ದೊಡ್ಡಪ್ಪನಿಗೆ ಹೆಮ್ಮೆ ತಂದಿರುವೆ: ಅಪ್ಪು ಮಗಳು ಧೃತಿ ಸಾಧನೆ ಕೊಂಡಾಡಿದ ಶಿವಣ್ಣ
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದು ಗೊತ್ತೇ ಇದೆ. ದೊಡ್ಮನೆಯ ಈ ಕುಡಿ ವಿದೇಶದಲ್ಲಿ ದೊಡ್ಡ ಸಾಧನೆ ಮಾಡಿದೆ. ಅಮೆರಿಕದಲ್ಲಿ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದ ಧೃತಿ ತಮ್ಮ ಪದವಿ ಪೂರ್ಣಗೊಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಪದವಿ ಪ್ರದಾನ ಸಮಾರಂಭ ನಡೆದಿದ್ದು, ಧೃತಿ ಪದವೀಧರೆಯಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ದೊಡ್ಡಪ್ಪ ಶಿವರಾಜ್‌ಕುಮಾರ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದು, ವಿಶೇಷ ಸಂದೇಶ ನೀಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳಾದ ಧೃತಿ ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್-ದಿ ನ್ಯೂ ಸ್ಕೂಲ್ ಸಂಸ್ಥೆಯಲ್ಲಿ ಪದವಿ ಪಡೆದಿದ್ದಾರೆ. ಈ ಕಾಲೇಜಿನಲ್ಲಿ ನಡೆದ ಘಟಿಕೋತ್ಸವಕ್ಕೆ ಅವರ ತಾಯಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರಿ ವಂದಿತಾ ಹಾಗೂ ಅಣ್ಣ ವಿನಯ್ ರಾಜ್‌ಕುಮಾರ್ ಕೂಡ ಭಾಗಿಯಾಗಿದ್ದರು. ಧೃತಿ ಪದವೀಧರೆಯಾದ ವಿಚಾರ ತಿಳಿದು ಫುಲ್ ಖುಷ್ ಆಗಿದ್ದಾರೆ. ಇತ್ತ ಶಿವಣ್ಣ ಕೂಡ ಮಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಇದೇ ಸಂಭ್ರದಲ್ಲಿ ದೊಡ್ಡಪ್ಪ ಶಿವರಾಜ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗಳ ಕೆಲ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಸಂತಸ ಹಂಚಿಕೊಂಡಿದ್ದಾರೆ. ಶಿವಣ್ಣ ಧೃತಿಯನ್ನು ಮುದ್ದಾಗಿ ಟೋಟೋ ಎಂದು ಕರೆದಿದ್ದು, ಹಾಯ್ ಟೋಟೊ, ಕಂಜ್ರಾಜುಲೇಷನ್ಸ್, ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ ಎಂದು ಫುಲ್ ಖುಷ್ ಆಗಿದ್ದಾರೆ.
ನೀನು ದೊಡ್ಡಪ್ಪನ್ನನ್ನ ತುಂಬಾ ಹೆಮ್ಮೆ ಪಡುವಂತೆ ಮಾಡಿದ್ದೀಯ. ಅಪ್ಪು, ಅಶ್ವಿನಿ, ನೀನು ಮತ್ತು ನುಕ್ಕಿ ಜೊತೆ ಬಹಳಷ್ಟು ಒಳ್ಳೆಯ ನೆನಪುಗಳು ಈಗಲೂ ಕಣ್ಣ ಮುಂದಿದೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ ಇರುತ್ತೆ, ನಿನ್ನಲಿಯೇ ಅಪ್ಪು ಕಾಣುತ್ತಿದ್ದೇವೆ. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ನಿನ್ನ ಪದವಿಗಾಗಿ ಮತ್ತೊಮ್ಮೆ ಅಭಿನಂದನೆಗಳು ಟೋಟೊ ಎಂದು ಶಿವಣ್ಣ ಕೊಂಡಾಡಿದ್ದಾರೆ.
ನ್ಯೂಯಾರ್ಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾಗಿರುವ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್-ದಿ ನ್ಯೂ ಸ್ಕೂಲ್‌ಗೆ ಸುಮಾರು 128 ವರ್ಷಗಳ ಇತಿಹಾಸವಿದೆ. ಇದು ಅತ್ಯಂತ ಹಳೆಯ ಕಲೆ ಮತ್ತು ವಿನ್ಯಾಸ ಶಾಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಲ್ಲಿ ಪ್ರಮುಖವಾಗಿ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನ್, ಜಾಹೀರಾತು, ಗ್ರಾಫಿಕ್ ಡಿಸೈನ್ ಸೇರಿದಂತೆ ಪ್ರಮುಖ ವಿಷಯಗಳ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯಲ್ಲಿ ಪದವಿ ಪಡೆಯಬೇಕು ಎನ್ನುವುದು ಧೃತಿ ದೊಡ್ಡ ಕನಸಾಗಿತ್ತು. ಈಗ ಅದು ನನಸಾಗಿದೆ.
ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತೀಯ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕಾಗಿ ಆಯ್ಕೆ ಮಾಡುತ್ತದೆ. ಈ ಪೈಕಿ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಕೂಡ ಒಂದು. ಈ ಸಂಸ್ಥೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಪುತ್ರಿ ಧೃತಿ ಇಲ್ಲಸ್ಟ್ರೇಟರ್ (illustrator) ಮತ್ತು ಡಿಸೈನರ್ ಶಿಕ್ಷಣ ಪಡೆಯುತ್ತಿದ್ದರು. ಈಗ ಇದೇ ವಿಷಯದಲ್ಲಿ ಧೃತಿ ಪದವಿ ಪಡೆದಿದ್ದಾರೆ.












Click it and Unblock the Notifications