Rajinikanth: ರಸ್ತೆ ಬದಿ ಸಾಮಾನ್ಯರಂತೆ ಊಟ ಸವಿದ ರಜನಿಕಾಂತ್, ಸೂಪರ್‌ಸ್ಟಾರ್ ಸಿಂಪ್ಲಿಸಿಟಿಗೆ ಫಿದಾ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಒಂದು ಸಿನಿಮಾ ನೂರಾರು ಕೋಟಿ ಸಂಭಾವನೆ ಪಡೆಯುವ ರಜನಿಕಾಂತ್ ಅವರು ಸರಳತೆಗೂ ಹೆಸರುವಾಸಿ. ಈಗೆಲ್ಲ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟರು ತಮ್ಮ ರೇಂಜ್ ತೋರಿಸುವುದು ಹೆಚ್ಚು. ನಾನು ಸೆಲೆಬ್ರಿಟಿ ಎನ್ನುವ ಅಹಂ ಸ್ವಲ್ಪವಾದರೂ ಇದ್ದೇ ಇರುತ್ತೆ. ಆದರೆ ರಜನಿಕಾಂತ್ ಅವರು ಇಂತವರಿಗೆ ಮಾದರಿಯಾಗಿದ್ದಾರೆ. ಕೋಟಿ ಕೋಟಿ ಆಸ್ತಿಯೊಂದಿಗೆ ಟಾಪ್ ನಟನಾಗಿದ್ದರೂ ರಸ್ತೆ ಬದಿ ಸಾಮಾನ್ಯರಂತೆ ನಿಂತು ಊಟ ಸವಿಯುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ತೆರೆಕಂಡ ರಜನಿಕಾಂತ್ ನಟನೆಯ "ಕೂಲಿ" ಸಿನಿಮಾ ಸಕ್ಸಸ್ ಕಂಡಿತ್ತು. ಸಿನಿಮಾಗಳಿಂದ ಬಿಡುವು ಪಡೆದುಕೊಂಡು ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಋಷಿಕೇಶಕ್ಕೆ ತೆರಳಿರುವ ರಜನಿಕಾಂತ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಒಂದು ಫೋಟೋದಲ್ಲಿ ರಜನಿಕಾಂತ್ ರಸ್ತೆಬದಿಯಲ್ಲಿ ಎಲೆಯ ತಟ್ಟೆಯಲ್ಲಿ ಬಡಿಸಿದ ಸಾಧಾರಣ ಊಟವನ್ನು ಸೇವಿಸುತ್ತಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿ ಅಂದ ಕೂಡಲೇ ಸುತ್ತಲೂ ಹತ್ತಾರು ಮಂದಿ, ಬಿಸಿಲಿಗೆ ತಾಗದಂತೆ ಎಸಿ ವ್ಯವಸ್ಥೆ, ಐಷಾರಾಮಿ ಊಟ ಎಲ್ಲವೂ ಇರುತ್ತದೆ. ಆದರೆ ರಜನಿಕಾಂತ್ ಅವರು ಕುಬೇರ ಸೆಲೆಬ್ರಿಟಿಯಾದರೂ ಕೊಂಚವೂ ಹಮ್ಮು-ಬಿಮ್ಮು ಇಲ್ಲದೆ ಸರಳತೆ ಪ್ರದರ್ಶಿಸಿದ್ದಾರೆ. ಋಷಿಕೇಶದ ರಸ್ತೆಯ ಪಕ್ಕ ಯಾರೋ ಸಾಮಾನ್ಯರು ಎನ್ನುವಂತೆ ಎಲೆಯ ತಟ್ಟೆಯಲ್ಲಿ ಆಹಾರ ಸವಿದಿದ್ದಾರೆ. ಕೂರಲು ಕುರ್ಚಿಯೂ ಇಲ್ಲದೆ ನಿಂತೇ ಊಟ ಮಾಡಿದ್ದಾರೆ.
ಇನ್ನೊಂದು ಫೋಟೋದಲ್ಲಿ ರಜನಿಕಾಂತ್ ಅವರು ಸರಳವಾದ ಬಿಳಿ ಬಟ್ಟೆಗಳನ್ನು ಧರಿಸಿ, ಆಶ್ರಮದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದ್ದಾರೆ. ಒಬ್ಬ ಅರ್ಚಕನಿಗೆ ಗೌರವ ಸಲ್ಲಿಸುತ್ತಿರುವುದನ್ನು ತೋರಿಸಲಾಗಿದೆ. ಈ ಫೋಟೋಗಳು ವೈರಲ್ ಆಗಿದ್ದು, ರಜನಿ ಅವರ ಸರಳತೆಯನ್ನು ಮೆಚ್ಚಿದ್ದಾರೆ.
ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿರುವ ಅವರು ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿ, ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದಾರೆ. ಸಾಂಪ್ರದಾಯಿಕ ಹಿಂದೂ ಆಚರಣೆಯಾದ ಗಂಗಾ ಆರತಿಯಲ್ಲಿಯೂ ಭಾಗವಹಿಸಿದ್ದಾರೆ. ನಂತರ ಅವರು ಭಾನುವಾರ ದ್ವಾರಾಹತ್‌ಗೆ ಪ್ರಯಾಣ ಬೆಳೆಸಿ ತಮ್ಮ ಆಧ್ಯಾತ್ಮಿಕ ಕಾರ್ಯಗಳನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಫೋಟೋಗಳಿಗೆ "ಸೂಪರ್ ಸ್ಟಾರ್-ಸಿಂಪಲ್ ಸ್ಟಾರ್" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ರಜನಿಕಾಂತ್ ಅವರ ಸರಳತೆ ನಿಜಕ್ಕೂ ಅದ್ಭುತ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಫೋಟೋಗಳು ಅವರು ಪ್ರಸ್ತುತ ಮಾಡುತ್ತಿರುವ ಧಾರ್ಮಿಕ ತೀರ್ಥಯಾತ್ರೆಯದ್ದು ಎಂದು ಹೇಳಲಾಗಿದೆ. ಇಂದಿನ ನಟರು ತಲೆ ಕೂದಲಿಗೆ ದುಬಾರಿ ವಿಗ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಸ್ಟೈಲಿಶ್ ನೋಟಕ್ಕಾಗಿ ಹಣ ಖರ್ಚು ಮಾಡುತ್ತಾರೆ. ಆದರೆ ರಜನಿಕಾಂತ್ ಇದ್ಯಾವುದನ್ನೂ ಮಾಡುವವರಲ್ಲ. ಸಿಂಪ್ಲಿಸಿಟಿಗೆ ಅವರೇ ನಿಜವಾದ ಸ್ಟಾರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications