ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆಯ ಫೋಟೋಗಳು ರಿಲೀಸ್: ಸುದೀರ್ಘ ಬರಹದ ಅಚ್ಚರಿ ಪೋಸ್ಟ್ ವೈರಲ್
Rashmika Mandanna and Vijay Deverakonda: ದಕ್ಷಿಣ ಭಾರತೀಯ ಸಿನಿರಂಗದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 26ರ ಗುರವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದೀಗ ಈ ಜೋಡಿ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಕ್ಷಣಕ್ಕಾಗಿಯೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇದೀಗ ಫೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಸರಳ ಮತ್ತು ಸಂಪ್ರದಾಯಬದ್ಧವಾಗಿ ಇವರ ವಿವಾಹ ಕಾರ್ಯಕ್ರಮ ನಡೆದಿದೆ.

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಸಹ ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದಿದ್ದಾರೆ. ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಮಾತ್ರ ಹಾಜರಾಗಿದ್ದರು ಎನ್ನಲಾಗಿದೆ. ಇನ್ನೂ ಇದೀಗ ಈ ಜೋಡಿ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆಯೆ ಫೋಟೋಗಳ ಜೊತೆಗೆ ಸುದೀರ್ಘವಾಗಿ ಬರೆದುಕೊಂಡಿರುವ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಅದರಲ್ಲಿ ಏನಿದೆ ಎಂದು ಇಲ್ಲಿ ತಿಳಿಯಿರಿ.
ವಿಜಯ್ ದೇವಕೊಂಡ ಪೋಸ್ಟ್‌ನಲ್ಲೇನಿದೆ?
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿಜಯ್ ದೇವಕೊಂಡ "ಒಂದು ದಿನ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡೆ. ಆಕೆ ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು, ಅವಳು ಎದುರಿಗೆ ಕುಳಿತಿದ್ದರೆ ನಾನು ಮಾಡುವ ಊಟಕ್ಕೆ ಒಂದು ಅರ್ಥ ಸಿಗುತ್ತಿತ್ತು. ನನ್ನ ಜೀವನಕ್ಕೆ ನೆಮ್ಮದಿ ಮತ್ತು ಮನೆ ಎಂಬ ಭಾವ ನೀಡಲು ಅವಳು ಬೇಕೇ ಎಂದು ನನಗೆ ಅನಿಸುತ್ತಿತ್ತು. ಆದ್ದರಿಂದ ನನ್ನ ಅತ್ಯುತ್ತಮ ಗೆಳತಿಯನ್ನು... ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ. 26.02.2026." ಎಂದು ಲವ್ ಮತ್ತು ಸ್ಮೈಲ್ ಇಮೋಜಿಯೊಂದಿಗೆ ಬರೆದುಕೊಂಡು ಗಮನ ಸೆಳೆದಿದ್ದಾರೆ.
ನೆಟ್ಟಿಗರಿಂದ ಶುಭಹಾರೈಕೆಗಳ ಸುರಿಮಳೆ
ಈ ಪೋಸ್ಟ್‌ಗೆ ನೆಟ್ಟಿಗರೊಬ್ಬರು "ಅಭಿನಂದನೆಗಳು ವಿರೋಷ್ (Virshoh).. ಇನ್ಮುಂದೆ ಯಾವುದೇ ಗೊಂದಲ ಅಥವಾ ತೊಂದರೆಗಳಿಲ್ಲದೆ ಸುಖವಾಗಿ, ಸಂತೋಷವಾಗಿ ಇರಿ " ಎಂದು ಬರೆದುಕೊಂಡಿದ್ದಾರೆ. ಇನ್ನೂ ತುಂಬಾ ಜನ ನೆಟ್ಟಿಗರು ಇದೇ ರೀತಿಯಾಗಿ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡು ಈ ಶುಭಹಾರೈಸಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟ್‌ನಲ್ಲೇನಿದೆ?
"ಈಗ ನಿಮಗಾಗಿ ನನ್ನ ಪತಿಯನ್ನು ಪರಿಚಯಿಸುತ್ತಿದ್ದೇನೆ, ಶ್ರೀ ವಿಜಯ್ ದೇವರಕೊಂಡ ನಿಜವಾದ ಪ್ರೀತಿ ಎಂದರೆ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ ಇವರು. ಮನಸ್ಸಿನ ನೆಮ್ಮದಿ ಎಂದರೆ ಏನು ಎಂಬುದನ್ನು ನನಗೆ ತೋರಿಸಿಕೊಟ್ಟವರು. ದೊಡ್ಡದಾಗಿ ಕನಸು ಕಾಣುವುದು ತಪ್ಪಲ್ಲ ಎಂದು ಪ್ರತಿದಿನ ನನಗೆ ಹೇಳುತ್ತಾ, ನಾನು ಊಹಿಸಿರುವುದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯವನ್ನು ನನಗೆ ನೆನಪಿಸಿ ಸದಾ ಬೆಂಬಲವಾಗಿ ನಿಂತ ವ್ಯಕ್ತಿ," ಎಂದು ಬರೆದುಕೊಂಡಿದ್ದಾರೆ.
"ನಾನು ಯಾವಾಗಲೂ ಯಾವ ರೀತಿಯ ಹೆಣ್ಣಾಗಬೇಕೆಂದು ಕನಸು ಕಂಡಿದ್ದೆನೋ, ಇಂದು ಅಂತಹವಳೇ ಆಗಿದ್ದೇನೆ. ಯಾಕೆಂದರೆ ನೀನು ಇಂದು ಈ ಮಟ್ಟಕ್ಕೆ ರೂಪಿಸಿದ್ದೀಯ. ನಾನು ನಿಜವಾಗಿಯೂ ಧನ್ಯಳಾಗಿದ್ದೇನೆ. "ವಿಜ್ಜು, ನಿನ್ನ ಮೇಲಿರುವ ನನ್ನ ಭಾವನೆಗಳನ್ನು ವಿವರಿಸಲು ನನಗೆ ಪದಗಳೇ ಸಾಲುವುದಿಲ್ಲ. ಇದನ್ನು ನಾನು ನಿನಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ," ಎಂದು ಬರೆದುಕೊಂಡಿದ್ದಾರೆ.
ಆದರೆ, ಇದ್ದಕ್ಕಿದ್ದಂತೆ ನನ್ನೆಲ್ಲಾ ಸಾಧನೆಗಳು, ಹೋರಾಟಗಳು, ಸುಖ-ದುಃಖಗಳು, ಸಂಭ್ರಮಗಳು ಮತ್ತು ನನ್ನ ಇಡೀ ಜೀವನ ಇವೆಲ್ಲದಕ್ಕೂ ಈಗ ಒಂದು ಪರಿಪೂರ್ಣ ಅರ್ಥ ಸಿಕ್ಕಂತಿದೆ. ಯಾಕೆಂದರೆ ಈಗ ನೀನು ನನ್ನ ಜೊತೆಗಿದ್ದೀಯಾ. ಇವೆಲ್ಲವನ್ನೂ ಹತ್ತಿರದಿಂದ ನೋಡುತ್ತಾ, ನನ್ನ ಬದುಕಿನ ಅತಿದೊಡ್ಡ ಭಾಗವಾಗಿದ್ದೀಯಾ. ನಿನ್ನ ಪತ್ನಿಯಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಿನ್ನ ಹೆಂಡತಿಯಾಗಲು, ನಿನ್ನ ಹೆಂಡತಿ ಎಂದು ಕರೆಸಿಕೊಳ್ಳಲು ನಾನು ಕಾತರಳಾಗಿದ್ದೇನೆ. ಇದು ಪೂರ್ತಿ ಪಾರ್ಟಿ ಮಾಡುವ ಸಮಯ. ನಾವು ಒಟ್ಟಾಗಿ ಸದಾಕಾಲ ಉತ್ತಮ ಜೀವನ ಮಾಡೋಣ. ಐ ಲವ್ ಯು ಎಂದು ಬರೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications