MAX Teaser: ಮಾಸ್ 'ಮ್ಯಾಕ್ಸ್' ಸುದೀಪ್; ಕಿಚ್ಚನ ಅಭಿಮಾನಿಗಳಿಗೆ ಮನರಂಜನೆಯ ಹಬ್ಬದೂಟ!
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಮ್ಯಾಕ್ಸ್' ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಕ್ರಾಂತ್ ರೋಣ ಬಳಿಕ ಸಾಕಷ್ಟು ಗ್ಯಾಪ್ ಬಳಿಕ ಸುದೀಪ್ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಹಲವು ಕಾರಣಗಳಿಂದ 'ಮ್ಯಾಕ್ಸ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ದೊಡ್ಡ ಹಿಟ್ ಸಿನಿಮಾ ಕೊಡಲು ಸುದೀಪ್ ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿದ್ದು, ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಇತ್ತು.

ಇಂದು ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟೀಸರ್ ನಲ್ಲಿ ಮಿಂಚಿರುವ ಸುದೀಪ್, ಅಭಿಮಾನಿಗಳಿಗೆ ಮನರಂಜನೆ ರಸದೌತಣ ಉಣಬಡಿಸಲು ಸಜ್ಜಾಗಿದ್ದಾರೆ. ಮಾಸ್ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಮಾಸ್ ಡೈಲಾಗ್‌ಗಳು ಇರುತ್ತವೆ ಎಂದು ಟೀಸರ್ ಸೂಚನೆ ಕೊಟ್ಟಿದೆ.
ಅಭಿಮಾನಿಗಳಿಗೆ ಇಷ್ಟವಾದ ಮ್ಯಾಕ್ಸ್!
1 ನಿಮಿಷ 7 ಸೆಕೆಂಡ್‌ನ ಟೀಸರ್ ನಲ್ಲಿ ಡೈಲಾಗ್ ಮತ್ತು ಸುದೀಪ್‌ರ ಆಕ್ಷನ್ ದೃಶ್ಯಗಳಿವೆ. ಅದರಲ್ಲೂ ಕೊನೆಯಲ್ಲಿ ಕಾಳಿ ಅವತಾರ ಹಾಕಿದ ವ್ಯಕ್ತಿಯ ಮುಂದೆ ಸುದೀಪ್ ನಡೆದು ಬರುವ ದೃಶ್ಯ ಸುದೀಪ್ ಅಭಿಮಾನಿಗಳ ಮನಗೆದ್ದಿದೆ.
ಸುದೀಪ್ ಸಿನಿ ಬದುಕಿನಲ್ಲೇ 'ಮ್ಯಾಕ್ಸ್' ಹೊಸ ಮೈಲಿಗಲ್ಲು ಬರೆಯಲಿದೆ ಎನ್ನುವ ನಿರೀಕ್ಷೆ ಇದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ವಿಜಯ್ ಕಾರ್ತಿಕೇಯ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸುದೀಪ್‌ರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ತಂದಿದ್ದಾರೆ.
ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದ್ದು, ಕಾಂತಾರಾ ಮೂಲಕ ಭಾರಿ ಯಶಸ್ಸು ಪಡೆದ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಟೀಸರ್ ಗೆ ಮತ್ತಷ್ಟು ಮೆರುಗು ತಂದಿದೆ. ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾಗೆ ಬಂಡವಾಳ ಹೂಡಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ತೆಲುಗು ಸಿನಿಮಾ ರೀಮೇಕ್ ಅಲ್ಲ!
ಮ್ಯಾಕ್ಸ್ ಸಿನಿಮಾ ಸೆಟ್ಟೇರಿದಾಗಿನಿಂದ ಇದು ತೆಲುಗಿನ ಸೂಪರ್ ಹಿಟ್ ಸಿನಿಮಾ 'ಕ್ಯ್ರಾಕ್' ರೀಮೇಕ್ ಎಂದೇ ಹೇಳಲಾಗುತ್ತಿದೆ. ಆದರೆ ಮ್ಯಾಕ್ಸ್ ಯಾವುದೇ ಸಿನಿಮಾದ ರೀಮೇಕ್ ಅಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಮ್ಯಾಕ್ಸ್ ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆಯಾಗಲಿದೆ.












Click it and Unblock the Notifications