Allu Arjun: ಅಲ್ಲು ಅರ್ಜುನ್‌ಗೆ ತೆಲುಗು, ತಮಿಳು ಎಲ್ಲಾ ಓಕೆ: ಕನ್ನಡ ಮಾತ್ರ ಬೇಡ ಯಾಕೆ ?
Pushpa 2: ಅಲ್ಲು ಅರ್ಜುನ್ ಅವರು ಬಹು ನಿರೀಕ್ಷಿತ ಹಾಗೂ ಅವರ ಅಭಿಮಾನಿಗಳು ಭಾರೀ ಕಾತುರದಿಂದ ಕಾಯುತ್ತಿರುವ ಪುಷ್ಪ 2 ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಾರೀ ಸದ್ದು ಮಾಡಿದೆ.
ಈ ಸಿನಿಮಾದ ಸಾಂಗ್‌ಗಳು ಹೊಸ ದಾಖಲೆಯನ್ನು ಸೃಷ್ಟಿಸುತ್ತಿವೆ. ಆದರೆ, ಈ ಮಧ್ಯೆ ಅಲ್ಲು ಅರ್ಜುನ್ ಕನ್ನಡದ ಬಗ್ಗೆ ತೋರಿರುವ ಅಸಡ್ಡೆಗೆ ಕನ್ನಡಿಗರು ಗರಂ ಆಗಿದ್ದಾರೆ. ಕರ್ನಾಟಕದಲ್ಲೂ ಐಕಾನ್ ಸ್ಟಾರ್ ಅಲ್ಲೂ ಅರ್ಜುನ್ ಲಕ್ಷಾಂತರ ಜನ ಅಭಿಮಾನಿಗಳು ಇದ್ದಾರೆ. ಆ ಅಭಿಮಾನಿಗಳೂ ಸಹ ನಟ ನಡೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಸಿನಿಮಾ ಕೆರಿಯರ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿರುವ ಸಿನಿಮಾ. ಈ ಸಿನಿಮಾದಲ್ಲಿನ ನಟನೆಗಾಗಿ ಅಲ್ಲುಗೆ ರಾಷ್ಟ್ರ ಪ್ರಶಸ್ತಿ ಸಹ ಸಂದಿದೆ. ಅಲ್ಲದೇ ತೆಲುಗು ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿ ನಟನೊಬ್ಬನಿಗೆ ಸಂದಿರುವ ರಾಷ್ಟ್ರ ಪ್ರಶಸ್ತಿ ಇದಾಗಿದೆ.
ಪುಷ್ಪ ಸಿನಿಮಾದ ನಂತರ ಅವರ ಸಿನಿ ಜರ್ನಿ ಹಾಗೂ ಸಂಭಾವನೆ ಸೇರಿದಂತೆ ಹಲವು ವಿಷಯಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇನ್ನು ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಫೇಮಸ್ ಆಗಿದ್ದಾರೆ. ಇಷ್ಟೆಲ್ಲ ಫೇಮಸ್ ಆದರೂ ನಟ ಅಲ್ಲು ಅರ್ಜುನ್ ಅವರು ಕನ್ನಡದ ಬಗ್ಗೆ ತೋರಿಸುತ್ತಿರುವ ಅಸಡ್ಡೆಯ ಬಗ್ಗೆ ಕನ್ನಡಿಗರು ಗರಂ ಆಗಿದ್ದಾರೆ.

ಕನ್ನಡ ಮಾತನಾಡದ ನಟ: ನಟ ಅಲ್ಲು ಅರ್ಜುನ್ ಅವರು ಕರ್ನಾಟಕದಲ್ಲಿ ಸಿನಿಮಾ ಪ್ರಮೋಷನ್ ಮಾಡಿದರೂ, ಕನ್ನಡದಲ್ಲಿ ಸ್ವಲ್ಪ ಕೂಡ ಮಾತನಾಡದೆ ಇರುವುದಕ್ಕೆ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾನು ಯಾವ ಊರಿಗೆ ಹೋದರೂ ಅಲ್ಲಿನ ಮಣ್ಣಿಗೆ ಗೌರವ ಕೊಟ್ಟು ಮಾತನಾಡುತ್ತೇನೆ.
ಅದು ನಾವು ಅಲ್ಲಿನ ಮಣ್ಣು (ನೆಲಕ್ಕೆ, ಸ್ಥಳೀಯ ಭಾಷೆಗೆ) ಕೊಡುವ ಗೌರವ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ತಮಿಳುನಾಡಿಗೆ ಹೋದರೆ ತಮಿಳು, ತೆಲುಗು ನನ್ನ ಬಂಗಾರ, ಕೇರಳದಲ್ಲಿ ಮಲಯಾಳಂ & ಉತ್ತರಕ್ಕೆ ಹೋದರೆ ಹಿಂದಿಯಲ್ಲಿ ಮಾತಾಡ್ತೀನಿ ಎಂದಿದ್ದಾರೆ. ಮುಂದುವರಿದು ನಾನು ದುಬೈಗೆ ಹೋದರೂ ಅಲ್ಲಿನ ಭಾಷೆಯಲ್ಲಿ ಮಾತನಾಡ್ತೀನಿ ಅಂತ ಹೇಳಿದ್ದಾರೆ.
ಈ ರೀತಿ ಬೇರೆ ಭಾಷೆಗಳ ಬಗ್ಗೆ ಅಭಿಮಾನ ಇರುವುದಾಗಿ ಹೇಳುವ ಅಲ್ಲು ಅರ್ಜುನ್ ಅವರು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬಂದರೆ ಮಾತ್ರ ಕನ್ನಡದಲ್ಲಿ ಮಾತನಾಡಲ್ಲ. ಕನಿಷ್ಠ ಕನ್ನಡದಲ್ಲಿ ಮಾತನಾಡುವುದಕ್ಕೂ ಪ್ರಯತ್ನಿಸುವುದಿಲ್ಲ.
ಕನ್ನಡಿಗರನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡಿದ್ದಾರಾ ಅಲ್ಲು ಅರ್ಜುನ್, ಕರ್ನಾಟಕಕ್ಕೆ ಬಂದಾಗ ಮಾತ್ರ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಸಹ ಮಾಡಲ್ಲ ಯಾಕೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಆಯಾ ಭಾಷೆಯಲ್ಲೇ ಮಾತನಾಡ್ತಿದ್ದಾರೆ ಕನ್ನಡ ನಟರು
ಕನ್ನಡದ ಹೆಮ್ಮೆಯ ನಟರಾದ ಶಿವರಾಜ್‌ಕುಮಾರ್, ಉಪೇಂದ್ರ, ಯಶ್, ಸುದೀಪ್ ಹಾಗೂ ರಿಷಬ್‌ಪಂತ್ ಸಹ ಪ್ಯಾನ್ ಇಂಡಿಯಾ ಮೂವಿಗಳನ್ನು ಮಾಡಿದ್ದಾರೆ. ಈ ನಟರು ಆಂಧ್ರಪ್ರದೇಶ, ತಮಿಳುನಾಡಿಗೆ ಹೋದಾಗ ಅಲ್ಲಿನ ಭಾಷೆಗೆ ಗೌರವ ಕೊಟ್ಟು ಅದೇ ಭಾಷೆಯಲ್ಲಿ ಮಾತನಾಡಿದ್ದಾರೆ.
ಅದು ನಮ್ಮ ಕನ್ನಡದ ನಟರು ತೆಲುಗು & ತಮಿಳು ಅಥವಾ ಇನ್ನ್ಯಾವುದೇ ಭಾಷೆಗೆ ನೀಡಿರುವ ಗೌರವ. ಅದೇ ರೀತಿ ಪರ ಭಾಷೆಯ ನಟರು ನಮ್ಮ ನೆಲಕ್ಕೆ ಬಂದಾಗ ನಮ್ಮ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಕನ್ನಡಿಗರ ಒತ್ತಾಯ ಅಂತ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ.












Click it and Unblock the Notifications