Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ
ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಡಿಆರ್‌ಡಿಒ ಸಂಕೀರ್ಣದಿಂದ ಸಮುದಾಯದ ನಾಯಿಗಳನ್ನು ಕಾನೂನುಬಾಹಿರವಾಗಿ ಮತ್ತು ಅಮಾನವೀಯವಾಗಿ ಸೆರೆಹಿಡಿದಿರುವುದನ್ನು ಪ್ರತಿಭಟಿಸಿ, ನೂರಾರು ನಾಗರಿಕರು ಇಂದು ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಯಾಂಡಲ್‌ವುಡ್ ನಟಿ ರಮ್ಯಾ, ಕಣ್ಣೀರಿಡುತ್ತಾ ಈ ಘಟನೆಯನ್ನು ಖಂಡಿಸಿದರು.
ಸಿ.ವಿ.ರಾಮನ್ ನಗರ ಅನಿಮಲ್ ಸ್ಕ್ವಾಡ್ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಗಳು, ಕಾನೂನು ತಜ್ಞರು ಮತ್ತು ಸ್ವಯಂಸೇವಕರು ಪಾಲ್ಗೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಈ ಘಟನೆಯ ಹಿನ್ನೆಲೆಯು ಮಾರ್ಚ್ 5 ರಂದು ನಡೆದ ಆಘಾತಕಾರಿ ಘಟನೆಯಿಂದ ಆರಂಭವಾಗಿದೆ.

ಏನಿದು ಘಟನೆ?
ಅಂದು ಡಿಆರ್‌ಡಿಒ ಆವರಣದೊಳಗೆ ಬರುತ್ತಿದ್ದ ಟ್ರಕ್ ಒಂದನ್ನು ತಡೆದ ನಿವಾಸಿಗಳು, ಅದರೊಳಗೆ ಮೂರು ನಾಯಿಗಳನ್ನು ಕಾಲು ಮತ್ತು ಬಾಯಿ ಕಟ್ಟಿ ಪ್ಲಾಸ್ಟಿಕ್ ಚೀಲಗಳಲ್ಲಿ ತುರುಕಿರುವುದನ್ನು ಕಂಡು ಬೆಚ್ಚಿಬಿದ್ದಿದ್ದರು. ಕೂಡಲೇ ಆ ನಾಯಿಗಳನ್ನು ರಕ್ಷಿಸಲಾಯಿತಾದರೂ, ಅದೇ ಆವರಣದಲ್ಲಿ ಶಾಂತಿಯುತವಾಗಿ ಬದುಕುತ್ತಿದ್ದ ಸುಮಾರು 20ಕ್ಕೂ ಹೆಚ್ಚು ನಾಯಿಗಳು ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವು ಹೈಕೋರ್ಟ್‌ನಲ್ಲಿದೆ. ಏಪ್ರಿಲ್ 16ರಂದು ಇದರ ಮುಂದಿನ ವಿಚಾರಣೆ ನಡೆಯಲಿದೆ.
ರಕ್ತ ಕುದಿಯುತ್ತದೆ ಎಂದ ರಮ್ಯಾ
ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಟಿ ಮತ್ತು ರಾಜಕಾರಣಿ ರಮ್ಯಾ ಅವರು ಶ್ವಾನಗಳ ಮೇಲಿನ ಕ್ರೌರ್ಯವನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. "ಆ ನಾಯಿಗಳನ್ನು ಹಿಂಸಿಸುತ್ತಿರುವ ವಿಡಿಯೋಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ, ಅದನ್ನು ನೋಡಿದರೆ ರಕ್ತ ಕುದಿಯುತ್ತದೆ. ನಾವು ನಂಬುವ ಸಂಸ್ಥೆಗಳು ಇಷ್ಟು ಜವಾಬ್ದಾರಿಯಿಲ್ಲದೆ ವರ್ತಿಸಬಾರದು. ಒಂದು ವೇಳೆ ಆ ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ಪುರಾವೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಮಾತನಾಡಿ, ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಸ್ವಯಂಸೇವಕ ತಂಡಗಳು ಕಳೆದ ಒಂದು ದಶಕದಿಂದ ಬೀದಿ ನಾಯಿಗಳಿಗೆ ಲಸಿಕೆ ಮತ್ತು ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಶ್ರಮಿಸುತ್ತಿವೆ. ಹೀಗಿರುವಾಗ ಸಂಸ್ಥೆಗಳು ಕಾನೂನು ಮೀರಿ ವರ್ತಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಭಟನಾಕಾರರು ನಾಪತ್ತೆಯಾದ ನಾಯಿಗಳ ಪತ್ತೆ, ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಮಾನವ-ಪ್ರಾಣಿ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ನಾಯಿಗಳನ್ನು ಚೀಲದಲ್ಲಿ ಕಟ್ಟಿ ಸಾಗಿಸಿರುವುದು ಈ ನಿಯಮದ ಘೋರ ಉಲ್ಲಂಘನೆಯಾಗಿದೆ. ಪ್ರತಿಭಟನಾಕಾರರು ಹೇಳುವಂತೆ, ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ತೆರವುಗೊಳಿಸುವ ಬಗ್ಗೆ ಇರುವ ಸುಪ್ರೀಂಕೋರ್ಟ್‌ನ ಕೆಲವು ಹಳೆಯ ಆದೇಶಗಳನ್ನು ಸಂಸ್ಥೆಗಳು ತಪ್ಪಾಗಿ ಅರ್ಥೈಸಿಕೊಳ್ಳುತ್ತಿವೆ. ಅಮಾನವೀಯವಾಗಿ ಸಾಗಿಸುವುದಕ್ಕೆ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದ್ದಾರೆ.












Click it and Unblock the Notifications