Sirish Bharadwaj: ಮೆಗಾಸ್ಟಾರ್ ಚಿರಂಜೀವಿ ಮಗಳ ಮಾಜಿ ಗಂಡ ಸಾವು
ಮೆಗಾಸ್ಟಾರ್ ಚಿರಂಜೀವಿ ಅವರ ಮಗಳ ಮಾಜಿ ಗಂಡ ಶಿರೀಶ್ ಭಾರದ್ವಾಜ್ ಅವರು ವಿಧಿವಶರಾಗಿದ್ದಾರೆ. ಶ್ರೀರೆಡ್ಡಿ ಎನ್ನುವ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಶಿರೀಶ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡುವ ಮೂಲಕ ಶಿರೀಶ್ ಭಾರದ್ವಾಜ್ ನಿಧನದ ಸುದ್ದಿಯನ್ನು ಅಧೀಕೃತವಾಗಿ ತಿಳಿಸಲಾಗಿದೆ.
ಶಿರೀಶ್ ಭಾರದ್ವಾಜ್ 2007ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಶ್ರೀಜಾ ಹಾಗೂ ಶಿರೀಶ್ ಅವರ ಮದುವೆಗೆ ಚಿರಂಜೀವಿ ಅವರ ಕುಟುಂಬ ಒಪ್ಪಿಕೊಂಡಿರಲಿಲ್ಲ. ಇವರಿಬ್ಬರ ಪ್ರೀತಿಗೆ ಮನೆಯವರ ತೀವ್ರ ವಿರೋಧವಿತ್ತು. ಹೀಗಾಗಿ 2007ರಲ್ಲಿ ಶ್ರೀಜಾ ಮನೆ ಬಿಟ್ಟು ಹೋಗಿ ಶಿರೀಶ್ ಭಾರದ್ವಾಜ್ ಅವರನ್ನು ಮದುವೆಯಾಗಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.

ತಮ್ಮೊಳಗಿನ ಭಿನ್ನಾಭಿಪ್ರಾಯದಿಂದ 2014ರಲ್ಲಿ ಶ್ರೀಜಾ ಮತ್ತು ಶಿರೀಶ್ ಭಾರದ್ವಾಜ್ ಅವರ ದಾಂಪತ್ಯ ಜೀವನ ಮುರಿದು ಬಿದ್ದಿತ್ತು. ಬಳಿಕ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದುಕೊಂಡರು. ಡಿವೋರ್ಸ್ ಬಳಿಕ ಶಿರೀಶ್ ಭಾರದ್ವಾಜ್ ಮರು ಮದುವೆಯಾಗಿದ್ದರು. ಜೀವನ ಸರಿ ಹೋಯಿತು ಎನ್ನುವಷ್ಟರಲ್ಲಿ ಶಿರೀಶ್ ಭಾರದ್ವಾಜ್‌ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ಶಿರೀಶ್ ಭಾರದ್ವಾಜ್‌ಗೆ ಮೊದಲು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಿಕ ಶ್ವಾಸಕೋಶದ ಕ್ಯಾನ್ಸರ್ ಖಚಿತವಾಗಿತ್ತು. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶಿರೀಶ್ ಕ್ಯಾನ್ಸರ್ ರೋಗದಿಂದ ಬಳಲಿ, ನೀಡಿದ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಶಿರೀಶ್ ಭಾರದ್ವಾಜ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಇನ್ನು ಶಿರೀಶ್ ಭಾರದ್ವಾಜ್ ಅವರಿಂದ ವಿಚ್ಛೇದನ ಪಡೆದ ಬಳಿಕ ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಮತ್ತೆ 2016ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ಜೊತೆ ಎರಡನೇ ಮದುವೆ ಆಗಿದ್ದರು. ಆದರೆ ಈ ದಾಂಪತ್ಯದಲ್ಲೂ ಈಗ ಬಿರುಕು ಮೂಡಿದ್ದು ಸದ್ಯ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications