ಚಿತ್ರರಂಗಕ್ಕೆ ಮತ್ತೆ ಮರಳಿದ ಮಾಸ್ಟರ್ ಕಿಶನ್: ಇಷ್ಟು ದಿನ ಎಲ್ಲೋಗಿದ್ರು? ಏನಾಗಿತ್ತು?
ಆಗ ಒಂದು ಕಾಲ ಇತ್ತು. ಮಕ್ಕಳಿಗಾಗಿಯೇ ಕೆಲವು ಸಿನಿಮಾಗಳನ್ನು ಮಾಡಲಾಗುತ್ತಿತ್ತು. ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123, ಬೇಬಿ ಶಾಮಲಿ ಅವರ ಸಿನಿಮಾಗಳು ಹೀಗೆ ಮಕ್ಕಳನ್ನೇ ಕೇಂದ್ರ ಬಿಂದುವಾಗಿಸಿಕೊಂಡು ತೆರೆ ಕಂಡ ಅದೆಷ್ಟೋ ಸಿನಿಮಾಗಳು ಸಖತ್ ಹಿಟ್ ಆಗಿದ್ದವು. ಇನ್ನು ಅಂದಿಗೆ ಬಾಲ ನಟ-ನಟಿಯರಾಗಿ ನಟಿಸುತ್ತಿದ್ದವರು ಇಂದಿಗೂ ಸಿನಿ ಪ್ರಿಯರಿಗೆ ಫೇವರೇಟ್. ಈ ಮಕ್ಕಳ ಸಿನಿಮಾ ಪೈಕಿ ಸರಿ ಸುಮಾರು ಎರಡು ದಶಕಗಳ ಹಿಂದೆ ಬಂದ ಕೇರ್ ಆಫ್ ಫುಟ್‌ಪಾತ್ ಸಿನಿಮಾ ನಿರೀಕ್ಷೆಗೂ ಮೀರಿ ಸೂಪರ್ ಹಿಟ್ ಆಗಿತ್ತು.
ಈ ಕೇರ್ ಆಫ್ ಫುಟ್‌ಪಾತ್ ಎಂಬ ಮಕ್ಕಳ ಚಿತ್ರ ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಮಾಸ್ಟರ್ ಕಿಶನ್ ಇದೀಗ ಮತ್ತೆ ಮುಖ್ಯ ಭೂಮಿಕೆ ಬರಲು ಸಜ್ಜಾಗಿದ್ದಾರೆ. ತಮ್ಮ 10 ವರ್ಷಕ್ಕೆ ಸಿನಿಮಾ ರಚಿಸಿ ನಿರ್ದೇಶನ ಮಾಡಿದ್ದ ಮಾಸ್ಟರ್ ಕಿಶನ್, ಸ್ವಾತಿ ಮುತ್ತು, ಎಕ್ಸ್‌ಕ್ಯೂಸ್ ಮೀ ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ನಟನೆ, ನಿರ್ದೇಶನದಿಂದ ದೂರ ಉಳಿದಿದ್ದ ಮಾಸ್ಟರ್ ಕಿಶನ್ ಇದೀಗ ದಿಢೀರ್ ಪ್ರತ್ಯಕ್ಷರಾಗಿದ್ದು, ಮತ್ತೆ ನಿರ್ದೇಶನದತ್ತ ಹೆಜ್ಜೆ ಇಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಿಶನ್, ಕಳೆದ ಕೆಲವು ವರ್ಷಗಳಲ್ಲಿ ನಾನು ನಂದೇ ಒಂದು ಕಂಪನಿಯಲ್ಲಿ ತೊಡಗಿಸಿಕೊಂಡಿದ್ದೆ. ಮೆಡಿಕಲ್ ಎಜುಕೇಶನ್ ಕಂಪನಿ ನಡೆಸುತ್ತಿದೆ. ಅಂದರೆ ಮೆಡಿಕಲ್ ಕೋರ್ಸ್‌ಗಳನ್ನು ಓಡುತ್ತಾ ಇರೋರಿಗೆ, ಒಂದು ವಿಭಿನ್ನವಾದ ರೀತಿಯಲ್ಲಿ ಎಜ್ಯುಕೇಶನ್ ಕಂಟೆಂಟ್‌ನ ಮಾಡುವ ರೀತಿಯಲ್ಲಿ ನಾನು ಕೆಲಸ ಮಾಡುತ್ತಿದೆ. ಆದರೆ ಈಗ ಎಲ್ಲೇ ಹೋದರೂ ಮನಸು ಎಲ್ಲಿರುತ್ತೋ ಅಲ್ಲಿಗೆ ಕರೆದುಕೊಂಡು ಹೋಗುತ್ತದೆ ಎನ್ನುತ್ತಾರಲ್ಲ ಹಾಗೆ ಆಗಿದೆ ಎಂದರು.
ನನ್ನ ಮನಸ್ಸು ಸಿನಿಮಾದಲ್ಲಿ ಇರುವುದು. ಹೀಗಾಗಿ ವಾಪಸ್ ಈ ದಾರಿಯತ್ತ ಬಂದಿರುವುದಾಗಿ ಹೇಳಿರುವ ಮಾಸ್ಟರ್ ಕಿಶನ್, ಈಗ ಒಂದು ಸಿನಿಮಾ ಬರೀತಾ ಇದೀನಿ, ಅದನ್ನು ಆದಷ್ಟು ಬೇಗ ನಿರ್ದೇಶನ ಮಾಡುತ್ತೇನೆ ಎನ್ನುವ ಮೂಲಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ನಟನೆ ಹಾಗೂ ನಿರ್ದೇಶನ ಮಾಡಿರುವ ಮಾಸ್ಟರ್ ಕಿಶನ್ ಮತ್ತೆ ತೆರೆ ಮೇಲೆ ಬರುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಸದ್ಯಕ್ಕೆ ನಾನು ನಿರ್ದೇಶನಕ್ಕೆ ಮಾತ್ರ ಮಾಡುವ ಮನಸ್ಸು ಮಾಡಿದ್ದೇನೆ. ಆದರೆ ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬರೋಣ ಅಂತಾ ಹೇಳುತ್ತಾರಲ್ಲ, ಹಾಗೇ ಒಳ್ಳೊಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಆಸೆ ನನಗಿದೆ. ನಮ್ಮ ಜನ ಹಾಗೂ ಎಲ್ಲರ ಹಾರೈಕೆ ಆಶೀರ್ವಾದ, ಪ್ರೋತ್ಸಾಹದಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ಮಾಡೋಣ' ಎನ್ನುವ ಭರವಸೆಯನ್ನು ಮಾಸ್ಟರ್ ಕಿಶನ್ ವ್ಯಕ್ತಪಡಿಸಿದ್ದಾರೆ.












Click it and Unblock the Notifications