Pavithra Gowda: ಪವಿತ್ರಾ ಗೌಡಗೆ ವಾರಕ್ಕೆ ಒಂದು ದಿನ ಮಾತ್ರ ಮನೆ ಊಟ ಸವಿಯುವ ಭಾಗ್ಯ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆ ಊಟ ನೀಡುವ ಕುರಿತು ನೀಡಿದ್ದ ಆದೇಶವನ್ನು ನ್ಯಾಯಾಲಯ ಇದೀಗ ಪರಿಷ್ಕರಿಸಿದೆ. ಜೈಲು ಊಟದಿಂದ ಚರ್ಮರೋಗ ಹಾಗೂ ಫುಡ್ ಪಾಯ್ಸನಿಂಗ್ ಸೇರಿ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಪವಿತ್ರಾ ಗೌಡ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಆರಂಭದಲ್ಲಿ ಮನೆ ಊಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜೈಲಾಧಿಕಾರಿಗಳ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಈಗ ವಾರಕ್ಕೆ ಒಂದು ದಿನ ಮಾತ್ರವೇ ಮನೆ ಊಟ ನೀಡಬೇಕು ಎಂದು ಸೂಚಿಸಿದೆ.
ಪವಿತ್ರಾ ಗೌಡ ಅವರು ತಮ್ಮ ಮನವಿಯಲ್ಲಿ, ಜೈಲಿನ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ವೈದ್ಯಕೀಯ ತೊಂದರೆಗಳನ್ನು ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆ ಮಾನವೀಯ ದೃಷ್ಟಿಯಿಂದ ನ್ಯಾಯಾಲಯವು ಮೊದಲಿಗೆ ಮನೆ ಊಟಕ್ಕೆ ಅವಕಾಶ ನೀಡಿತ್ತು. ಅಲ್ಲದೆ ಈ ಆದೇಶದ ಬಳಿಕ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈ ಬಗ್ಗೆ ಜೈಲಾಧಿಕಾರಿಗಳು ಕೂಡ ನ್ಯಾಯಾಲಯದ ಮುಂದೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದರು.

ಜೈಲಾಧಿಕಾರಿಗಳಿಂದ ಆಕ್ಷೇಪಣೆ
ಜೈಲಿನಲ್ಲಿ ನೀಡುವ ಆಹಾರವು ನಿಗದಿತ ಆರೋಗ್ಯ ಮಾನದಂಡಗಳಿಗೆ ಅನುಗುಣವಾಗಿಯೇ ಇದೆ. ಇತರ ಕೈದಿಗಳಿಗೆ ಇಲ್ಲದ ವಿಶೇಷ ಸೌಲಭ್ಯವನ್ನು ಒಬ್ಬ ಆರೋಪಿಗೆ ನಿರಂತರವಾಗಿ ನೀಡುವುದು ಸಮಾನತೆಯ ತತ್ವಕ್ಕೆ ವಿರುದ್ಧ, ಇದರಿಂದ ಭದ್ರತೆ ಮತ್ತು ಆಡಳಿತಾತ್ಮಕ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಬೇರೆ ಕೈದಿಗಳೂ ಇದೇ ರೀತಿ ಬೇಡಿಕೆ ಇಟ್ಟರೆ, ಅವರ ಊಟ ಪರಿಶೀಲಿಸಲು ಸಿಬ್ಬಂದಿಗೂ ಹೊರೆ ಎಂಬ ಅಂಶಗಳನ್ನು ಮುಂದಿಟ್ಟರು.
ಈ ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯ, ಜೈಲಿನ ಆಡಳಿತಾತ್ಮಕ ನಿಯಮಗಳು ಮತ್ತು ಕೈದಿಗಳ ಸಮಾನ ಹಕ್ಕುಗಳ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಮೊದಲು ನೀಡಿದ್ದ ಆದೇಶವನ್ನು ಬದಲಾಯಿಸಿದೆ. ಅದರಂತೆ, ಪವಿತ್ರಾ ಗೌಡಗೆ ಪ್ರತಿದಿನ ಮನೆ ಊಟ ನೀಡುವ ಅನುಮತಿ ರದ್ದುಗೊಳಿಸಿ, ವಾರಕ್ಕೆ ಒಮ್ಮೆ ಮಾತ್ರವೇ ಮನೆ ಊಟ ಸವಿಯುವ ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದೆ.
ನ್ಯಾಯಾಲಯದ ಈ ಆದೇಶದಿಂದ, ಆರೋಗ್ಯದ ಆಧಾರದ ಮೇಲೆ ನೀಡಲಾಗಿದ್ದ ಸೌಲಭ್ಯಕ್ಕೆ ಮಿತಿ ವಿಧಿಸಿದಂತಾಗಿದ್ದು, ಜೈಲು ವ್ಯವಸ್ಥೆಯ ನಿಯಮಾನುಸಾರ ಕಾರ್ಯಾಚರಣೆಗೂ ಒತ್ತು ನೀಡಿದಂತಾಗಿದೆ. ಜೊತೆಗೆ, ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಜೈಲಿನಲ್ಲಿಯೇ ಒದಗಿಸಬೇಕು ಎಂಬ ಅಂಶಕ್ಕೂ ಕೋರ್ಟ್ ಮಹತ್ವ ನೀಡಿದೆ.
ಪವಿತ್ರಾ ಗೌಡ ಅವರ ಆರೋಗ್ಯ ಸಂಬಂಧಿತ ಮನವಿ ಮತ್ತು ಜೈಲಾಧಿಕಾರಿಗಳ ಆಡಳಿತಾತ್ಮಕ ವಾದಗಳ ನಡುವೆ ಸಮತೋಲನ ಸಾಧಿಸುವ ಪ್ರಯತ್ನವಾಗಿ, ನ್ಯಾಯಾಲಯ ಈ ಆದೇಶ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗಳು ಮತ್ತು ಆದೇಶಗಳ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎಲ್ಲ ಆರೋಪಿಗಳು ಮಂಗಳವಾರ (ಜನವರಿ 13) ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದೆ.












Click it and Unblock the Notifications