NILGIRIS: ಜೀವವೈವಿಧ್ಯ ಕುರಿತ ವಿಶಿಷ್ಟ 'ನಿಲಗಿರೀಸ್' ಸಾಕ್ಷ್ಯಚಿತ್ರ ಜುಲೈ 18ರಂದು ಭಾರತಾದ್ಯಂತ ಬಿಡುಗಡೆ
NILGIRIS: A Shared Wilderness: ಭಾರತದ ಮೊದಲ ಯುನೆಸ್ಕೋ ಬಯೋಸ್ಫಿಯರ್ ರಿಸರ್ವ್ - ನೀಲಿ ಪರ್ವತಗಳ ಕಳೆದ ಮೂರು ವರ್ಷಗಳಿಂದ ಚಿತ್ರೀಕರಣ ನಡೆಸಿ ಪೂರ್ಣಗೊಳಿಸಲಾಗಿದೆ. ಇದೇ ಜುಲೈ 18ರಂದು 'ನೀಲಗಿರಿಸ್': ಎ ಶೇರ್ಡ್ ವೈಲ್ಡರ್ನೆಸ್ (NILGIRIS: A Shared Wilderness) ಹೆಸರಿನ ಸಾಕ್ಷ್ಯಚಿತ್ರ (Documentary film) ಭಾರತಾದ್ಯಂತ ಬಿಡುಗಡೆ ಆಗುತ್ತಿದ್ದು, ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.
ಈ ವೈಶಿಷ್ಟ್ಯಪೂರ್ಣ ವನ್ಯಜೀವಿ ಸಾಕ್ಷ್ಯಚಿತ್ರಕ್ಕೆ 'ನೀಲಗಿರಿಸ್'ಎ ಶೇರ್ಡ್ ವೈಲ್ಡರ್ನೆಸ್ ಎಂದು ಹೆಸರಿಡಲಾಗಿದೆ. ನಿರ್ದೇಶಕ ಎಮ್ಮಿ-ನಾಮನಿರ್ದೇಶಿತ ಮತ್ತು BAFTA-ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಸಂದೇಶ್ ಕಡೂರ್ ನಿರ್ದೇಶಿಸಿದ ಸಾಕ್ಷ್ಯಚಿತ್ರ ಇದಾಗಿದೆ. ಧೀರಜ್ ಫಿಲ್ಮ್ಸ್ ದೇಶಾದ್ಯಂತ ಚಿತ್ರ ವಿತರಣೆ ಮಾಡುತ್ತಿದ್ದು, ರೋಹಿಣಿ ನಿಲೇಕಣಿ ಅವರ ಫಿಲಾಂತ್ರಪೀಸ್‌ನ ಸಹಕಾರದಲ್ಲಿ 'ಫೆಲಿಸ್ ಫಿಲ್ಮ್ಸ್' ಪ್ರಸ್ತುತಪಡಿಸುತ್ತಿದೆ.

ಈ ಪ್ರಾಚೀನ ಪರ್ವತ ಪರಿಸರ ವ್ಯವಸ್ಥೆಯ ಜೀವವೈವಿಧ್ಯ, ಜೀವ ವೈವಿಧ್ಯತೆ ಕುರಿತಾದ ಕತೆ ಒಳಗೊಂಡಿದೆ. ಈ ಸಾಕ್ಷ್ಯಚಿತ್ರದ ಪೋಸ್ಟರ್ ಸಹ ಈಗಾಗಲೇ ಪ್ರೇಕ್ಷಕರನ್ನು, ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಕೇರಳ ಮತ್ತು ತಮಿಳುನಾಡಿನ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮೂರು ವರ್ಷ ಶೂಟ್ ಮಾಡಲಾಗಿದೆ. ಎಲ್ಲವು ಅಂದುಕೊಂಡಂತಾಗಿದ್ದು, ಸಾಕ್ಷ್ಯಚಿತ್ರ ಇದೇ ಜುಲೈ 18ರ ಶುಕ್ರವಾರದಂದು ಭಾರತಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.
ಸಾಕ್ಷ್ಯಚಿತ್ರದ ಬಗ್ಗೆ ವಿವರಿಸಿದ ನಿರ್ದೇಶಕ ಸಂದೇಶ ಕಡೂರ್ ಅವರು, ಇದೊಂದು ಹೊಸ ಅರಣ್ಯದ ಕಥೆ, ಹೆಚ್ಚಾಗಿ ಮಾನವ ನಿರ್ಮಿತ ಭೂದೃಶ್ಯ, ಅಲ್ಲಿ ವನ್ಯಜೀವಿಗಳು ಹೊಂದಿಕೊಳ್ಳುತ್ತಲೇ ಇರುತ್ತವೆ. ಕಪ್ಪು ಚಿರತೆಗಳು, ಗೌರ್, ಸ್ಲಾತ್ ಕರಡಿ ಮುಂತಾದ ಚಹಾ ತೋಟಗಳಲ್ಲಿ ವಾಸಿಸುವುದು, ಬದುಕಲು ಅವು ಹೊಂದಿಕೊಳ್ಳವುದು, ಅವುಗಳ ಸಾಮರ್ಥ್ಯ ಹೀಗೆ ಅನೇಕ ಅಂಶಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿಮಗೆ ಅದ್ಭುತ ಅನುಭವ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೀಲಿ ಪರ್ವತಗಳಲ್ಲಿನ ವಿಶಿಷ್ಟ ಪರಿಸರ, ಅದ್ಭುತ ಸೌಂದರ್ಯ ಮತ್ತು ಅಲ್ಲಿನ ಜೀವವೈವಿಧ್ಯ ಕುರಿತು ಜನರನ್ನು ಜಾಗೃತಗೊಳಿಸುವುದು ಮುಖ್ಯವಾಗಿರುತ್ತದೆ. ದೇಶದ ಅತಿದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಮಾನವನ ನಿರಂತರ ಚಟುವಟಿಕೆಯಿಂದ ಅಲ್ಲಿನ ಒಂದಷ್ಟು ಬದಲಾವಣೆಗಳು ಆಗುತ್ತಿವೆ. ಅದನ್ನು ಸಂರಕ್ಷಿಸಬೇಕಿದೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಹೀಗಾಗಿ ಈ ಚಿತ್ರ ವಿಶೇಷವಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಮಹತ್ವದ ಅಂಶಗಳಿರುವ ಸಾಕ್ಷ್ಯಚಿತ್ರವನ್ನು ನೀವು ಥಿಯೇಟರ್‌ಗೆ ಬಂದು ಕಣ್ತುಂಬಿಕೊಳ್ಳುವಂತೆ ಫಿಲಾಂತ್ರಪೀಸ್‌ನ ಅಧ್ಯಕ್ಷೆ ರೋಹಿಣಿ ನಿಲೇಕಣಿ ಅವರು ಮನವಿ ಮಾಡಿದ್ದಾರೆ.












Click it and Unblock the Notifications