ಕೇಸ್ ವಾಪಸ್ ಆದ ಬೆನ್ನಲ್ಲೇ ಗುಡ್‌ನ್ಯೂಸ್ ಕೊಡ್ತೀನಿ ಎಂದ ಮಡೆನೂರು ಮನು; ಏನದು?
ಕಾಮಿಡಿ ಕಿಲಾಡಿಗಳು ವಿನ್ನರ್ ಮಡೆನೂರು ಮನು ಅವರು ನಾಯಕನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಮುನ್ನವೇ ಜೈಲು ಸೇರಿದ್ದರು. ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ, ಅ*ತ್ಯಾಚಾರ ಕೇಸ್‌ನಲ್ಲಿ ಮನು ಬಂಧನಕ್ಕೆ ಒಳಗಾಗಿದ್ರು. ಇದೇ ಹೊತ್ತಲ್ಲಿ ಮನು ನಟರಾದ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಸಿನಿರಂಗದಿಂದ ಬ್ಯಾನ್ ಕೂಡ ಆಗಿದ್ರು. ಬಳಿಕ ಜಾಮೀನಿನ ಮೇಲೆ ಹೊರಬಂದು ಆ ಆಡಿಯೋ ನನ್ನದೇ, ನನ್ನಿಂದ ತಪ್ಪಾಯ್ತು ಕ್ಷಮಿಸಿ ಎಂದು ಬೇಡಿಕೊಂಡಿದ್ದರು. ಈಗ ಹೊಸ ಸಿಹಿಸುದ್ದಿ ಕೊಡುತ್ತೀನಿ ಎಂದು ಮನು ಸುಳಿವು ನೀಡಿದ್ದಾರೆ. ಅದೇನು ಗೊತ್ತಾ?
ಮಡೆನೂರು ಮನುಗೆ ಆಪ್ತೆಯೂ ಆಗಿದ್ದ ಮಿಂಚು ಅವರು ದೂರು ನೀಡಿದ ಹಿನ್ನೆಲೆ ಬಂಧಿಸಲಾಗಿತ್ತು. ಮನು ನಟಿಸಿದ್ದ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ರಿಲೀಸ್‌ಗೂ ಹಿಂದಿನ ದಿನವೇ ಅವರು ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಮನು ಧ್ರುವ ಸರ್ಜಾ, ಶಿವಣ್ಣ, ದರ್ಶನ್ ಅವರಿಗೆ ಕ್ಷಮೆ ಕೇಳಿದ್ದರು. ನನಗೆ ಬದುಕಲು ಇನ್ನೊಂದು ಅವಕಾಶ ಕೊಡಿ ಎಂದು ಬೇಡಿಕೊಂಡಿದ್ದರು. ಇದರ ನಡುವೆಯೇ ಮಿಂಚು ಅವರೊಂದಿಗೆ ರಾಜಿ ಮಾಡಿಕೊಂಡು ಕೇಸ್ ಕೂಡ ವಾಪಸ್ ಪಡೆಯಲಾಗಿದೆ. ಅಲ್ಲಿಗೆ ಮನುಗೆ ಇದ್ದ ದೊಡ್ಡ ಆತಂಕ ದೂರವಾಗಿದೆ.

ಮದ್ಯದ ಅಮಲಿನಲ್ಲಿ ಮನು ಶಿವಣ್ಣ, ದರ್ಶನ್ ಅವರ ಸಾವಿನ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದ್ದರಿಂದ ಮನು ಅವರನ್ನ ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಧರಿಸಲಾಯಿತು. ಮೊದಲಿಗೆ ಧ್ರುವ ಸರ್ಜಾ ಮನು ಅವರನ್ನ ಕ್ಷಮಿಸಿದ್ರು. ಬಳಿಕ ಮನು ಶಿವಣ್ಣನ ಮನೆ ಬಳಿ ಕ್ಷಮೆ ಕೇಳಲು ದಿನವಿಡೀ ಕಾದಿದ್ದರು. ದರ್ಶನ್ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮಾಡಿ ಎಲ್ಲರಿಗೂ ಕ್ಷಮೆ ಕೇಳಿದ್ದರು. ಈಗ ತನ್ನ ಮೇಲಿನ ಆರೋಪ, ಕೇಸ್‌ನಿಂದ ಹೊರಬಂದಿರುವ ಮನು ಮತ್ತೆ ಸಿನಿಮಾಗಳಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.
'ಕೆಟ್ಟ ಘಳಿಗೆ ದಾಟಿ ಬಂದಿದ್ದೇನೆ'
ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಈ ಕೇಸ್‌ನಿಂದಾಗಿ ಇಕ್ಕಟ್ಟಿಗೆ ಸಿಲುಕಿತ್ತು. ಹೀಗಾಗಿ ಇದೇ ಸಿನಿಮಾವನ್ನು ಮತ್ತೆ ರೀರಿಲೀಸ್ ಮಾಡಲು ಮನು ಮುಂದಾಗಿದ್ದಾರೆ. ಇದರ ಜೊತೆ ತಮ್ಮ ಹೊಸ ಸಿನಿಮಾ ಬಗ್ಗೆಯೂ ಸುಳಿವು ನೀಡಿದ್ದಾರೆ. ಮುಂದಿನ ತಿಂಗಳು 10ನೇ ತಾರೀಕು ನನ್ನ ಮುಂದಿನ ಚಿತ್ರದ ಟೈಟಲ್ ಅನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಕೆಟ್ಟ ಘಳಿಗೆಯನ್ನ ದಾಟಿ ನಿಮ್ಮ ಆಶೀರ್ವಾದದೊಂದಿಗೆ ಮತ್ತೆ ಬಂದಿದ್ದೇನೆ. ನನ್ನ ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ನೀವೆಲ್ಲ ಆಶೀರ್ವದಿಸಿದ್ದೀರಿ. ಮತ್ತೆ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ರಿವೀಲ್ ಮಾಡಲಿದ್ದೇನೆ ಎಂದಿದ್ದಾರೆ.

"ಕುಲದಲ್ಲಿ ಕೀಳ್ಯಾವುದೋ" ಸಿನಿಮಾ ರೀರಿಲೀಸ್ ಮಾಡುವ ದಿನಾಂಕವನ್ನು ಕೂಡ ಶೀಘ್ರದಲ್ಲೇ ಹೇಳುತ್ತೇವೆ. ನನ್ನಿಂದ ಇಡೀ ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ಮಾಪಕರಾದ ಸಂತೋಷ್ ಸರ್, ನಿರ್ದೇಶಕರಾದ ರಾಮ್ ನಾರಾಯಣ್ ಸರ್, ನನ್ನ ಗಾಡ್ ಫಾದರ್ ಯೋಗರಾಜ್ ಭಟ್ ಸರ್ ಹಾಗೂ ಕರ್ನಾಟಕದ ಜನತೆ ಎಲ್ಲರಿಗೂ ಬೇಜಾರಾಗಿದೆ. ಎಲ್ಲರಲ್ಲೂ ಕ್ಷಮೆ ಕೇಳುವೆ, ಆಶೀರ್ವಾದ ಇರಲಿ ಎಂದು ಮನು ಕೇಳಿಕೊಂಡಿದ್ದಾರೆ.












Click it and Unblock the Notifications