ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಾಮೆಂಟ್ ಕೇಸ್; ಮತ್ತೆ ಇಬ್ಬರ ಬಂಧನ
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಹಾಕಿದ್ದ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಈವರೆಗೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಲಕ್ಷ್ಮಿ ಅವರ ದೂರಿನ ಮೇರೆಗೆ ತನಿಖೆಗೆ ಮುಂದಾಗಿದ್ದ ಪೊಲೀಸರು ಈ ಮೊದಲಿಗೆ ಚಿಕ್ಕಬಾಣಾವರ ಆಟೋ ಚಾಲಕ ಚಂದ್ರು ಮತ್ತು ದಾವಣಗೆರೆಯ ನಿತಿನ್ ಎಂಬುವವರನ್ನು ಬಂಧಿಸಿದ್ದರು. ಇದೀಗ ಹುಬ್ಬಳ್ಳಿ ನಾಗರಾಜ್ ತಳವಾರ ಹಾಗೂ ಧಾರವಾಡದ ಪ್ರಶಾಂತ್ ತಳವಾರ ಎಂಬುವವರನ್ನು ಬಂಧಿಸಲಾಗಿದೆ.

ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ತಾರಕಕ್ಕೇರಿತ್ತು. ನಂತರ ವಿಜಯಲಕ್ಷ್ಮಿ ಅವರಿಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡಿದ್ದರು. ಈ ಸ್ಕ್ರೀನ್‌ಶಾಟ್‌ಗಳೊಂದಿಗೆ ವಿಜಯಲಕ್ಷ್ಮಿಅವರು ಪೊಲೀಸರಿಗೆ ದೂರು ನೀಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅವರ ಮತ್ತು ಕುಟುಂಬದ ಬಗ್ಗೆ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳು ಮತ್ತು ಸಂದೇಶಗಳು ಬಂದಿರುವುದಾಗಿ ಆರೋಪಿಸಿದ್ದರು. ಇದು ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟದಿಂದ ಶುರುವಾಗಿತ್ತು. ವಿಜಯಲಕ್ಷ್ಮಿ ಅವರು ಡಿಸೆಂಬರ್ 24ರಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸ್ಕ್ರೀನ್‌ಶಾಟ್‌ಗಳನ್ನು ಅವರೂ ಹಂಚಿಕೊಂಡು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.
ಇದಾದ ಕೆಲ ದಿನಗಳ ನಂತರ ತಮ್ಮ ಪ್ರಕರಣದ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ವಿಜಯಲಕ್ಷ್ಮಿಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ವಿಳಂಬದ ಬಗ್ಗೆ ಬೇಸರ ಹಂಚಿಕೊಂಡಿದ್ದರು.
ಪೊಲೀಸರ ಬಗ್ಗೆ ವಿಜಯಲಕ್ಷ್ಮಿ ಅಸಮಾಧಾನ
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದ ವಿಜಯಲಕ್ಷ್ಮಿ ಅವರು, ಮತ್ತೊಬ್ಬ ಮಹಿಳೆ ಸಲ್ಲಿಸಿದ ದೂರಿಗೆ ಕೇವಲ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನಟಿ ರಮ್ಯಾ ಅವರ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು. ನಾನು ಯಾವಾಗಲೂ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿದೆ ಎಂದು ನಂಬಿದ್ದೆ. ನಾನು ದಾಖಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ಸಲ್ಲಿಸಿದ ದೂರಿನ ಮೇಲೆ ಕೇವಲ ಒಂದು ದಿನದಲ್ಲೇ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನನ್ನ ದೂರಿಗೆ ಮಹತ್ವವೇ ಇಲ್ಲವೇ? ಅಥವಾ ಅದು ಮಾನ್ಯವಲ್ಲವೇ? ಎಂಬ ಪ್ರಶ್ನೆ ಮೂಡಿದೆ ಎಂದಿದ್ದರು.
ನಮ್ಮ ವಕೀಲರು ಈ ಕೇಸ್ ವಿಚಾರವಾಗಿ ನಿರಂತರವಾಗಿ ಫಾಲೋ-ಅಪ್ ಮಾಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ದೂರನ್ನು ಇನ್ನೂ ಪರಿಶೀಲಿಸಿಲ್ಲ ಎಂದು ನೆನಪಿಸಲು ನಾನೇ ಸ್ವತಃ ಪೊಲೀಸ್ ಕಮೀಷನರ್ ಕಚೇರಿಗೆ ಹೋಗಬೇಕಾಯಿತು. ಈ ವಿಳಂಬಕ್ಕೆ ಯಾವುದೇ ಹೊರಗಿನ ಒತ್ತಡ ಅಥವಾ ಪ್ರಭಾವ ಕಾರಣವೇ ಎಂದು ಪ್ರಶ್ನಿಸಿದ್ದರು. ನಂತರ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications