Gilli Marriage: ಗಿಲ್ಲಿ ಜೊತೆ ಮದುವೆ ಏನಿಲ್ಲ, ಸ್ನೇಹ ಮುಂದುವರಿಯುತ್ತೆ: ಕ್ಲಾರಿಟಿ ಕೊಟ್ಟ ಕಾವ್ಯ
ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಆರಂಭದಿಂದಲೇ ವಿಶೇಷ ಗಮನ ಸೆಳೆದ ಜೋಡಿ ಎಂದರೆ ಗಿಲ್ಲಿ ನಟ ಮತ್ತು ಕಾವ್ಯ ಶೈವ. ಈ ಬಾರಿ ಬಿಗ್‌ಬಾಸ್ ಮನೆಗೆ ಇಬ್ಬರೂ ಜೋಡಿಯಾಗಿ ಎಂಟ್ರಿ ನೀಡಿದ್ದು, ಇದು ಕಾರ್ಯಕ್ರಮದ ಮೊದಲ ದಿನಗಳಿಂದಲೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಮನೆಯೊಳಗೆ ಗಿಲ್ಲಿ ಸದಾ ಕಾವ್ಯ ಅವರೊಂದಿಗೆ ಹಾಸ್ಯಭರಿತ ಮಾತುಗಳು, ಜೋಕ್‌ಗಳು ಹಾಗೂ ಸ್ನೇಹಪೂರ್ಣ ವರ್ತನೆಯ ಮೂಲಕ ಗಮನ ಸೆಳೆಯುತ್ತಿದ್ದರು. ಇದರಿಂದಾಗಿ ಇಬ್ಬರ ನಡುವಿನ ಆತ್ಮೀಯತೆ ವೀಕ್ಷಕರಿಗೆ ಮೆಚ್ಚುಗೆಯಾಯಿತು. ಅಲ್ಲದೆ ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಜೋಡಿಯಾಗಿ ಮಿಂಚಿದ ಗಿಲ್ಲಿ-ಕಾವ್ಯ ಮದುವೆ ವಿಚಾರವೂ ಭಾರೀ ಜೋರಾಗಿ ಸದ್ದು ಮಾಡಿತ್ತು. ಗಿಲ್ಲಿ ಜೊತೆ ಮದುವೆ ಬಗ್ಗೆ ಕಾವ್ಯ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮದ ಮಧ್ಯಂತರದಲ್ಲೇ ಗಿಲ್ಲಿ-ಕಾವ್ಯ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಯಿತು. "ಇವರಿಬ್ಬರು ಒಳ್ಳೆಯ ಜೋಡಿ", "ಮದುವೆಯಾದರೆ ಚೆನ್ನಾಗಿರುತ್ತೆ" ಎಂಬ ಅಭಿಪ್ರಾಯಗಳನ್ನು ಅನೇಕ ಬಿಗ್‌ಬಾಸ್ ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಕೆಲವರು ಇವರ ಸ್ನೇಹವನ್ನು ಪ್ರೀತಿಯ ಸಂಬಂಧವೆಂದು ಕೂಡ ಅರ್ಥೈಸಿಕೊಂಡಿದ್ದರು. ಸೀಸನ್ ಅಂತ್ಯದ ವೇಳೆಗೆ ಗಿಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದರು. ಕಾವ್ಯ ಶೈವ ಕೂಡ ಟಾಪ್ ಆರು ಸ್ಪರ್ಧಿಗಳಲ್ಲಿ ಸ್ಥಾನ ಪಡೆದು, ಗುರುತಿಸಿಕೊಂಡರು. ಈ ಹಿನ್ನೆಲೆ ಗಿಲ್ಲಿ ಹಾಗೂ ಕಾವ್ಯ ನಡುವಿನ ಸಂಬಂಧ, ವಿಶೇಷವಾಗಿ ಮದುವೆ ವಿಚಾರ ಮತ್ತೆ ಸುದ್ದಿಯಾಗತೊಡಗಿತು.

ಕಾವ್ಯ ಹೇಳಿದ್ದೇನು?
ಗಿಲ್ಲಿ ಜೊತೆ ಮದುವೆ ಬಗ್ಗೆ ಸ್ಪಷ್ಟನೆ ನೀಡಿರುವ ಕಾವ್ಯ ಶೈವ, ಗಿಲ್ಲಿ ಜೊತೆಗಿನ ಸಂಬಂಧವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. "ಗಿಲ್ಲಿ ಮತ್ತು ನನ್ನ ನಡುವೆ ಉತ್ತಮ ಸ್ನೇಹವಿದೆ. ಅದು ಬಿಗ್‌ಬಾಸ್ ಮನೆಯೊಳಗೆ ಮಾತ್ರವಲ್ಲ, ಹೊರಗೂ ಹಾಗೆಯೇ ಮುಂದುವರಿಯುತ್ತದೆ. ನಾವು ಜೋಡಿಯಾಗಿ ಕಾಣಿಸಿಕೊಂಡಿದ್ದೇವೆ ಅಂದ ಮಾತ್ರಕ್ಕೆ ಮದುವೆಯಾಗಬೇಕೆಂಬ ನಿಯಮವೇನಿಲ್ಲ" ಎಂದು ಕಾವ್ಯ ಹೇಳಿದ್ದಾರೆ.
ಇನ್ನು ತಮ್ಮ ಜೋಡಿ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳ ಕುರಿತು ಮಾತನಾಡಿದ ಕಾವ್ಯ, "ನಮ್ಮಿಬ್ಬರ ಜೋಡಿ ವಿಚಾರವಾಗಿ ಬಂದಿರುವ ಹೆಚ್ಚಿನ ಕಾಮೆಂಟ್‌ಗಳನ್ನು ನಾನು ಪಾಸಿಟಿವ್ ಆಗಿಯೇ ನೋಡಿದ್ದೇನೆ. ಜನರು ನಮ್ಮನ್ನು ಮೆಚ್ಚಿಕೊಂಡಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಆದರೆ ಒಂದು ಹುಡುಗ ಮತ್ತು ಹುಡುಗಿ ನಡುವೆ ಪರಿಶುದ್ಧ ಸ್ನೇಹ ಇರಬಾರದಾ? ಅಂತಹ ಸ್ನೇಹವೂ ಇರಬಹುದು ಎಂಬುದಕ್ಕೆ ನಾವು ಉದಾಹರಣೆ" ಎಂದು ಹೇಳಿದ್ದಾರೆ.
ಮದುವೆ ಕುರಿತ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಕಾವ್ಯ, "ಮದುವೆ ಬಗ್ಗೆ ಯಾವುದೇ ವಿಚಾರ ಇಲ್ಲ. ನಮ್ಮ ಸ್ನೇಹ ಮಾತ್ರ ಮುಂದುವರಿಯುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಕಾವ್ಯ ಅವರ ಈ ಹೇಳಿಕೆಯೊಂದಿಗೆ ಗಿಲ್ಲಿ-ಕಾವ್ಯ ಮದುವೆ ಕುರಿತು ಹರಡಿದ್ದ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ಆದರೂ ಬಿಗ್‌ಬಾಸ್ ಮನೆಯಲ್ಲಿ ಕಂಡುಬಂದ ಇವರ ಸ್ನೇಹ, ಹೊಂದಾಣಿಕೆ ಹಾಗೂ ಪರಸ್ಪರ ಗೌರವವನ್ನು ಅಭಿಮಾನಿಗಳು ಇನ್ನೂ ಮೆಚ್ಚುತ್ತಲೇ ಇದ್ದಾರೆ.












Click it and Unblock the Notifications