Nagathihalli Chandrashekhara: 40 ವಾರ ಪ್ರದರ್ಶನ ಕಂಡಿದ್ದ ಸಿನಿಮಾಗೆ 24 ವರ್ಷ: ಸ್ಮರಿಸಿದ ನಿರ್ದೇಶಕ
ಬೆಂಗಳೂರು, ಏಪ್ರಿಲ್ 09: ಸುಮಾರು ಎರಡೂವರೆ ದಶಕಗಳ ಹಿಂದೆ ಬಿಡುಗಡೆಯಾಗಿದ್ದ ಪ್ರೀತಿ, ಪ್ರಣಯದ ಕಥೆ ಆಧರಿಸಿದ್ದ 'ನನ್ನ ಪ್ರೀತಿಯ ಹುಡುಗಿ' ಸಿನಿಮಾವನ್ನು ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದರು. ಹತ್ತಾರು ವಾರಗಳ ಕಾಲ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದ ಈ ಚೆಂದದ ಸಿನಿಮಾಗೆ 24 ವಸಂತಗಳು ತುಂಬಿದ್ದು, ನಿರ್ದೇಶಕರ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
'ನನ್ನ ಪ್ರೀತಿಯ ಹುಡುಗಿ' ಸಿನಿಮಾ ಬಿಡುಗಡೆ, ಥಿಯೇಟರ್ ಪರಿಸ್ಥಿತಿ ಕುರಿತು ಸ್ವತಃ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ''24 ವರ್ಷಗಳ ಹಿಂದೆ ದೈತ್ಯ ಕಪಾಲಿಯಲ್ಲಿ 40 ವಾರ ಪ್ರದರ್ಶನಗೊಂಡ ಅದ್ದೂರಿ ಚಿತ್ರ. ಈಗ ಕಪಾಲಿಯ ಜೊತೆಗೆ ಅವನ ಸರೀಕ ಗೆಳೆಯ ಗೆಳತಿಯರೆಲ್ಲ ನೆಲಸಮಗೊಂಡಿದ್ದಾರೆ. ಉಳಿದಿರುವುದು ಮಧುರ ನೆನಪು ಮಾತ್ರ. ಅಮೆರಿಕಾದ ಫ್ರೀವೇಗಳಲ್ಲಿ ಒಮ್ಮೆ ಗುನುಗಿಕೊಂಡದ್ದು ಜನಪ್ರಿಯ ಹಾಡಾಗಿ ರೂಪುತಳೆಯಿತು. 'ಕಾರ್ ಕಾರ್ ಎಲ್ ನೋಡಿ ಕಾರ್..!'' ಎಂದು ಅವರು ಬರೆದುಕೊಂಡಿದ್ದಾರೆ.

ಈ ಸಿನಿಮಾ ಅಂದಿನ ದಿನಗಳಲ್ಲಿ ಸಖತ್ ಹಿಟ್ ಆಗಿತ್ತು. ಹಾಡುಗಳನ್ನು ಮೇಲಿಂದ ಮೇಲೆ ಗುನುಗುವಂತೆ ಮಾಡಿತ್ತು. ಹೊಸಬರಾದ ನಟ ಧ್ಯಾನ್ ಮತ್ತು ನಟಿ ದೀಪಾಲಿ ಅವರು ನಾಯಕ ಮತ್ತು ನಾಯಕಿ ಪಾತ್ರಗಳಲ್ಲಿ ಮಿಂಚಿದ್ದರು. ಹಿರಿಯ ನಟರಾದ ಸುರೇಶ್ ಹೆಬ್ಳಿಕರ್, ಭವ್ಯ, ದಿ.ಲೋಕೇಶ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಈ ಸಿನಿಮಾದ ಕಥೆಯು ನಿರ್ದೇಶಕರು ಆಗಿರುವ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಮಲೆನಾಡ ಹುಡುಗಿ, ಬಯಲು ಸೀಮೆ ಹುಡುಗ' ಎಂಬ ಸಣ್ಣ ಕಥೆ ಆಧರಿಸಿತ್ತು. ಚಿತ್ರವು ಒಂದು ಮಟ್ಟಿಗೆ ಹಿಟ್ ಆಗಿದ್ದರು, ಅದರ ಹಾಡುಗಳು ಮಾತ್ರ ಜೋರಾಗಿಯೇ ಸದ್ದು ಮಾಡಿದ್ದವು.
೨೪ ವರ್ಷಗಳ ಹಿಂದೆ ದೈತ್ಯ ಕಪಾಲಿಯಲ್ಲಿ ೪೦ ವಾರ ಪ್ರದರ್ಶನಗೊಂಡ ಅದ್ದೂರಿ ಚಿತ್ರ. ಈಗ ಕಪಾಲಿಯ ಜತೆಗೆ ಅವನ ಸರೀಕ ಗೆಳೆಯ ಗೆಳತಿಯರೆಲ್ಲ ನೆಲಸಮಗೊಂಡಿದ್ದಾರೆ. ಉಳಿದಿರುವುದು ಮಧುರ ನೆನಪು ಮಾತ್ರ. ಅಮೆರಿಕಾದ ಫ್ರೀವೇಗಳಲ್ಲಿ ಒಮ್ಮೆ ಗುನುಗಿಕೊಂಡದ್ದು ಜನಪ್ರಿಯ ಹಾಡಾಗಿ ರೂಪುತಳೆಯಿತು. ‘ಕಾರ್ ಕಾರ್ ಎಲ್ ನೋಡಿ ಕಾರ್..!’ pic.twitter.com/2p5zID5qnY
— Nagathihalli Chandrashekara (@NomadChandru) April 9, 2025
ಆ ಸಾಲಿನಲ್ಲಿ ಥಿಯೇಟರ್‌ಗಳ ಕಥೆ, ಇಂದಿನ ಸ್ಥಿತಿ ಇದೆ..
ಈ ನಾಲ್ಕೇ ಸಾಲಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರ ಸಿನಿಮಾದ ನೆನಪುಗಳ ಮಾತ್ರವಿಲ್ಲ. ಅಲ್ಲಿಂದ ಇವತ್ತಿನವರೆಗೆ ಆದ ಚಿತ್ರರಂಗದ ಅದರಲ್ಲೂ ಥಿಯೇಟರ್‌ಗಳು ಕೆಲಸ ಇಲ್ಲದೇ, ನಷ್ಟ ಅನುಭವಿಸಿ, ಮಾಲ್‌ಗಳಾಗಿ ಪರಿವರ್ತನೆ ಆಗುತ್ತಿರುವುದು. ಚಿತ್ರಮಂದಿರ ನೆಲಸಮಗೊಳ್ಳುತ್ತಿರುವುದರ ಮೇಲೂ ಬೆಳಕು ಚೆಲ್ಲಿದ್ದಾರೆ.
ತಾಂತ್ರಿಕತೆ ಬೆಳೆದಂತೆ ಜನರ ಥಿಯೇಟರ್‌ಗೆ ಬರುವುದು ಕಡಿಮೆ ಆಯಿತು. ಟಿವಿ ಜೊತೆಗೆ ಒಟಿಟಿ ಜಮಾನ ಆರಂಭವಾಯಿತು. ಇದೀಗ ಎಲ್ಲವು ಮೊಬೈಲ್‌ನಲ್ಲೇ ಎಂಬಂತಾಗಿದೆ. ಈ ಮಧ್ಯೆ ವರ್ಷಗಳ ಹಿಂದೆ ಕಪಾಳಿ ಥಿಯೇಟರ್, ಇತ್ತೀಚೆಗೆ ಸದಾಶಿವನಗರದ ಕಾವೇರಿ ಸೇರಿದಂತೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳೂ ಬಂದ್ ಆಗುತ್ತಿವೆ. ಇದನ್ನು ಸಹ ನಿರ್ದೇಶಕ ಸಾಲುಗಳು ನೆನಪಿಸುತ್ತವೆ..












Click it and Unblock the Notifications