Radhika Kumaraswamy: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ?
ಬೆಂಗಳೂರು, ಸೆಪ್ಟೆಂಬರ್ 08: ರಾಧಿಕಾ ಕುಮಾರಸ್ವಾಮಿ ಹಲವು ವರ್ಷಗಳ ಗ್ಯಾಪ್ ಬಳಿಕ ಸಿನಿಮಾಕ್ಕೆ ಮತ್ತೆ ಮರಳಿ ಸೂಪರ್ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಎವರ್ಗ್ರೀನ್ ಬ್ಯೂಟಿ ಎಂದೇ ಫೇಮಸ್ ಆಗಿರೋ ರಾಧಿಕಾ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಭೈರಾದೇವಿ ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಇದೀಗ ರಾಜಕೀಯಕ್ಕೆ ಎಂಟ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ದೇವಿ ಭಕ್ತೆ ಆಗಿರುವ ರಾಧಿಕಾ ಭೈರಾದೇವಿ ಚಿತ್ರದಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 3 ರಂದು ಸಿನಿಮಾ ರಿಲೀಸ್ ಆಗಲಿದೆ, ಮೊದಲ ಬಾರಿ ಅಘೋರಿಯಾಗಿ ಪಾತ್ರ ಮಾಡುವ ಮೂಲಕ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಈ ಸಮಯದಲ್ಲಿ ನಟಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ತಮ್ಮ ಬದುಕಿನ ಹಲವು ಮಜಲುಗಳ ಬಗ್ಗೆ ತೆರೆದಿಟ್ಟಿದ್ದಾರೆ. ಅಲ್ಲದೇ ರಾಜಕೀಯದ ಕುರಿತು ನಟಿ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರ ತವರಿನಲ್ಲಿ ಯಾರಿಗೂ ರಾಜಕೀಯದ ನಂಟು ಇಲ್ಲ. ಅಷ್ಟಕ್ಕೂ ಸಿನಿಮಾ ನಂಟು ಕೂಡ ಇಲ್ಲ. ಆದರೂ ರಾಧಿಕಾ ಅವರು ಸಿನಿಮಾಕ್ಕೆ ಎಂಟ್ರಿ ಕೊಟ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಸಹಜವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಸಂಪೂರ್ಣ ಕುಟುಂಬವೇ ರಾಜಕೀಯಕ್ಕೆ ಸೇರಿದ್ದಾದ್ದರಿಂದ ರಾಧಿಕಾ ಕುಮಾರಸ್ವಾಮಿ ಅವರಿಗೆ ರಾಜಕೀಯದ ಎಂಟ್ರಿಯ ಬಗ್ಗೆ ಪ್ರಶ್ನೆಗಳು ಸಹಜವಾಗಿಯೇ ಕೇಳಲಾಗುತ್ತದೆ.
ನಾಲ್ಕೈದು ವರ್ಷಗಳ ಹಿಂದೆ ಸಂದರ್ಶನದ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು, ತಾವು ರಾಜಕೀಯಕ್ಕೆ ಬರುವ ಸುದ್ದಿಗಳನ್ನು ನಿರಾಕರಿಸಿದ್ದರು. ನನ್ನ ಕುಟುಂಬದವರು ರಾಜಕೀಯಕ್ಕೆ ಬಾ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ, ಸದ್ಯಕ್ಕೆ ನಾನು ಸಿನಿಮಾ ಮಾಡಬೇಕು ಎಂಬ ಆಸೆಯಲ್ಲಿದ್ದೇನೆ. ಆಮೇಲೆ ರಾಜಕೀಯ ನೋಡೋಣ. ರಾಜಕೀಯಕ್ಕೆ ಬರಲೇಬೇಕು ಎಂಬ ಉದ್ದೇಶ ಸದ್ಯಕ್ಕಂತೂ ಇಲ್ಲ ಎಂದು ಹೇಳಿದ್ದರು. ಈ ಮೂಲಕ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವುದೇ ಇಲ್ಲ ಎಂದೇನೂ ಹೇಳಿರಲಿಲ್ಲ.
ಆದರೆ, ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅವರ ನಿಲುವು ಸ್ವಲ್ಪ ಭಿನ್ನವಾಗಿದೆ. ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಕೊಟ್ಟಿದ್ದಾರೆ. ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಗಮನ ಹರಿಸಿದ್ದೆ. ಆದರೆ ಹಣೆಬರಹ ಏನು ಎಂದು ಹೇಳಲು ಆಗುವುದಿಲ್ಲವಲ್ಲ. ಒಂದು ವೇಳೆ ಸಂದರ್ಭ ಬಂದರೆ ರಾಜಕೀಯ ಬೇಡ ಎಂದು ಹೇಳಲ್ಲ. ಆದರೆ ಸದ್ಯ ಅದರ ಬಗ್ಗೆ ಏನೂ ಪ್ಲ್ಯಾನ್ ಇಲ್ಲ ಎಂದಿದ್ದಾರೆ. ಹಾಗೆ ನೋಡಿದರೆ, ನನ್ನ ಇಡೀ ಕುಟುಂಬದಲ್ಲಿ ಸಿನಿಮಾದಲ್ಲಿ ಯಾರೂ ಗುರುತಿಸಿಕೊಂಡಿರಲಿಲ್ಲ, ರಾಜಕೀಯದವರೂ ಇಲ್ಲ. ಆದರೆ ನನ್ನ ಜಾತಕದಲ್ಲಿ ನಾನು ಸಿನಿಮಾಕ್ಕೆ ಬರುತ್ತೇನೆ ಎಂದು ಇತ್ತು, ಆದ್ದರಿಂದ ಬಂದಿದ್ದೇನೆ. ಇನ್ನು ಜಾತಕದಲ್ಲಿ ರಾಜಕೀಯದಲ್ಲಿ ನಾನು ಗುರುತಿಸಿಕೊಳ್ಳುವೆ ಎಂದೂ ಇದೆ. ನೋಡೋಣ, ಹೇಗೆ ಸಂದರ್ಭ ಬರುತ್ತದೆಯೋ ಈಗ ಹೇಳುವುದು ಕಷ್ಟ ಎನ್ನುವ ಮೂಲಕ ಶೀಘ್ರದಲ್ಲಿಯೇ ರಾಜಕೀಯ ಸೇರುವ ಬರುವ ಕುರಿತು ಸುಳಿವು ನೀಡಿದ್ದಾರೆ.
ಈಗಾಗಲೇ ನನಗೆ ಚುನಾವಣೆ ಸಂದರ್ಭಗಳಲ್ಲಿ ಪ್ರಚಾರಕ್ಕೆ ಆಹ್ವಾನ ಬರುತ್ತದೆ. ಆದರೆ, ನನಗೆ ಸಿನಿಮಾಕ್ಕೇ ಟೈಮ್ ಕೊಡಲು ಆಗುತ್ತಿಲ್ಲ. ಆದ್ದರಿಂದ ಇನ್ನು ಪ್ರಚಾರಕ್ಕೆ ಹೋಗುವುದು ಕಷ್ಟ. ಬೇರೆಯವರ ಪ್ರಚಾರ ಮಾಡುವುದಕ್ಕಿಂತಲೂ ನಾನು ರಾಜಕೀಯಕ್ಕೆ ಬಂದಾಗ, ನನ್ನ ಪ್ರಚಾರ ನಾನು ಮಾಡಿಕೊಳ್ಳುವುದರಲ್ಲಿಯೇ ಖುಷಿ ಇದೆ ಎಂದು ಹೇಳುವ ಮೂಲಕ, ರಾಜಕೀಯ ಎಂಟ್ರಿ ಫಿಕ್ಸ್ ಎಂಬಂತೆ ಮಾತನಾಡಿದ್ದಾರೆ. ಇದರ ಹೊರತಾಗಿಯೂ ರಾಜಕೀಯಕ್ಕಿಂತ ತಮಗೆ ಸಿನಿಮಾ ಅಂದ್ರೇನೇ ಇಷ್ಟ ಎಂದು ಹೇಳಿದರು.











Click it and Unblock the Notifications