆ ಚರ್ಚೆನೇ ಬೇಡ. ತಪ್ಪು ನನ್ನದೇ ಅಂತ ನಾನೇ ಒಪ್ಪಿಕೊಳ್ಳುತ್ತೇನೆ. ಧ್ರುವ ಸರ್ ದೊಡ್ಡವರು. ನಾನು ಏನೂ ಅಲ್ಲ. ಅವರು ಸಮುದ್ರ ಆದರೆ, ಬಾವಿಯಲ್ಲಿರೋ ಕಪ್ಪೆ ಲೆಕ್ಕ ಸರಿನಾ?. ನನ್ನದೇ ತಪ್ಪು ಸರ್ ದಯವಿಟ್ಟು ಕ್ಷಮೆ ಇರಲಿ ಎಂದು ಸುಧಾಕರ್ ಕೇಳಿಕೊಂಡಿದ್ದಾರೆ.












Click it and Unblock the Notifications