ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಿಂದ ಈ ಸ್ಥಳಗಳಲ್ಲಿ ಭೂಮಿ ಖರೀದಿಗೆ ಫುಲ್ ಡಿಮ್ಯಾಂಡ್
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಈಗಾಗಲೇ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆಂಧ್ರ ಹಾಗೂ ತಮಿಳುನಾಡು ಭಾಗದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದೇ ವರ್ಷ ಪೂರ್ಣಗೊಂಡು ಚೆನ್ನೈಗೆ ಬೆಂಗಳೂರಿನಿಂದ ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ. ಇದಕ್ಕೂ ಮುನ್ನವೇ ಈ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಿಂದಾಗಿ ಬೆಂಗಳೂರಿನ ಪ್ರಮುಖ ಜಾಗಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಲು ಕಾರಣವಾಗಿದೆ.
ಹೌದು ಮುಂಬರುವ ವರ್ಷಗಳಲ್ಲಿ ಬೆಂಗಳೂರು ನಗರದ ಸುಗಮ ಸಂಚಾರದ ವಿಚಾರದಲ್ಲಿ ಈ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಮಹತ್ವದ ಪಾತ್ರ ವಹಿಸುತ್ತದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಈ ಹೆದ್ದಾರಿ ಕಾರ್ಯಾಚರಣೆಯಲ್ಲಿರುವುದರಿಂದ ಪ್ರಮುಖ ಏರಿಯಾಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ ಎಂದು ವರದಿಯಾಗಿದೆ.

ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಎರಡು ರಾಜ್ಯಗಳ ರಾಜಧಾನಿಯಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ನೇರ ಸಂಪರ್ಕಕ್ಕಾಗಿ ನಿರ್ಮಿಸಲಾಗುತ್ತಿದೆ. ಅಲ್ಲದೆ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಕೂಡ ತಗ್ಗಿಸುವ ಉದ್ದೇಶ ಹೊಂದಿದೆ. ಸದ್ಯ ಬೆಂಗಳೂರಿನಿಂದ ಚೆನ್ನೈ ತಲುಪಲು ಸುಮಾರು 6 ಗಂಟೆ ಸಮಯ ಹಿಡಿಯುತ್ತದೆ. ಈ ಎಕ್ಸ್‌ಪ್ರೆಸ್‌ವೇ ರೆಡಿಯಾದ ನಂತರ ಪ್ರಯಾಣದ ಸಮಯ ಕೇವಲ 2.15 ಗಂಟೆ ಎಂದು ಹೇಳಲಾಗುತ್ತಿದೆ.
ಈ ಎಕ್ಸ್‌ಪ್ರೆಸ್‌ವೇ ಪರೋಕ್ಷವಾಗಿ ಬೆಂಗಳೂರು ಗ್ರಾಮಾಂತರ ಭಾಗದ ದೇವನಹಳ್ಳಿ ಪ್ರದೇಶದಲ್ಲೂ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಬಲ ನೀಡುತ್ತಿದೆ. ದೇವನಹಳ್ಳಿಯಿಂದ ಹೊಸಕೋಟೆಗೆ ಈಗಾಗಲೇ ಪ್ರಮುಖ ರಸ್ತೆಯಿದ್ದು, ಇದು ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ನೇರ ಸಂಪರ್ಕ ಹೊಂದುತ್ತದೆ. ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಐಟಿ ಪಾರ್ಕ್‌ನಿಂದಾಗಿ ರಿಯಲ್ ಎಸ್ಟೇಟ್ ಪುಟಿದೇಳುತ್ತಿದೆ. ಭವಿಷ್ಯದ ಬೆಂಗಳೂರು ಎಂದೇ ಕರೆಸಿಕೊಳ್ಳುತ್ತಿರುವ ದೇವನಹಳ್ಳಿ ಭಾಗಕ್ಕೆ ಚೆನ್ನೈ ಎಕ್ಸ್‌ಪ್ರೆಸ್‌ವೇ ವರದಾನ ಎನ್ನಲಾಗುತ್ತಿದೆ.

ದೇವನಹಳ್ಳಿಯಿಂದ ಎಕ್ಸ್‌ಪ್ರೆಸ್‌ವೇಗೆ ಸುಗಮ ಸಂಚಾರ ಇರುವುದರಿಂದ ಈ ಭಾಗಕ್ಕೆ ಬೆಂಗಳೂರಿಗೆ ಪ್ರವೇಶವಿಲ್ಲದೆ, ನೇರವಾಗಿ ತಲುಪಬಹುದಾಗಿದೆ. ಅಲ್ಲದೆ, ಈ ಸುಧಾರಿತ ಸಂಪರ್ಕ ವ್ಯವಸ್ಥೆಯಿಂದ ದೇವನಹಳ್ಳಿ ಭಾಗವು ಮನೆ ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳನ್ನು ಆಕರ್ಷಿಸುತ್ತಿದೆ. ಈ ಪ್ರದೇಶದಲ್ಲಿ ಬಿಲ್ಡರ್‌ಗಳು ಮತ್ತು ಪ್ಲಾಟ್ ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ. ಹೊರ ರಾಜ್ಯದ ಜನರು ಕೂಡ ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದು, ಆಸ್ತಿ ಖರೀದಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕೂಡ ಪ್ರಮುಖ ಕಾರಣ ಎನ್ನುತ್ತಿದ್ದಾರೆ ರಿಯಲ್ ಎಸ್ಟೇಟ್ ತಜ್ಞರು.
ಈ ಚೆನ್ನೈ ಎಕ್ಸ್‌ಪ್ರೆಸ್‌ವೇ ಮಾತ್ರವಲ್ಲದೆ, ಇತ್ತ ಹೈದರಾಬಾದ್ ರಸ್ತೆ, ಹೊಸಕೋಟೆ, ಚಿಂತಾಮಣಿ ಮೂಲಕವೂ ಆಂಧ್ರಪ್ರದೇಶದಿಂದ ಹಲವು ಮುಖ್ಯರಸ್ತೆಗಳು ದೇವನಹಳ್ಳಿ ನಗರ ಪ್ರವೇಶಿಸಿಯೇ ಬೆಂಗಳೂರಿಗೆ ಸಾಗಬೇಕಿದೆ. ಹಾಗಾಗಿ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಜೋರಾಗಿದೆ. ಇದಕ್ಕೆ ಇತ್ತೀಚಿನ ಪ್ರಮುಖ ರಸ್ತೆ ಯೋಜನೆಗಳು ಕೂಡ ಕಾರಣ ಎನ್ನಲಾಗಿದೆ.
ಈ ಎಕ್ಸ್‌ಪ್ರೆಸ್‌ವೇ ಮೂರು ರಾಜ್ಯಗಳ ಮೂಲಕ ಹಾದು ಹೋಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ಹೆದ್ದಾರಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಸಮೀಪದಲ್ಲಿರುವ ಹೊಸಕೋಟೆಯಿಂದ ಶುರುವಾಗಿ ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್), ವೆಂಕಟಗಿರಿಕೋಟ, ಪಲಮನೇರು, ಬಂಗಾರುಪಾಲಂ, ಚಿತ್ತೂರು, ರಾಣಿಪೇಟೆ ಮಾರ್ಗವಾಗಿ ತಮಿಳುನಾಡಿನ ಚೆನ್ನೈ ನಗರವನ್ನು ಸಂಪರ್ಕಿಸುತ್ತದೆ.












Click it and Unblock the Notifications